ESI Hospital Bengaluru : 15 ತಿಂಗಳು ಶವಾಗಾರದಲ್ಲೇ ಕೋವಿಡ್ ಶವ ಕೊಳೆಸಿದ್ದಕ್ಕೆ ಸಿಡಿದೆದ್ದ ಕುಟುಂಬಸ್ಥರು

  •  15 ತಿಂಗಳು ಶವಾಗಾರದಲ್ಲೇ ಕೋವಿಡ್ ಶವ ಕೊಳೆಸಿದ್ದಕ್ಕೆ ಸಿಡಿದೆದ್ದ ಕುಟುಂಬಸ್ಥರು
  • ಆಸ್ಪತ್ರೆ, ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ
  •  ಅಂದು ಕೋವಿಡ್‌ ಕಾರಣ ನೀಡಿ ಶವವನ್ನೂ ನೋಡಲೂ ಬಿಡದೇ, ಇಂದು ಮೂಳೆ ನೀಡಲು ಬಂದಿದ್ದಕ್ಕೆ ಕಿಡಿ
     
Families Protest  After Dead bodies of COVID 19 victims found  rotting' in Bengaluru ESI hospital snr

ಬೆಂಗಳೂರು (ನ.30):  ರಾಜಾಜಿನಗರ ಇಎಸ್‌ಐ  ಆಸ್ಪತ್ರೆಯ (Rajajinagar ESI hospital) ಶವಾಗಾರದಲ್ಲಿ ಕೊರೋನಾ (Corona) ಸೋಂಕಿನಿಂದ ಮೃತಪಟ್ಟಇಬ್ಬರ ಮೃತದೇಹಗಳು 15 ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಸ್ಪತ್ರೆ (Hospital) ಹಾಗೂ ಪಾಲಿಕೆ ವಿರುದ್ಧ ಮೃತರ ಕುಟುಂಬದ (family) ಸದಸ್ಯರು ಪ್ರತಿಭಟನೆ (Protest) ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.  ಕೊರೋನಾ (Corona)  ಮೊದಲ ಅಲೆಯಲ್ಲಿ ಸೋಂಕಿತರಾಗಿ ಚಿಕಿತ್ಸೆ ಫಲಿಸದೆ ಚಾಮರಾಜಪೇಟೆಯ ದುರ್ಗಾ ಹಾಗೂ ಕೆ.ಪಿ.ಅಗ್ರಹಾರದ ಮುನಿರಾಜು ಮೃತಪಟ್ಟಿದ್ದರು. ತಮ್ಮ ಕುಟುಂಬ ಸದಸ್ಯರ ಮೃತದೇಹಗಳು ಪತ್ತೆಯಾದ ವಿಚಾರ ತಿಳಿದು ವಿಕ್ಟೋರಿಯಾ ಆಸ್ಪತ್ರೆ ಬಳಿ ಜಮಾಯಿಸಿದ ಸಂಬಂಧಿಕರು, ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಕಿಡಿಕಾರಿದರು.

ಈ ಪ್ರತಿಭಟನೆ ವಿಷಯ ತಿಳಿದು ಆಸ್ಪತ್ರೆಗೆ (hospital) ಧಾವಿಸಿದ ರಾಜಾಜಿನಗರ ಪೊಲೀಸರು (Police), ಮೃತರ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಿದರು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಅಂತ್ಯಕ್ರಿಯೆ ಸಲುವಾಗಿ ಬಿಬಿಎಂಪಿಗೆ (BBMP) ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ನಂತರ ಆ ಎರಡು ಮೃತದೇಹಗಳಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ತಂದೆ ಮುಖ ನೋಡಲು ಬಿಟ್ಟಿರಲಿಲ್ಲ:  ಅಕ್ಕಸಾಲಿಗ ಮುನಿರಾಜು ಕೊರೋನಾ ಸೋಂಕಿತರಾದ ಬಳಿಕ ಚಿಕಿತ್ಸೆಗಾಗಿ ಇಎಸ್‌ಐ ಆಸ್ಪತ್ರೆಗೆ (ESI hospital) ಕುಟುಂಬ ಸದಸ್ಯರು ದಾಖಲಿಸಿದ್ದರು. ಆಗ ತಮ್ಮ ಪುತ್ರಿ ಮೊಬೈಲ್‌ (Mobile) ಸಂಖ್ಯೆಯನ್ನು ಮುನಿರಾಜು ನೀಡಿದ್ದರು. ಮೃತದೇಹ ಪತ್ತೆಯಾದ ಬಳಿಕ ಮೃತರ ಪುತ್ರಿಯನ್ನು ಸಂಪರ್ಕಿಸಲು ಪೊಲೀಸರು (Police) ಯತ್ನಿಸಿದರೂ ಆರಂಭದಲ್ಲಿ ಸಿಗಲಿಲ್ಲ. ಕೊನೆಗೆ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಮೃತರ ಪುತ್ರಿಯನ್ನು ಸಂಪರ್ಕಿಸಿ ಪೊಲೀಸರು ಮಾಹಿತಿ ನೀಡಿದ್ದರು.

ಅಂದು ಕೊರೋನಾ (Corona) ಸೋಂಕಿನಿಂದ ಮೃತಪಟ್ಟ ಕಾರಣ ನಮಗೆ ತಂದೆ ಮುಖ ನೋಡಲು ಸಹ ಆಸ್ಪತ್ರೆ ಸಿಬ್ಬಂದಿ ಅವಕಾಶ ಕೊಡಲಿಲ್ಲ. ಆದರೀಗ ಮೃತಪಟ್ಟತಂದೆಯ ಮೂಳೆ ಕೊಡಲು ಬರುತ್ತಿದ್ದಾರೆ. ತಂದೆಗೆ ಗೌರವಯುತ ಅಂತ್ಯಕ್ರಿಯೆ ನಡೆಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮೃತ ಮುನಿರಾಜು ಪುತ್ರಿ ಚೇತನಾ ಆಗ್ರಹಿಸಿದರು.

ತಂದೆ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಸಹಿ ಮಾಡಿ ವೈದ್ಯರು ದಾಖಲೆ (Record) ಕೊಟ್ಟಿದ್ದರು. ಕೆಲ ದಿನಗಳ ಹಿಂದೆ ಕೋವಿಡ್‌ ಬಿಯು ನಂಬರ್‌ ಕೇಳಿದಕ್ಕೆ ಅದಕ್ಕೂ ನಮಗೂ ಸಂಬಂಧ ಇಲ್ಲವೆಂದು ಬಿಬಿಎಂಪಿ (BBMP) ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು. ಇದೀಗ 15 ತಿಂಗಳು ಶವವನ್ನೇ ಹೊರಗೆ ತೆಗೆದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಕಿಡಿಕಾರಿದರು.

ತಮಗೆ ಮಾವ ಮೃತಪಟ್ಟವಿಷಯ ತಿಳಿಸಿದ ಬಿಬಿಎಂಪಿ (BBMP) ಸಿಬ್ಬಂದಿಯೇ ತಾವೇ ಅಂತ್ಯ ಸಂಸ್ಕಾರ ನೆರೆವೇರಿಸುತ್ತೇವೆ ಎಂದಿದ್ದರು. ಬಳಿಕ ಆಸ್ಪತ್ರೆ ದಾಖಲೆಗಳನ್ನು ಆಧರಿಸಿ ಮರಣ ಪತ್ರವನ್ನು ಕೂಡಾ ಬಿಬಿಎಂಪಿ ಅಧಿಕಾರಿಗಳು ಕೊಟ್ಟಿದ್ದರು. ಅಂತ್ಯಕ್ರಿಯೆ (Last Rite)  ಸಂಸ್ಕಾರ ನಡೆದಿದೆ ಎಂದು ಭಾವಿಸಿ ವರ್ಷದ ಪುಣ್ಯಾರಾಧನೆ ಸಹ ಮಾಡಿದ್ದೇವು. ಈಗ ನೋಡಿದರೆ ಆಸ್ಪತ್ರೆಯ ಶವಾಗಾರದಲ್ಲೇ ಮೃತದೇಹ ಪತ್ತೆಯಾಗಿದೆ. ನಮಗೆ ಬಹಳ ನೋವು ತಂದಿದೆ ಎಂದು ಮೃತ ಮುನಿರಾಜು ಅಳಿಯ ಸತೀಶ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ತಿಥಿ ಮಾಡಿದ್ದೆವು:  2019ರಲ್ಲಿ ಅನಾರೋಗ್ಯ ಕಾರಣಕ್ಕೆ ದುರ್ಗಾ ಪತಿ ಮೃತಪಟ್ಟಿದ್ದರು. ಇದಾದ ವರ್ಷಕ್ಕೆ ಕೊರೋನಾ ಸೋಂಕಿಗೆ ತುತ್ತಾಗಿ ದುರ್ಗಾ ಕೊನೆಯುಸಿರೆಳೆದಳು. ಒಂದು ವರ್ಷ ಅವಧಿಯಲ್ಲೇ ದುರ್ಗಾ ದಂಪತಿ ಸಾವು ನೋವು ತಂದಿತ್ತು. ಅಂದು ಕೊರೋನಾ (Corona) ಕಾರಣಕ್ಕೆ ನಮಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಲಿಲ್ಲ. ಬಿಬಿಎಂಪಿ ಅಧಿಕಾರಿಗಳ ಮಾತು ನಂಬಿ ನಾವು ಮನೆಯಲ್ಲಿ ದುರ್ಗಾಳ ತಿಥಿ ಕಾರ್ಯ ನಡೆಸಿದ್ದೆವು. ಈಗ ಆಕೆಯ ಮೃತದೇಹದ ಅಂತ್ಯಕ್ರಿಯೆ ನಡೆದಿಲ್ಲ ಎಂದು ತಿಳಿದು ಆಘಾತವಾಗಿದೆ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯೇ ಇದಕ್ಕೆ ಕಾರಣವಾಗಿದ್ದಾರೆ ಎಂದು ಮೃತ ದುರ್ಗಾ ಸಂಬಂಧಿ ಸುಜಾತಾ ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios