Asianet Suvarna News Asianet Suvarna News

ಭಕ್ತ ಸಾಗರದ ನಡುವೆ ರಥೋತ್ಸವ: ಕೊಟ್ಟೂರೇಶ್ವರನ ಜತೆಗೆ ದೇವರಾದ ಪುನೀತ್ ರಾಜ್‍ಕುಮಾರ್...!

*  ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ನೆರೆವೇರಿದ ಜಾತ್ರೆ 
*  70 ಅಡಿ ಎತ್ತರದ ರಥ ಎಳೆದು ಸಂಭ್ರಮಿಸಿದ ಭಕ್ತರು
*  ಕೊರೋನಾ ಕಾರ್ಮೋಡದ ನಡುವೆ ಲಕ್ಷಾಂತರ ಭಕ್ತರ ದರ್ಶನ
 

Fans Shows Puneeth Rajkumar Photo During Kottureshwara Fair in Vijayanagara grg
Author
Bengaluru, First Published Feb 26, 2022, 9:28 AM IST

ಜಿ. ಸೋಮೇಶೇಖರ

ಕೊಟ್ಟೂರು(ಫೆ.26):  ಅಸಂಖ್ಯಾತ ಭಕ್ತರ(Devotees) ಆರಾಧ್ಯದೈವ ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವ(Kottureshwara Fair) ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ಶುಕ್ರವಾರ ಸಂಜೆ 5.4ಕ್ಕೆ ಸಂಭ್ರಮದಿಂದ ನೆರೆವೇರಿತು.

ಕೊಟ್ಟೂರೇಶ್ವರ ದೊರೆಯೇ ನಿನಗಾರು ಸರಿಯೇ, ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್‌! ಕೊಟ್ಟೂರೇಶ್ವರ ಮಹಾರಾಜ್‌ ಕೀ ಜೈ ಎಂಬ ಭಕ್ತರ ಉದ್ಘೋಷದ ನಡುವೆ 70 ಅಡಿ ಎತ್ತರದ ತೇರು ಎಳೆದು ಭಕ್ತರು ಪುನೀತರಾದರು.
ಕೋವಿಡ್‌(Covid-19) ನಿಯಂತ್ರಣದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹೊರಗಿನ ಭಕ್ತರ ನಿಷೇಧ ಮಾಡಿತ್ತು. ರಥೋತ್ಸವ ಪ್ರತಿ ವರ್ಷದಂತೆ ಜರುಗಿ ನಂತರ ತೇರು ಬಜಾರ್‌ನ ತನ್ನ ಜಾಗದಲ್ಲಿ ಸಂಜೆ 6.1ಕ್ಕೆ ನಿಲುಗಡೆಗೊಂಡಿತು. ಈ ಬೆಳವಣಿಗೆಯಿಂದ ಸಂಭ್ರಮಿಸಿದ ಭಕ್ತರು ರಥೋತ್ಸವ ಪೂರ್ಣ ಪ್ರಮಾಣದಲ್ಲಿ ಸಾಗಿತಲ್ಲ ಎಂದು ಸಂತಸ ವ್ಯಕ್ತಪಡಿಸಿ ನಿಟ್ಟಿಸಿರು ಬಿಟ್ಟರು.

