ಟೊಮೆಟೋ ಬೆಳೆದು ಕಣ್ಣೀರಿಟ್ಟ ರೈತರು : ಉತ್ಪಾದನೆಯಲ್ಲೂ ಏರಿಕೆ

  • ರೈತರು ಬೆಳೆದ ಟೊಮೆಟೋವನ್ನು ಮಾರುಕಟ್ಟೆಯಲ್ಲಿ ಕೇಳುವವರಿಲ್ಲ
  • ಬೆಳೆದ ಟೊಮೆಟೋವನ್ನು ರಸ್ತೆಗಳಲ್ಲಿ ಬಿಸಾಡುವ ಪರಿಸ್ಥಿತಿ
  • ತೀವ್ರ ನಷ್ಟಕ್ಕೆ ಒಳಗಾಗಿ ಕಣ್ಣೀರು ಹಾಕುತ್ತಿರುವ  ರೈತರು
farmers dump tomatoes on roads Due To prices crash  snr

ವರದಿ : ಸತ್ಯರಾಜ್‌ ಜೆ.

 ಕೋಲಾರ(ಜೂ.07):  ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ನೀರಿನಿಂದ ಭರ್ತಿಯಾದ ಅಂತರ್ಜಲವನ್ನು ಬಳಸಿಕೊಂಡು ರೈತರು ಬೆಳೆದ ಟೊಮೆಟೋವನ್ನು ಮಾರುಕಟ್ಟೆಯಲ್ಲಿ ಕೇಳುವವರಿಲ್ಲದೆ ಟೊಮೆಟೋವನ್ನು ರಸ್ತೆಗಳಲ್ಲಿ ಬಿಸಾಡುವ ಪರಿಸ್ಥಿತಿ ಉಂಟಾಗಿದೆ.

ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹದಿನೈದು ಕೆ.ಜಿ. ಬಾಕ್ಸ್‌ ಟೊಮೆಟೋ 100 ರು.ಗಳಿಗೆ ಮಾರಾಟವಾಗುತ್ತಿತ್ತು. ಈಗ ಬೆಲೆ 10 ರು.ಗಳಿಂದ ಆರಂಭಿಸಿ 50 ರು.ಗಳ ವರೆಗೆ ಮಾರಾಟವಾಗುತ್ತಿದ್ದು ರೈತರು ತೀವ್ರ ನಷ್ಟಕ್ಕೆ ಒಳಗಾಗಿ ಕಣ್ಣೀರು ಹಾಕುತ್ತಿದ್ದಾರೆ.

ಉತ್ತಮ ಬೆಳೆ, ಕುಸಿದ ಬೆಲೆ

ಅಂತರ್ಜಲದ ಸಮಸ್ಯೆಯಿಂದ ಕೊರಗುತ್ತಿದ್ದ ರೈತರಿಗೆ ಕೆ.ಸಿ.ವ್ಯಾಲಿ ನೀರು ಜೀವನಾಡಿಯಾಗಿ ಹರಿಯಿತು. ಕೊಳವೆ ಬಾವಿಗಳಲ್ಲಿ ನೀರು ಕಾಣಿಸಿಕೊಂಡು ಅದೇ ಸಂತಸದಲ್ಲಿ ರೈತರು ಟೊಮೆಟೋ ಬೆಳೆ ಇಟ್ಟರು. ಆದರೆ ಲಾಕ್‌ಡೌನ್‌ ಮತ್ತು ಹೆಚ್ಚಿನ ಇಳುವರಿಯಿಂದಾಗಿ ಇಂದು ಮಾರುಕಟ್ಟೆಯೇ ಇಲ್ಲದಂತಾಗಿದೆ. ಟೊಮೆಟೋ ಬಿಡಿಸುವ ಕೂಲಿಯೂ ಬಾರದೆ ತೋಟಗಳಲ್ಲೇ ಬಿಡುವ ಸ್ಥಿತಿ ನಿರ್ಮಾಣವಾಗಿದೆ.

