ಮಳೆ ನೀರಲ್ಲಿ ಕೊಚ್ಚಿಹೋದ ಇಬ್ರು ಪೊಲೀಸ್ರು, ಓರ್ವ ಪೇದೆಯ ಶವ ಪತ್ತೆ
ಪೊಲೀಸ್ ಕಾನ್ಸ್‌ಟೇಬಲ್‌ಗಳಿಬ್ಬರು ಮಳೆ ನೀರಲ್ಲಿ ಕೊಚ್ಚಿ ಹೋದ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಸಂಭವಿಸಿದೆ. ಕೊಚ್ಚಿ ಹೋಗಿದ್ದ ಓರ್ವ ಪೊಲೀಸ್ ಪೇದೆಯ ಮೃತದೇಹ ಪತ್ತೆಯಾಗಿದೆ.
ಕೊಪ್ಪಳ, (ಸೆಪ್ಟೆಂಬರ್.06): ಕರ್ನಾಟಕದಾದ್ಯಂತ ರಣ ರಕ್ಕಸ ಮಳೆಯಾಗುತ್ತಿದ್ದು, ರಾಜ್ಯದ ಹಲವೆಡೆ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಉಂಟಾಗಿದೆ. ಮಳೆಯಿಂದ ಹಲವೆಡೆ ಸಾವು-ನೊವುಗಳು ಸಹ ಸಂಭವಿಸಿವೆ.
ಹೌದು..ಪೊಲೀಸ್ ಕಾನ್ಸ್‌ಟೇಬಲ್‌ಗಳಿಬ್ಬರು ಮಳೆ ನೀರಲ್ಲಿ ಕೊಚ್ಚಿ ಹೋದ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಸಂಭವಿಸಿದೆ.
ಬಂಡಿಹಾಳ ಗ್ರಾಮ ಹೊರವಲಯದಲ್ಲಿ ಸೋಮವಾರ ತಡರಾತ್ರಿ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಪೇದೆಗಳಾದ ಮಹೇಶ್ ಮತ್ತು ನಿಂಗಪ್ಪ ನೀರಲ್ಲಿ ಕೊಚ್ಚಿಹೋಗಿದ್ದಾರೆ. ಸೋಮವಾರ ರಾತ್ರಿ ಕರ್ತವ್ಯ ಮುಗಿಸಿಕೊಂಡು ವಾಪಸ್ ಬರುವಾಗ ಬಂಡಿಹಾಳ ಗ್ರಾಮ ಹೊರವಲಯದಲ್ಲಿ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದಾರೆ.
ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ
ಓರ್ವ ಪೇದೆಯ ಶವ ಪತ್ತೆ
ಕೊಚ್ಚಿ ಹೋಗಿದ್ದ ಓರ್ವ ಪೊಲೀಸ್ ಪೇದೆಯ ಮೃತದೇಹ ಪತ್ತೆಯಾಗಿದೆ. ಕೊಪ್ಪಳದ ಬಂಡಿಹಾಳ ಬಳಿ ಹಳ್ಳದಲ್ಲಿ ಇಂದು ನಿಂಗಪ್ಪ ಹಲವಾಗಲಿ ಮೃತ ದೇಹ ಸಿಕ್ಕಿದೆ.
ಇನ್ನೊರ್ವ ಪೇದೆ ಮಹೇಶ್ ಮೃತದೇಹಕ್ಕಾಗಿ ಸ್ಥಳೀಯರು,ಅಗ್ನಿಶಾಮಕದ ದಳ,ಪೊಲೀಸ್ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ.
ವಿದ್ಯುತ್ ತಂತಿ ತಗುಲಿ ಇಬ್ಬರ ಸಾವು
ಬೆಳಗಾವಿ: ಮಳೆ ನೀರು ಸೋರದಂತೆ ತಡೆಯಲು ಮನೆಯ ಮಾಳಿಗೆ ಮೇಲೆ ತಗಡಿನ ಶೀಟ್ ಅಳವಡಿಸುವಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿರುವ ದುರಂತ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಿನ್ನೆ (ಸೆ.05) ಸಂಜೆ ನಡೆದಿದೆ.
