ಬೆಂಗಳೂರು/ ಮಂಗಳೂರು[ಜ. 24]  ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟವ ತಾನೇ ಬಂದು ಶರಣಾಗಿದ್ದಾನೆ. ಆತ ಬಂದು ಶರಣಾದ ಮೇಲೆಯೂ ಒಂದು ಕಡೆ ರಾಜಕೀಯ ಕೆಸರು ಎರೆಚಾಟ ನಿಂತಿಲ್ಲ. ಬಿಜೆಪಿಯ ಕಾರ್ಯಕರ್ತರೊಬ್ಬರ ಪೋಟೋವನ್ನು ಆರೋಪಿಯ ಪೋಟೋ  ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟ ಪ್ರಕರಣವೂ ಆಗಿಹೋಗಿದೆ.

ಆದಿತ್ಯ ರಾಬ್ ಬಾಂಬ್ ಇಟ್ಟ ಆರೋಪಿ. ಆದರೆ ಆದಿತ್ಯ ರಾವ್ ಜಾಗದಲ್ಲಿ ಸಂದೀಪ್ ಲೋಬೋ ಎಂಬುವರ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರೊಂದಿಗೆ, ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಲೋಬೋ ಇರುವ ಪೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಸಂದೀಪ್ ಸುಳ್ಳು ಸುದ್ದಿ ಹಬ್ಬಿಸುವವರ ವಿರದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇನೆ ಎಂದು ತಿಳಿಸಿದ್ದಾರೆ. ಜತೆಗೆ ಮಂಗಳೂರು ಪೊಲೀಸರಿಗೆ ದೂರು ಸಹ ನೀಡಿದ್ದಾರೆ.

ಆದಿತ್ಯ ರಾವ್ ಪೊಲೀಸರಿಗೆ ಶರಣಾದ ಮೇಲೆ ಸಂದೀಪ್ ಅವರ ಪೋಟೋಗಳು ಮತ್ತಷ್ಟು ವೇಗವಾಗಿ ಹರಿದಾಡಿವೆ. ನಾನು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತನಾಗಿದ್ದು ಕೆಟ್ಟ ಹೆಸರು ತರಲು ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಯುಟ್ಯೂಬ್ ನೋಡಿ ಬಾಂಬ್ ತಯಾರಿಕೆ ಕಲಿತಿದ್ದವ ಬೆಂಗಳೂರಿಗೆ ಬಂದಿದ್ದೇ ರೋಚಕ!

ಪುತ್ತೂರಿನ ಉದ್ಯಮಿ ಸಂದೀಪ್ ಲೋಬೋ ಎನ್ನುವರ ಪೋಟೋ ವೈರಲ್ ಆಗುತ್ತಿದೆ. ಬಿಜೆಪಿ ಐಟಿ ಸೆಲ್ ನಲ್ಲಿಯೂ ಸಂದೀಪ್ ಕೆಲಸ ಮಾಡುತ್ತಿದ್ದಾರೆ.

ಪೊಲೀಸರಿಗೆ ದೂರು ನೀಡಿರುವ ಬಗ್ಗೆಯೂ ಲೋಬೋ ವಿಚಾರ ಹಂಚಿಕೊಂಡಿದ್ದಾರೆ. ಪೋಟೋ ಸಮೇತ ವಿವರ ಪೋಸ್ಟ್ ಮಾಡಿದ್ದು ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇನೆ. ಸಂಬಂಧಿಸಿದ ಸ್ಕ್ರೀನ್ ಶಾಟ್ ಸಾಕ್ಷ್ಯವಾಗಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಹೋಲಿಕೆಯನ್ನೇ ಆಧಾರ ಮಾಡಿ ಇಟ್ಟುಕೊಂಡು ವ್ಯಕ್ತಿಯೊಬ್ಬರನ್ನು ಭಯೋತ್ಪಾದಕ ಎನ್ನುವ ಹೆಸರಿನಲ್ಲಿ ಕರೆದಿರುವ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿದೆ.