ಮಂಗಳೂರು(ಏ.07): ನಕಲಿ ಪ್ರೆಸ್‌ ಸ್ಟಿಕ್ಕರ್‌ ಅಂಟಿಸಿ ಮಂಗಳೂರು ನಗರದಲ್ಲಿ ಓಡಾಡುತ್ತಿದ್ದ ವಾಹನವೊಂದನ್ನು ನಗರ ಸಂಚಾರಿ ಪೊಲೀಸರು ವಶಪಡಿಸಿ, ಆರೋಪಿಯನ್ನು ಬಂಧಿ​ಸಿದ್ದಾರೆ. ಬೆಂಗಳೂರು ನಿವಾಸಿ ಹುಸೈನ್‌ ಆಲಿ ಯಾನೆ ಆಲಿ ಉಸೈನ್‌ (58) ಬಂ​ಧಿತ ಆರೋಪಿ.

ಏ.5ರಂದು ಸಂಜೆ 6.45ರ ಹೊತ್ತಿಗೆ ಇನೋವಾ ಕಾರೊಂದು ಕೊಟ್ಟಾರ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾಗ ಸಂಚಾರಿ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಕಾರಿನ ಗಾಜಿನ ಮೇಲೆ ಆಂಗ್ಲ ಪತ್ರಿಕೆಯೊಂದರ ಹೆಸರು ಬಳಸಿ ಪ್ರೆಸ್‌ ಸ್ಟಿಕ್ಕರ್‌ ಅಂಟಿಸಲಾಗಿತ್ತು. ಆ ಕಾರಿನಲ್ಲಿ ಮಾಧ್ಯಮಕ್ಕೆ ಸಂಬಂಧಿ​ಸಿದ ಯಾವುದೇ ವ್ಯಕ್ತಿ ಇರಲಿಲ್ಲ.

ಮೊಬೈಲ್‌ ಟಾರ್ಚ್ ಉರಿಸಿದ ಶಾಸಕ ಖಾದರ್‌ಗೆ ಅವಹೇಳನ

ಮಾಧ್ಯಮ ಎಂದು ಸುಳ್ಳು ಗುರುತಿನ ಚೀಟಿಯನ್ನು ಅಂಟಿಸಿ ಸಂಚರಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂ​ಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಒಟ್ಟು 351 ವಾಹನ ವಶ

ನಿಯಮ ಉಲ್ಲಂಘಿಸಿ ವಿನಾ ಕಾರಣ ರಸ್ತೆಗೆ ಇಳಿದ ಕಾರಣಕ್ಕೆ ದ.ಕ. ಜಿಲ್ಲೆಯಲ್ಲಿ ಸೋಮವಾರ ಒಟ್ಟು 351 ವಾಹನ ವಶಪಡಿಸಲಾಗಿದೆ. ಮಂಗಳೂರು ನಗರದಲ್ಲಿ ಲಾಕ್‌ಡೌನ್‌ ಉಲ್ಲಂಘನೆ ಮಾಡಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ ಒಟ್ಟು 268 ವಾಹನಗಳನ್ನು ಮಂಗಳೂರು ನಗರ ಪೊಲೀಸರು ನಾನಾ ಕಡೆ ಕಾರ್ಯಾಚರಣೆ ನಡೆಸಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಇದೇ ರೀತಿ ಗ್ರಾಮಾಂತರದಲ್ಲಿ 83 ವಾಹನಗಳನ್ನು ವಶಪಡಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್‌ ತಿಳಿಸಿದ್ದಾರೆ.

ಪೊಲೀಸರಿಗೆ ಮಾಸ್ಕ್‌:

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ನಗರ ಪೊಲೀಸರಿಗೆ ವಿಶೇಷ ಮಾದರಿಯ ಮಾಸ್ಕ್‌ನ್ನು ಹಂಚಿಕೆ ಮಾಡಲಾಗಿದೆ. ಉತ್ತರ ಕನ್ನಡ ಮೂಲದಿಂದ ಈ ಮಾಸ್ಕ್‌ನ್ನು ತರಿಸಿ ಸಂಚಾರಿ ಪೊಲೀಸರಿಗೆ ನೀಡಲಾಗಿದೆ. ವಿಶೇಷ ಮಾಸ್ಕ್‌ ನೀಡಿರುವ ಬಗ್ಗೆ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಟ್ವೀಟ್‌ ಮಾಡಿದ್ದಾರೆ.

ಮಂಗಳೂರಲ್ಲಿ ಸಂಚಾರಿ ಎಟಿಎಂ ಸೇವೆ

ಸಾರ್ವಜನಿಕ ರಂಗದ ಕೆನರಾ ಬ್ಯಾಂಕ್‌ ಮೊಬೈಲ್‌(ಸಂಚಾರಿ) ಎಟಿಎಂ ಸೇವೆಯನ್ನು ಮಂಗಳೂರಿನಲ್ಲಿ ಆರಂಭಿಸಿದೆ. ಎಟಿಎಂ ಕೇಂದ್ರದಲ್ಲಿ ದೊರೆಯುವ ಎಲ್ಲ ರೀತಿಯ ಸೇವೆಗಳು ಈ ಮೊಬೈಲ್‌ ಎಟಿಎಂನಲ್ಲಿ ಲಭ್ಯವಿದೆ. ಮೊಬೈಲ್‌ ಎಟಿಎಂನಲ್ಲಿ ವ್ಯವಹಾರ ಮಾಡಬೇಕಾದರೆ ಸ್ಯಾನಿಟೈಸರ್‌ ಒದಗಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಗ್ರಾಹಕರು ಈ ಸೇವೆಗೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಲಾಕ್‌ಡೌನ್‌ನ ಸಂದರ್ಭದಲ್ಲಿ ಈ ಮೊಬೈಲ್‌ ಎಟಿಎಂ ಗ್ರಾಹಕರಿಗೆ ಪೂರಕವಾಗಲಿದೆ ಎಂದು ಬ್ಯಾಂಕ್‌ನ ಮಹಾಪ್ರಬಂಧಕ ಯೋಗೀಶ್‌ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.