Asianet Suvarna News Asianet Suvarna News

ಪಟಾಕಿ ಅನಾಹುತ ಶೇ.60ರಷ್ಟು ಕುಸಿತ

ಹಿಂದಿನ ವರ್ಷಗಳಿಗಿಂತ ಈ ವರ್ಷ ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾಗುತ್ತಿದ್ದ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖ|ಕಳೆದ ವರ್ಷ ಮೊದಲ ದಿನವೇ 25 ಕಣ್ಣಿಗೆ ಹಾನಿ, ಇಬ್ಬರು ಮಕ್ಕಳಿಗೆ ಅಂಧತ್ವ| ಈ ವರ್ಷ 2 ದಿನಗಳಲ್ಲಿ 10 ಮಂದಿಗಷ್ಟೇ ಗಾಯ| 

Eye Damage Cases Decreased 60 per cent in Bengaluru grg
Author
Bengaluru, First Published Nov 16, 2020, 7:15 AM IST

ಬೆಂಗಳೂರು(ನ.16): ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಿದ್ದರ ಪರಿಣಾಮವೋ ಅಥವಾ ಜನರೇ ಪಟಾಕಿ ರಹಿತ ದೀಪಾವಳಿ ಆಚರಣೆಗೆ ಪ್ರಾಮುಖ್ಯತೆ ನೀಡಿದ್ದರ ಪರಿಣಾಮವೋ ಗೊತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಪಟಾಕಿ ಸ್ಫೋಟದಿಂದ ಸಂಭವಿಸುವ ಕಣ್ಣಿನ ಹಾನಿ ಪ್ರಕರಣಗಳು ಈ ಬಾರಿ ಶೇ.60ರಷ್ಟು ಕಡಿಮೆಯಾಗಿದೆ.

ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಮೊದಲ ದಿನ ಸುಮಾರು 25 ಪ್ರಕರಣಗಳ ದಾಖಲಾಗಿದ್ದವು. ಈ ಬಾರಿಯ ದೀಪಾವಳಿಯ ಮೊದಲ ಎರಡು ದಿನಗಳಲ್ಲಿ (ಶನಿವಾರ ಹಾಗೂ ಭಾನುವಾರ) ಕೇವಲ 10 ಪ್ರಕರಣಗಳಷ್ಟೇ ದಾಖಲಾಗಿವೆ. ಅದರಲ್ಲಿಯೂ ಹಸಿರು ಪಟಾಕಿ ಹೊಡೆದವರಿಂದ ಹಾಗೂ ಪಟಾಕಿ ಹಚ್ಚುತ್ತಿರುವವರಿಂದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಬೇರೆಯವರು ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದವರಿಗೆ ಹಾನಿಯಾಗಿವೆ.

ಮೊನ್ನೆ ಯಾವುದೇ ಕೇಸಿಲ್ಲ:

ದೀಪಾವಳಿ ಹಬ್ಬದ ಮೊದಲ ದಿನವಾದ ಶನಿವಾರ ನಗರದಲ್ಲಿ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಎರಡನೇ ದಿನವಾದ ಭಾನುವಾರ ನಗರದಲ್ಲಿ ಹತ್ತು ಪ್ರಕರಣಗಳು ದಾಖಲಾಗಿವೆ. ಮಿಂಟೋ ಆಸ್ಪತ್ರೆಯಲ್ಲಿ ಮೂರು, ನಾರಾಯಣ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ಕು ಹಾಗೂ ನೇತ್ರಧಾಮದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

'ಕೆಟ್ಟ ಚಾಳಿ'  ಗಾಳಿ ವಿಷವಾಗಿದ್ದರೂ ಮತ್ತೆ ಪಟಾಕಿ ಸುಡುವರಿಗೆ ಏನ್ ಹೇಳ್ಬೇಕು?

ಈ ಕುರಿತು ಮಾತನಾಡಿದ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌, ಈ ಬಾರಿ ಸದ್ಯಕ್ಕೆ ಕೇವಲ ಮೂರು ಪ್ರಕರಣಗಳು ದಾಖಲಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿಕೊಂಡರೆ ಸುಮಾರು ಶೇ.60ರಷ್ಟುಪ್ರಕರಣಗಳು ಕಡಿಮೆಯಾಗಿವೆ ಎಂದು ತಿಳಿಸಿದರು.

ಕಳೆದ ವರ್ಷ ಮೊದಲ ದಿನ ದಾಖಲಾಗಿದ್ದ 25 ಪ್ರಕರಣಗಳಲ್ಲಿ ಇಬ್ಬರು ಮಕ್ಕಳು ಸಂಪೂರ್ಣ ದೃಷ್ಟಿಕಳೆದುಕೊಂಡಿದ್ದರು. ಈ ಬಾರಿ ಮೂರು ಪ್ರಕರಣಗಳ ಪೈಕಿ ಸ್ವಲ್ಪ ಪ್ರಮಾಣದಲ್ಲಿ ಕಾರ್ನಿಯಾ ಗಾಯವಾಗಿದ್ದು, ಕಣ್ಣಿನ ರೆಪ್ಪೆಗಳು ಸುಟ್ಟಿವೆ. ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿಲ್ಲ. ದೃಷ್ಟಿಸರಿಯಾಗಬಹುದಾದ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದರು.

ಇನ್ನು ಈ ಪ್ರಕರಣಗಳಲ್ಲಿ ಬೇರೆಯವರು ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದ ಮಕ್ಕಳಿಗೆ ತೊಂದರೆಯಾಗಿದೆ. ಹಸಿರು ಪಟಾಕಿಗಳಿಂದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಹಾನಿಕಾರಕ ಪಟಾಕಿಗಳು ಸಿಡಿಸುತ್ತಿದ್ದರು. ಹೂಕುಂಡ, ಸುರ್‌ಸುರ್‌ ಬತ್ತಿ ಹಚ್ಚುತ್ತಿದ್ದ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
 

Follow Us:
Download App:
  • android
  • ios