Fans Shows Puneeth Rajkumar Photo During Kottureshwara Fair in Vijayanagara grg

ರಾಜ್ಯದ ಪ್ರಸಿದ್ಧ ರಥೋತ್ಸವಗಳಲ್ಲಿ ತನ್ನದೇ ಆದ ಹಿರಿಮೆ ಗರಿಮೆಯೊಂದಿಗೆ ಶ್ರೇಷ್ಠತೆಯನ್ನು ಪಡೆದಿರುವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಪ್ರಾರಂಭಗೊಳ್ಳುತ್ತಿದ್ದಂತೆ ಸೇರಿದ್ದ ಜನಸ್ತೋಮ ರಥೋತ್ಸವವನ್ನು ಮಿಣಿಯಿಂದ ಎಳೆದೊಯ್ಯಲು ಮುಗಿಬಿದ್ದರು. ಪ್ರತಿ ವರ್ಷದಂತೆ ಮೂಲಾ ನಕ್ಷತ್ರವಿರುವ ಘಳಿಗೆಯಲ್ಲಿ 70 ಅಡಿ ಎತ್ತರದ ರಥೋತ್ಸವ ರಾಜಗಾಂಭೀರ‍್ಯದೊಂದಿಗೆ ತೇರು ಬಯಲಿನ​ಲ್ಲಿ ಸಾಗಿತು. ಇದಕ್ಕೂ ಮೊದಲು ಸ್ವಾಮಿಯನ್ನು ಮಧ್ಯಾಹ್ನದ ಪೂಜಾ ಕೈಂಕರ್ಯದ ನಂತರ ಮೂಲ ಹಿರೇಮಠದಿಂದ ಪ್ರಧಾನ ಧರ್ಮಕರ್ತ ಸಿ.ಎಚ್‌.ಎಂ. ಗಂಗಾಧರಯ್ಯ ಮತ್ತು ಪೂಜಾ ಬಳಗದವರು ಸಕಲ ಬಿರುದಾವಳಿಗಳೊಂದಿಗೆ ಹೊರ ತಂದು ಬೆಳ್ಳಿ ಪಲ್ಲಕ್ಕಿಯಲ್ಲಿ ಆಸೀನಪಡಿಸಿ ಸಂಭ್ರಮದ ಮೆರವಣಿಗೆ ಕೈಗೊಂಡರು.

ದಲಿತ ಮಹಿಳೆ ಆರತಿ:

ಆಕರ್ಷಕ ಸಮಾಳ, ಲಯಬದ್ಧ ನಂದಿಕೋಲು ಕುಣಿತದ ನಿನಾದದೊಂದಿಗೆ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಗಾಂಧಿ ವೃತ್ತದ ಬಳಿ ಬರುತ್ತಿದ್ದಂತೆ ಶ್ರೀಸ್ವಾಮಿಗೆ ಆರತಿ ಬೆಳಗುವ ಕಾರಣಕ್ಕಾಗಿ ಕಳೆದ 3 ದಿನಗಳಿಂದ ಹರಕೆ ಹೊತ್ತು ಉಪವಾಸ ವ್ರತ ಕೈಗೊಂಡಿದ್ದ ದಲಿತ ಮಹಿಳೆ(Dalit Women) ದುರಗಮ್ಮ ಶ್ರೀಸ್ವಾಮಿಗೆ ಕಳಸದೊಂದಿಗೆ ಧೂಪದಾರತಿ ಬೆಳಗಿದಳು. ನಂತರ ಪಲ್ಲಕ್ಕಿ ಉತ್ಸವ ತೇರು ಬಜಾರ ಮೂಲಕ ಸಾಗಿ ತೇರು ಬಯಲು ತಲುಪುತ್ತಿದ್ದಂತೆಯೇ ರಥದ ಸುತ್ತಲೂ ಧರ್ಮಕರ್ತ ಬಳಗ ಬೆಳ್ಳಿ ಪಲ್ಲಕ್ಕಿಯಲ್ಲಿ ಆಸೀನರಾಗಿದ್ದ ಸ್ವಾಮಿಯ ಮೂಲ ಮೂರ್ತಿಯೊಂದಿಗೆ 5 ಸುತ್ತು ಪ್ರದಕ್ಷಿಣೆ ಹಾಕಿ ನಂತರ ರಥದ ಒಳಗೆ ಸ್ವಾಮಿಯನ್ನು ಏಣಿಯ ಮೂಲಕ ಕೊಂಡೊಯ್ದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿದ್ದಂತೆ ಜನತೆ ಜೈಕಾರ ಕೂಗಿ ಕೈಮುಗಿದು ನಮಸ್ಕರಿಸಿದರು.

ಪೊಲೀ​ಸರ ಹರ ಸಾಹಸ:

ಈ ಬಾರಿ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆ ಭಕ್ತರು ಪಾಲ್ಗೊಳ್ಳುವುದನ್ನು ತಡೆಯಲು ಪೊಲೀಸರು(Police) ತೇರು ಬಯಲು ಸುತ್ತಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಬಯಲೊಳಗೆ ಬರದಂತೆ ಕಟ್ಟೆಚ್ಚರ ವಹಿಸಿದ್ದರು. ಆದರೆ, ಜನರು ಬ್ಯಾರಿಕೇಡ್‌ಗಳನ್ನು ಮುರಿದು ತೇರು ಬಯಲೊಳಗೆ ನುಗ್ಗಿದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಕರ್ತವ್ಯದುದ್ದಕ್ಕೂ ಹರ ಸಾಹಸ ಪಟ್ಟರು. ಕೂಡ್ಲಿಗಿ ಡಿವೈಎಸ್‌ಪಿ ಜಿ. ಹರೀಶ್‌, ಹರಪನಹಳ್ಳಿ ಡಿವೈಎಸ್‌ಪಿ ಹಾಲಮೂರ್ತಿರಾವ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಸೋಮಶೇಖರ್‌, ಮತ್ತಿತರ ಪೊಲೀಸ್‌ ಅಧಿಕಾರಿಗಳು ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ಆಯೋಜಿಸಿ ಯಾವುದೇ ಗದ್ದಲ ಗಲಾಟೆಯಾಗದಂತೆ ಕ್ರಮ ಕೈಗೊಂಡರು.
ಸಂಸದ ವೈ. ದೇವೇಂದ್ರಪ್ಪ, ಶಾಸಕ ಎಸ್‌. ಭೀಮಾನಾಯ್ಕ, ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್‌. ಪ್ರಕಾಶ್‌ ರಾವ್‌ ಸೇರಿದಂತೆ ಅನೇಕ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಚಿತ್ರವಿಚಿತ್ರ ರೀತಿಯಲ್ಲಿ ಭಕ್ತರ ಹರಕೆ 

ಕೊಟ್ಟೂರು ರಥೋತ್ಸವದಲ್ಲಿ ಚಿತ್ರವಿಚಿತ್ರ ರೀತಿಯಲ್ಲಿ ಭಕ್ತರ ಹರಕೆ ಮತ್ತು‌ ಪುನೀತ್ ಮೇಲಿನ ಅಭಿಮಾನ ಅನಾವರಣಗೊಂಡಿದೆ. ಹೌದು,  ರಥೋತ್ಸವದಲ್ಲಿ ಅಭಿಮಾನಿಗಳು(Fans) ಪುನೀತ್ ರಾಜ್‍ಕುಮಾರ್(Puneeth Rajkumar) ಫೋಟೋ ಹಿಡಿದು ಓಡಾಡಿದ್ದಾರೆ.  

Fans Shows Puneeth Rajkumar Photo During Kottureshwara Fair in Vijayanagara grg

ಅಪ್ಪು ಫೋಟೋಜಾತ್ರೆಯಲ್ಲಿ ಹಿಡಿದು ಅಭಿಮಾನ ಮೆರೆಯೋದೊಂದು ಕಡೆಯಾದ್ರೆ, ದೊಡ್ಮನೆ ಹುಡ್ಗನಿರೋ ಬಾವುಟವೂ ಕೂಡ ಹಾರಾಡಿದೆ. ರಥಕ್ಕೆ ಎಸೆಯೋ ನನ್ನ ಲಕ್ಷ್ಮೀ (ಗೆಳತಿ) ನನಗೆ ಸಿಗಲಿ ಅಂತ ಯುವಕನೊಬ್ಬ ಬಾಳೆಹಣ್ಣಿನ ಮೇಲೆ ಬರೆದು ದೇವರಿಗೆ ನಿವೇದನೆ ಮಾಡಿದ ಪ್ರಸಂಗವೂ ನಡೆದಿದೆ. 

ಇನ್ನು ಮತ್ತೋರ್ವ ಭಕ್ತ ನಾನು ಆರ್ಮಿಗೆ ಸೇರೋ ಕನಸು ಈಡೇರಲಿ. ನನ್ನ ಗೆಳತಿ ನನಗೆ ಸಿಗಲಿ ಅಂತ ಬಾಳೆ ಹಣ್ಣಿನ ಮೇಲೆ ಬರೆದು ರಥೋತ್ಸವಕ್ಕೆ ಬಾಳೆ ಹಣ್ಣು ಎಸೆದಿದ್ದಾನೆ.  ಮತ್ತೊಂದು ಕಡೆ ಈ ಬಾರಿ ಹಡಗಲಿಯ ಶಾಸಕರಾಗಿ ಚಂದ್ರಾನಾಯ್ಕ್ ಆಯ್ಕೆಯಾಗಲಿ ಅಂತ ಬಾಳೆಹಣ್ಣಿನ ಮೇಲೆ ಬರೆದು ಎಸೆದಿದ್ದಾನೆ. 
 

Follow Us:
Download App:
  • android
  • ios