ಟೊಮ್ಯಾಟೊ ಮಣ್ಣುಪಾಲು: ಸರ್ಕಾರದ ಪರಿಹಾರ ಅರೆಕಾಸಿನ ಮಜ್ಜೆಗೆ ಎಂದ ಅನ್ನದಾತ ..

ಜಿಲ್ಲೆಯಲ್ಲಿ ಸುಮಾರು 5 ಸಾವಿರ ಮಂದಿ ರೈತರು ಸುಮಾರು 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋವನ್ನು ಬೆಳೆಯುತ್ತಾರೆ.ಆದರೆ ಈ ವರ್ಷ ಕೆಸಿ.ವ್ಯಾಲಿ ನೀರಿನಿಂದ ಅಂತರ್ಜಲ ಮಟ್ಟವೃದ್ಧಿಯಾಗಿರುವುದರಿಂದ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋ ಬೆಳೆಯಲಾಗಿದೆ.

ಟೊಮೆಟೋ ಉತ್ಪಾದನೆ ಹೆಚ್ಚಳ

ಈ ಬಾರಿ ಟೊಮೆಟೋ ಬೆಳೆದ ರೈತರ ಸಂಖ್ಯೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಗೆ ಬರುವ ಟೊಮೆಟೋ ಉತ್ಪಾದನೆ ಪ್ರಮಾಣವೂ ಹೆಚ್ಚಾಗಿದೆ. ಕೋಲಾರ ಎಪಿಎಂಸಿಗೆ ಕಳೆದ ಸಾಲಿನಲ್ಲಿ ಪ್ರತಿದಿನ 18 ಸಾವಿರ ಕ್ವಿಂಟಾಲ್‌ ಟೊಮೆಟೋ ಬರುತ್ತಿತ್ತು. ಆದರೆ ಈ ವರ್ಷ ಅದು 31 ಸಾವಿರ ಕ್ವಿಂಟಾಲ್‌ಗೆ ಏರಿಕೆಯಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ತೀವ್ರವಾಗಿ ಕುಸಿಯಲು ಕಾರಣವಾಗಿದೆ ಎಂದು ಎಪಿಎಂಸಿ ಮಾರುಕಟ್ಟೆಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯಲ್ಲಿ ರೈತರಿಗೆ ಮಾಹಿತಿ ಕೊರತೆ ಇರುವುದೇ ಈ ಬೆಲೆ ಏರಿಳಿತಕ್ಕೆ ಕಾರಣ, ರೈತರು ಯಾವ ಬೆಳೆ ಎಷ್ಟುಬೆಳೆಯಬೇಕು ಯಾವ ಸಂದರ್ಭದಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಎನ್ನುವ ಮಾಹಿತಿ ಕೊಡುವಲ್ಲಿ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಗಳು ವಿಫಲವಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ಈ ಕಾರಣದಿಂದಾಗಿ ರೈತರು ಟೊಮೆಟೋ ಕೃಷಿಯನ್ನೇ ಅವಲಂಬಿಸಿದ್ದಾರೆ. ಇದರಿಂದಾಗಿ ಉತ್ಪಾದನೆ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತಾಗಿ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ನೆರೆ ರಾಜ್ಯ, ದೇಶಗಳಿಗೆ ಸಾಗಣೆ ಸ್ಥಗಿತ

ಕೋಲಾರದ ಟೊಮೆಟೋ ಹೊರ ರಾಜ್ಯ ಮತ್ತು ಹೊರ ದೇಶಗಳಿಗೂ ಸಾಗಣೆ ಆಗುತ್ತದೆ, ನೆರೆಯ ಆಂಧ್ರಪ್ರದೇಶ,ತಮಿಳುನಾಡು, ಮಹಾರಾಷ್ಟ್ರ,ಪಶ್ಚಿಮಬಂಗಾಳ, ದೆಹಲಿ ಮುಂತಾದ ರಾಜ್ಯಗಳಿಗೆ ಸಾಗಣೆ ಆಗುತ್ತದೆ. ಅಲ್ಲದೆ ಪಾಕಿಸ್ತಾನ ಹಾಗು ಬಾಂಗ್ಲಾ ದೇಶಗಳಿಗೆ ಇಲ್ಲಿನ ಟೊಮೆಟೋ ರಫ್ತು ಆಗುತ್ತದೆ. ಆದರೆ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆವ್ಯವಸ್ಥೆ ಇಲ್ಲದೆಯೂ ಬೆಲೆ ಕುಸಿತಗೊಂಡಿದೆ.

