ಹುಬ್ಬಳ್ಳಿ(ನ.22): ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಹಾಗೂ ಎಲ್ಲ 25 ಸಂಸದರು ಈ ರಾಜ್ಯದವರೆಂಬ ಭಾವನೆ ಇಟ್ಟುಕೊಂಡು ಮಹದಾಯಿ ನೀರು ತರಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ನಾವು ಸಂಸತ್‌ ನಲ್ಲಿ ನಮ್ಮ ರಕ್ತ ಹರಿಸಿ ಮಹದಾಯಿ ನೀರು ತರುತ್ತೇವೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಅವರು ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣಿಗಳು ರೈತರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಮಹದಾಯಿ ಸಮಸ್ಯೆ, ಹೋರಾಟವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ. ಇದನ್ನು ಬಿಟ್ಟು ನಿಜವಾದ ರೈತ ಕಾಳಜಿಯಿಂದ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಪ್ರಯತ್ನಗಳು ನಡೆಯಲಿ. ಇಲ್ಲದಿದ್ದರೆ ನಾವು ಪಾರ್ಲಿಮೆಂಟಿನಲ್ಲಿ ರಕ್ತ ಹರಿಸಿ ನೀರು ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಸೆ.25 ರಿಂದ ಮೂರು ದಿನಗಳ ಕಾಲ ಬೆಂಗಳೂರಲ್ಲಿ ಮಹದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಲು ರಾಜ್ಯಪಾಲರಾದ ವಜುಬಾಯಿವಾಲಾ ಅವರನ್ನು ಭೇಟಿಯಾಗಲು ತೆರಳಿದ್ದೆವು. ಇದಕ್ಕೂ ಮುನ್ನ ರಾಜ್ಯಪಾಲರಿಗೆ ಲಕ್ಷಾಂತರ ಪತ್ರ ಬರೆದು ಮಧ್ಯಪ್ರವೇಶಕ್ಕೆ ಒತ್ತಾಯಿಸಲಾಗಿತ್ತು. ಆದರೆ, ಅವರು ತಮ್ಮ ಸಮುದಾಯದ ಜನರನ್ನ ಭೇಟಿಯಾಗಲು ಹೋಗುತ್ತಿದ್ದರೆ ವಿನಃ ಈ ರಾಜ್ಯದ ರಾಜ್ಯಪಾಲರಾಗಿ ಇಲ್ಲಿನ ರೈತರ ಅಳಲು ಬರದಿರುವುದು ದುರಂತ ಎಂದು ಹೇಳಿದ್ದಾರೆ. 

ಆದರೂ ರಾಜ್ಯಪಾಲರ ಕಚೇರಿಯ ಅಧಿಕಾರಿಗಳಿಗೆ ಮನವಿ ನೀಡಿ ಬಂದಿದ್ದೇವೆ. ಅದಾದ ಬಳಿಕ ರಾಜ್ಯಪಾಲರು ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂಬ ಕುರಿತು ಮಾಹಿತಿ ಒದಗಿಸಬೇಕು. ಇದಕ್ಕೂ ಸ್ಪಂದಿಸದಿದ್ದರೆ ಅವರ ಮುಖ್ಯ ಕಾರ್ಯದರ್ಶಿಗಳ ಮೇಲೆ ಮಾಹಿತಿ ಒದಗಿಸಲು ರಿಟ್ ಪಿಟಿಶನ್ ಹಾಕಲಾಗುವುದು ಎಂದು ಹೇಳಿದ್ದಾರೆ.