ಸುಳಗಾ ನಿವಾಸಿ ವಿನಾಯಕ ಕೃಷ್ಣ ಕಲಖಾಂಬಕರ (25) ಹಾಗೂ ಬೆನಕನಹಳ್ಳಿ ನಿವಾಸಿ ವಿಲಾಸ ಗೋಪಾಲ ಅಗಸಗೇಕರ (57) ಮೃತ ದುರ್ದೈವಿಗಳು. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿನಾಯಕ ಅವರ ಮನೆ ಸೋರುತ್ತಿತ್ತು. ಛಾವಣಿ ಮೇಲೆ ಹೊಸ ತಗಡುಗಳನ್ನು ಹಾಕಲು ವಿನಾಯಕ ಹಾಗೂ ವಿಲಾಸ ಮನೆಯ ಮೇಲೆ ಹತ್ತಿದ್ದರು. ಈ ವೇಳೆ ಮನೆಯ ಮೇಲೆ ಹಾದು ಹೋದ ವಿದ್ಯುತ್ ತಂತಿಗೆ ತಗಡು ಸಿಲುಕಿಕೊಂಡು, ವಿದ್ಯುತ್ ಪ್ರವಹಿಸಿ, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರಲ್ಲಿ ಯುವತಿ ಬಲಿ
ಕೆಲಸ ಮುಗಿಸಿ ತನ್ನ ಆಯಕ್ಟೀವಾ ಬೈಕ್‌ಲ್ಲಿ ಹೋಗುತ್ತಿದ್ದ ಅಖಿಲಾ, ರಾತ್ರಿ 9.30ಕ್ಕೆ ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ ಸಮೀಪ ಬಂದಿದ್ದಾರೆ. ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿದ್ದರೂ, ಅದರ ಮಧ್ಯೆಯೇ ಸ್ಕೂಟರ್ ಚಲಾಯಿಸಿದ್ದಾರೆ. ನೀರು ಹೆಚ್ಚಾಗಿದ್ದರಿಂದ ಸ್ಕೂಟರ್ ಆಫ್ ಆಗಿ ಕೆಳಗೆ ಬೀಳುವಾಗ, ಸಹಾಯಕ್ಕಾಗಿ ತನ್ನ ಬಲ ಭಾಗದಲ್ಲೇ ಇದ್ದ ವಿದ್ಯುತ್ ಕಂಬವನ್ನು ಅಖಿಲಾ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಅಖಿಲಾ ಸಾವನ್ನಪ್ಪಿದ್ದಾಳೆ.
ಬೆಸ್ಕಾಂ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಯುವತಿ ಜೀವ ಕಳೆದುಕೊಂಡಿದ್ದಾರೆ. ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ, ಮಾರತ್ತಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರದಲ್ಲಿ ದುರಂತ ಘಟನೆ ನಡೆದಿದೆ.
ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ನೀರು ತುಂಬಿದೆ. ಹೀಗಾಗಿ ಜನರು ಅಥವಾ ವಾಹನ ಸವಾರರು ಓಡಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಆದಷ್ಟು ಓಡಾಟ ಕಡಿಮೆ ಮಾಡಿದರೆ ಒಳ್ಳೆಯದು. ಪ್ರವಾಹದಿಂದ ಎಲ್ಲೆಡೆ ನೀರು ತುಂಬಿದ್ದು, ವಿದ್ಯುತ್ ಕಂಬಗಳ ಬಳಿ ನಿಲ್ಲುವುದಾಗಲಿ ಅಥವಾ ಕಂಬಗಳನ್ನು ಸ್ಪರ್ಶಿಸುವುದಾಗಲಿ ಮಾಡಬೇಡಿ.