ಕೋಲಾರದ ಟೊಮೆಟೋಗೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಬೇಡಿಕೆ ಇದೆ, ಜಿಲ್ಲೆಯಲ್ಲಿ ಬೆಳೆಯುವ ಅರ್ಧದಷ್ಟುಮಾಲು ಈ ಎರಡು ರಾಜ್ಯಗಳಿಗೆ ಸರಬರಾಜಾಗುತ್ತದೆ ಆದರೆ ಕೊರೋನಾ ಹಿನ್ನೆಲೆಯಲ್ಲಿ ಉಂಟಾಗಿರುವ ಲಾಕ್‌ಡೌನ್‌ಗಳ ಹಿನ್ನೆಲೆಯಲ್ಲಿ ಬಿಸಿನೆಸ್‌ ಇಲ್ಲದೆ ಟೊಮೆಟೋ ಬೆಲೆ ಕುಗ್ಗಿದೆ.

ನಿಗದಿತ ಬೆಳೆ ಪದ್ಧತಿ ಜಾರಿಗೆ ಬರಬೇಕು

ಲಾಕ್‌ಡೌನ್‌ ವೇಳೆ ಹೋಟೆಲ್‌, ಮದುವೆ, ಸಭೆ ಸಮಾರಂಭಗಳು ಇಲ್ಲದಿರುವುದು, ಸಣ್ಣ ಪುಟ್ಟವ್ಯಾಪಾರಸ್ಥರು ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುವವರು ಟೊಮೆಟೋ ಖರೀದಿ ಮಾಡದೆ ಇರುವುದರಿಂದಲೂ ಟೊಮೆಟೋಗೆ ಬೆಲೆ ಇಲ್ಲದಿರುವುದಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ. ಅಲ್ಲದೆ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಗಳು ನಿಗದಿತ ಬೆಳೆ ಪದ್ಧತಿಯನ್ನು ಅನುಷ್ಠಾನಕ್ಕೆ ತರದಿದ್ದರೆ ರೈತರು ಮತ್ತಷ್ಟುನಷ್ಟವನ್ನು ಅನುಭವಿಸಬೇಕಾಗುತ್ತದೆ.

ಜಿಲ್ಲೆಯಲ್ಲಿ ಟೊಮೆಟೋ ಬೆಳೆಯುವವರ ಸಂಖ್ಯೆ ಈ ಬಾರಿ ಹೆಚ್ಚಾಗಿದೆ, ಕೋಲಾರ ಎಪಿಎಂಸಿಗೆ 18 ಸಾವಿರ ಕ್ವಿಂಟಾಲ್‌ ಬರುತ್ತಿದ್ದ ಟೊಮೆಟೋ ಈ ಬಾರಿ 31 ಸಾವಿರ ಕ್ವಿಂಟಾಲ್‌ ಆಗಿದೆ, ಜತೆಗೆ ಲಾಕ್‌ಡೌನ್‌ ಹಿನ್ನೆಲೆ¿åಲ್ಲಿ ಟೊಮೆಟೋ ಸರಬರಾಜು ಆಗದೆ ಬೆಲೆ ಕುಸಿಯಲು ಕಾರಣವಾಗಿದೆ, ಹೋಟೆಲ್‌, ಸಭೆ ಸಮಾರಂಭಗಳು ಇಲ್ಲದೆ ಇರುವುದರಿಂದ ಬೆಲೆ ಕಡಿಮೆಯಾಗಿದೆ.

ರವಿಕುಮಾರ್‌, ಕಾರ್ಯದರ್ಶಿ ಎಪಿಎಂಸಿ, ಕೋಲಾರ.

Latest Videos
Follow Us:
Download App:
  • android
  • ios