Asianet Suvarna News Asianet Suvarna News

ಹೊಸ ರೇಷನ್‌ ಕಾರ್ಡ್‌ಗೆ ಕಾಯ್ತಿವೆ ಕುಟುಂಬಗಳು: ಗೃಹಲಕ್ಷ್ಮಿ ಸೇರಿ ಸರ್ಕಾರದ ಯೋಜನೆಗಳಿಂದ ವಂಚಿತ..!

ರಾಜ್ಯ ಸರ್ಕಾರಕ್ಕೆ ಹೊಸ ಪಡಿತರ ಚೀಟಿ ವಿತರಣೆ ದೊಡ್ಡ ತಲೆನೋವಾಗಿದೆ. ಈಗಾಗಲೇ ರಾಜ್ಯದಲ್ಲಿ ಅಂದಾಜನ್ನು ಮೀರಿ ಬಿಪಿಎಲ್‌ ಕಾರ್ಡ್‌ಗಳು ವಿತರಣೆಯಾಗಿವೆ. ಒಂದು ಕಡೆ ಹೊಸ ರೇಷನ್ ಕಾರ್ಡ್‌ಗೆ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದು ಕಡೆ ಅನರ್ಹರು ಕೂಡ ಬಿಪಿಎಲ್‌ ಪಡಿತರ ಚೀಟಿ ಪಡೆದು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಅವರನ್ನು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದೆ. ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಲಕ್ಷಾಂತರ ಪಡಿತರ ಚೀಟಿ ರದ್ದು ಪಡಿಸಲಾಗಿದೆ.

Families Waiting for New Ration Card in Karnataka grg
Author
First Published Mar 8, 2024, 1:29 PM IST

ಮಹೇಶ ಆರಿ

ಮಹಾಲಿಂಗಪುರ(ಮಾ.08):  ಕಳೆದ ಒಂದು ವರ್ಷದಿಂದ ರೇಷನ್ ಕಾರ್ಡ್‌ ವಿತರಣೆ ಆರಂಭ ಆಗದೇ ಇರುವುದರಿಂದ ಪಡಿತರ ಚೀಟಿಯಿಂದ ವಂಚಿತರಾದ ಅನೇಕ ಕುಟುಂಬಗಳು ಸರ್ಕಾರದ ಅನೇಕ ಯೋಜನೆಗಳಿಂದ ವಂಚಿತರಾಗುತ್ತಿದ್ದು, ಹೊಸ ಪಡಿತರ ಚೀಟಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪಡಿತರ ಚೀಟಿ ಈಗ ಕೇವಲ ದಾಖಲೆಯಾಗಿ ಮಾತ್ರ ಉಳಿದಿಲ್ಲ. ಗೃಹಲಕ್ಷ್ಮೀ ಯೋಜನೆ, ಉಜ್ವಲ ಯೋಜನೆ ಸೇರಿದಂತೆ ಸರ್ಕಾರದ ಹಲವು ಯೋಜನೆಗಳಿಗೆ ಮಾನದಂಡವಾಗಿಯೂ ಬಳಕೆಯಾಗುತ್ತಿದೆ.

ಸರ್ಕಾರಕ್ಕೆ ತಲೆನೋವಾದ ಹೊಸ ಕಾರ್ಡ್ ವಿತರಣೆ:

ರಾಜ್ಯ ಸರ್ಕಾರಕ್ಕೆ ಹೊಸ ಪಡಿತರ ಚೀಟಿ ವಿತರಣೆ ದೊಡ್ಡ ತಲೆನೋವಾಗಿದೆ. ಈಗಾಗಲೇ ರಾಜ್ಯದಲ್ಲಿ ಅಂದಾಜನ್ನು ಮೀರಿ ಬಿಪಿಎಲ್‌ ಕಾರ್ಡ್‌ಗಳು ವಿತರಣೆಯಾಗಿವೆ. ಒಂದು ಕಡೆ ಹೊಸ ರೇಷನ್ ಕಾರ್ಡ್‌ಗೆ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದು ಕಡೆ ಅನರ್ಹರು ಕೂಡ ಬಿಪಿಎಲ್‌ ಪಡಿತರ ಚೀಟಿ ಪಡೆದು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಅವರನ್ನು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದೆ. ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಲಕ್ಷಾಂತರ ಪಡಿತರ ಚೀಟಿ ರದ್ದು ಪಡಿಸಲಾಗಿದೆ.

ಜೈ ಶ್ರೀರಾಮ್ ಎಂದರೆ ಊಟ ಸಿಗುತ್ತಾ? ನೌಕರಿ ಸಿಗುತ್ತಾ?: ಸಚಿವ ತಿಮ್ಮಾಪುರ

ಆದರೂ, ಅನೇಕ ಅನರ್ಹ ಕುಟುಂಬಗಳ ಪತ್ತೆ ಸಾಧ್ಯವಾಗುತ್ತಿಲ್ಲ. ಅವಿಭಕ್ತ ಕುಟುಂಬವಾಗಿದ್ದರೂ ದಂಪತಿಗೆ ಒಂದೊಂದು ಪ್ರತ್ಯೇಕ ಬಿಪಿಎಲ್‌ ಪಡಿತರ ಚೀಟಿ ಪಡೆದ ಪರಿಣಾಮ ಒಂದೇ ಕುಟುಂಬಕ್ಕೆ ಮೂರ್ನಾಲ್ಕು ಬಿಪಿಎಲ್‌ ಚೀಟಿಗಳಿವೆ. ಅಲ್ಲದೆ, ಬಿಪಿಎಲ್‌ ಪಡಿತರ ಚೀಟಿಗೆ ಜಮೀನು, ಕುಟುಂಬದ ಆದಾಯ ಆಧಾರವಾಗಿದೆ. ಅನೇಕರು ಜಮೀನು ಇಲ್ಲದಿದ್ದರೂ ವ್ಯಾಪಾರ ಸೇರಿ ಬೇರೆ ಮೂಲಗಳಿಂದ ಸಾಕಷ್ಟು ಆದಾಯ ಹೊಂದಿದ್ದರೂ ಜಮೀನು ಕಡಿಮೆ ಅಥವಾ ಇಲ್ಲವೆಂಬ ಕೋಟಾದಲ್ಲಿ ಪಡಿತರ ಚೀಟಿ ಪಡೆದಿದ್ದಾರೆ. ಇಂತವರನ್ನು ಗುರುತಿಸುವುದು ಸರ್ಕಾರಕ್ಕೆ ಸವಾಲಾಗಿದೆ.

