ಗದಗ: ಹೆದ್ದಾರಿ ಅಭಿವೃದ್ಧಿ ಹೆಸರಿನಲ್ಲಿ ರೈತರಿಗೆ ಅನ್ಯಾಯ
ಕಾಮಗಾರಿ ವೇಳೆ ಆಗುತ್ತಿಲ್ಲ ನಿಯಮ ಪಾಲನೆ| ಧೂಳಿನಿಂದ ಬೆಳೆಗೆ ಸಿಗದಾಯಿತು ಬೆಲೆ| ಗದಗನಿಂದ ಹೊನ್ನಾಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಮಧ್ಯ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಬೆಸೆಯುವುದು ಈ ಯೋಜನೆಯ ಉದ್ದೇಶ|
ಶಿವಕುಮಾರ ಕುಷ್ಟಗಿ
ಗದಗ(ಏ.15): ನಮ್ಮೂರ ರಸ್ತೆಯನ್ನು ಹೆದ್ದಾರಿಯನ್ನಾಗಿ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಆ ಎಲ್ಲ ಗ್ರಾಮಗಳ ರೈತರು ತಮ್ಮ ಜಮೀನು ಕಳೆದುಕೊಂಡಿದ್ದರೂ ಖುಷಿಯಿಂದಲೇ ಇದ್ದರು. ಆದರೆ ಯಾವಾಗ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಕಂಪನಿ ಕೆಲಸ ಪ್ರಾರಂಭಿಸಿತೋ ಅಂದಿನಿಂದ ಈ ಗ್ರಾಮಗಳ ರೈತರಿಗೆ ನಿದ್ದೆಯೇ ಇಲ್ಲದಂತಾಗಿದೆ!
ಗದಗನಿಂದ ಹೊನ್ನಾಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಮಧ್ಯ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಬೆಸೆಯುವುದು ಈ ಯೋಜನೆ ಉದ್ದೇಶ. 99.50 ಕೋಟಿ ವೆಚ್ಚದ ಈ ರಸ್ತೆ ಕಾಮಗಾರಿಯನ್ನು ಮಾ. 14, 2020ರಂದು ಸದ್ಭವ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿರ್ವಹಿಸಲು ಸೂಚಿಸಿದೆ. ಆದರೆ, ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಅದನ್ನು ಪಾಲಿಸದೇ ನಿತ್ಯವೂ ಕ್ಷಣ ಕ್ಷಣಕ್ಕೂ ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
ಬೆಲೆ ಕಳೆದುಕೊಂಡ ಬೆಳೆ:
ಗದಗ, ಬೆಳದಡಿ, ಶಿರುಂಜ, ಯಲಿಶಿರೂರ ಮಾರ್ಗವಾಗಿ ಸಾಗುವ ಈ ಹೆದ್ದಾರಿಯ ಅಕ್ಕ ಪಕ್ಕದಲ್ಲಿರುವ ಎಲ್ಲ ಹೊಲಗಳ ರೈತರು ಬೆಳೆಯುವುದು ತರಕಾರಿ. ಬೆಂಡೆಕಾಯಿ, ಹಿರೇಕಾಯಿ, ಬೀನ್ಸ್, ಟೊಮ್ಯಾಟೋ, ಹೂಕೋಸು, ಬಾಳೆ ಮತ್ತಿತರ ಬೆಳೆಗಳನ್ನು ಬೆಳೆಯಲಾಗಿದೆ. ರಸ್ತೆ ನಿರ್ಮಾಕ್ಕಾಗಿ ರಸ್ತೆ ಅಗೆದಿರುವುದು ಬೃಹತ್ ವಾಹನಗಳ ಸಂಚಾರದಿಂದಾಗಿ ವ್ಯಾಪಕ ಪ್ರಮಾಣದ ಧೂಳು ಏಳುತ್ತಿದೆ. ಇದರಿಂದಾಗಿ ತರಕಾರಿ ಬೆಳೆಗೆ ಬೆಲೆ ಸಿಗದಂತಾಗಿದೆ.
ಯಶವಂತಪುರ-ವಿಜಯಪುರ ರೈಲು ಪುನಃ ಪ್ರಾರಂಭ
ಪರಿಷ್ಕೃತ ಬೆಲೆ ಸಿಕ್ಕಿಲ್ಲ
ಹೆದ್ದಾರಿ ಪಕ್ಕದ ಜಮೀನುಗಳ ರೈತರಿಗೆ ಈ ಹಿಂದೆ 2017-18ರಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಮೀನಿಗೆ ನಿಗದಿ ಮಾಡಿದ ಬೆಲೆ ಅತ್ಯಂತ ಕನಿಷ್ಠವಾಗಿದೆ. ಪರಿಷ್ಕೃತ ದರ ನೀಡುವಂತೆ ಮನವಿ ನೀಡಿದ್ದರೂ ಕಂದಾಯ ಅಧಿಕಾರಿಗಳು ಮಾತ್ರ ಹಳೆಯ ದರದಲ್ಲಿಯೇ ಪರಿಹಾರ ನಿಗದಿ ಮಾಡಿ ಅದೇ ಆಧಾರದಲ್ಲಿ ಪರಿಹಾರ ನೀಡಿದ್ದು, 1 ಎಕರೆಗೂ ಹೆಚ್ಚಿನ ಹೊಲ ಕಳೆದುಕೊಂಡಿದ್ದರೂ ರೈತರಿಗೆ ಸಿಕ್ಕಿದ್ದು ಕೇವಲ 3 ಲಕ್ಷ ಪರಿಹಾರ ಮಾತ್ರ. ಹಾಗಾಗಿ, ಈ ಭಾಗದ ರೈತರೆಲ್ಲ ಸೇರಿ ಈ ವಿಷಯವಾಗಿ ನ್ಯಾಯಾಲಯದಲ್ಲಿ ದಾವೆ ಹಾಕಲು ಸಿದ್ಧತೆ ನಡೆಸಿದ್ದಾರೆ.
ಕೆಶಿಪ್ ಮೂಲಕ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಅಧಿಕಾರಿಗಳು ನಮ್ಮ ಗ್ರಾಮ ಸೇರಿದಂತೆ ಹೆದ್ದಾರಿ ಪಕ್ಕದ ಎಲ್ಲ ರೈತರಿಗೂ ಸಮಸ್ಯೆ ಮಾಡುತ್ತಿದ್ದಾರೆ. ಈ ಬಗ್ಗೆ ಗದಗ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಜಮೀನು ಹೋಗಿವೆ. ಈಗ ಉಳಿದಿರುವ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೊಲ ಕಳೆದುಕೊಂಡ ರೈತರಾದ ಮಂಜುನಾಥ ಹುಡೇದ, ಮಾರುತಿ ಚಿಗರಿ ಹೇಳಿದ್ದಾರೆ.