ಬಡತನ ರೇಖೆಗಿಂತ ಕೆಳಗಿದ್ದರೂ ಸಿಗದ ಬಿಪಿಎಲ್‌ ಕಾರ್ಡ್:

ಹಲವಾರು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದರೂ ಬಿಪಿಎಲ್‌ ಪಡಿತರ ಚೀಟಿ ಸಿಗದ ಕಾರಣ ಸರ್ಕಾರದ ಅನೇಕ ಯೋಜನೆಗಳು ಇವರ ಕೈತಪ್ಪುವ ಸಾಧ್ಯತೆಗಳಿವೆ. ಜಮೀನು, ಆದಾಯ ಕಡಿಮೆ ಇರುವ ಈ ಹಿಂದೆ ಅವಿಭಕ್ತ ಕುಟುಂಬದಲ್ಲಿದ್ದ ಅನೇಕರು ಮದುವೆಯಾಗಿ ಪತ್ನಿ, ಮಕ್ಕಳೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದರೂ ಹೊಸ ಪಡಿತರ ಚೀಟಿ ಸಿಗುತ್ತಿಲ್ಲ. ಆ ಕುಟುಂಬಕ್ಕೆ ಒಂದೇ ಪಡಿತರ ಚೀಟಿ ಇದೆ. ಹೀಗಾಗಿ ಅವರಿಗೆ ಗೃಹಲಕ್ಷ್ಮೀ, ಉಜ್ವಲ ಯೋಜನೆಗಳ ಪ್ರಯೋಜನ ಸಿಗುತ್ತಿಲ್ಲ. ಕಾರಣ, ಪಡಿತರ ಚೀಟಿಯಲ್ಲಿ ಒಬ್ಬರಿಗೆ ಮಾತ್ರ ಸಿಗುತ್ತಿರುವುದರಿಂದ ಕುಟುಂಬದಲ್ಲಿಯೇ ವೈಮನಸ್ಸು ಹುಟ್ಟುಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಛಾಪಾ ಕಾಗದ ದರ ಐದು ಪಟ್ಟು ಹೆಚ್ಚಳ: ಸಿದ್ದು ಸರ್ಕಾರಕ್ಕೆ ಸಾರ್ವಜನಿಕರ ಹಿಡಿಶಾಪ..!

ತಮ್ಮ ಕಣ್ಮುಂದೆಯೇ ಅನೇಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ₹ 2000, ರೇಶನ್‌ ಹಣ ಪಡೆಯುತ್ತಿರುವುದನ್ನು ಕಂಡು ಹೊಸ ಪಡಿತರ ಚೀಟಿ ವಿತರಿಸದ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. 
ಅನೇಕ ಕುಟುಂಬಗಳಲ್ಲಿ ಸಹೋದರರ ಮಧ್ಯೆ ಬಿರುಕು ಮೂಡಿ ಬೇರೆ ಆಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಆದರೆ, ಒಂದೇ ಪಡಿತರ ಚೀಟಿ ಇರುವುದರಿಂದ ಗೃಹಲಕ್ಷ್ಮೀಯಂತಹ ಯೋಜನೆ ಒಬ್ಬರಿಗೆ ಮಾತ್ರ ಸಿಗುತ್ತಿದೆ. ಇದರಿಂದ ಕುಟುಂಬದಲ್ಲೇ ಕಲಹ ತಲೆದೋರುವಂತೆ ಮಾಡಿದೆ. ಸರ್ಕಾರ ಬೇಗನೆ ಹೊಸ ಪಡಿತರ ಚೀಟಿ ವಿತರಿಸಬೇಕು ಎಂದು ಮಹಾಲಿಂಗಪುರ ಆನ್ ಲೈನ್ ಸೆಂಟರ್‌ ಮಾಲೀಕ ಮುನ್ನಾ ಹೇಳಿದ್ದಾರೆ. 

ಈಚೆಗೆ ಅಧಿವೇಶನದಲ್ಲಿ ಒಂದು ತಿಂಗಳ ಒಳಗೆ ಹೊಸ ರೇಷನ್‌ ಕಾರ್ಡ್‌ ಕೊಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಈ ಸರ್ಕಾರದಲ್ಲಿ ಯಾವುದೂ ಆಗುತ್ತಿಲ್ಲ. ಸರಿಯಾದ ವ್ಯವಸ್ಥೆ ಇಲ್ಲ. ಶಾಸಕರಿಗೆ ಅನುದಾನ ಇಲ್ಲ, ಗುತ್ತಿಗೆದಾರರ ಬಿಲ್‌ ಕೊಡುತ್ತಿಲ್ಲ. ಆದಷ್ಟು ಬೇಗ ಹೊಸ ರೇಷನ್‌ ಕಾರ್ಡ್‌ ನೀಡಲು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರುವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ. 

Follow Us:
Download App:
  • android
  • ios