ಬಾಗಲಕೋಟೆ: ಗೃಹಜ್ಯೋತಿ, ಹೆಸರು ಬದಲಿಸಲು ಹಣ ಸುಲಿಗೆ

ಅಮೀನಗಡ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು 

Extortion Money to Change Name For Gruha Jyothi Scheme in Bagalkot grg

ಅಮೀನಗಡ(ಜೂ.24):  ಗೃಹಜ್ಯೋತಿ ಯೋಜನೆಗಾಗಿ ಮೃತಪಟ್ಟವರ ಹೆಸರಲ್ಲಿರುವ ಆರ್‌.ಆರ್‌. ಸಂಖ್ಯೆಯನ್ನು ಬೇರೆಯವರ ಹೆಸರಿಗೆ ಬದಲಿಸಲು ಅಮೀನಗಡ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಗುತ್ತಿಗೆದಾರರು ಹಾಗೂ ಮಧ್ಯವರ್ತಿಗಳಿಂದ ಹಣದ ಸುಲಿಗೆ ನಡೆಯುತ್ತಿದೆ. ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಹುನಗುಂದ ತಾಲೂಕಿನ ಸೂಳೇಬಾವಿ ಹಾಗೂ ಅಮೀನಗಡದ ನಾಗರಿಕರು ಹೆಸ್ಕಾಂ ಶಾಖಾ ಕಚೇರಿಗೆ ತೆರಳಿ ದಿಢೀರ್‌ ಪ್ರತಿಭಟಿಸಿದ ಘಟನೆ ಶುಕ್ರವಾರ ಜರುಗಿತು.

ಈ ಕುರಿತು ಅಮೀನಗಡ ಹೆಸ್ಕಾಂ ಶಾಖಾ ಕಚೇರಿ ಶಾಖಾಧಿಕಾರಿ ಇಬ್ರಾಹಿಂ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸೂಳೇಬಾವಿ ಗ್ರಾಪಂ ಮಾಜಿ ಸದಸ್ಯ ನಾಗೇಶ ಗಂಜೀಹಾಳ, ರಾಜ್ಯ ಸರ್ಕಾರ ಜಾರಿ ಮಾಡಿರುವ ಗೃಹಜ್ಯೋತಿ ಮಹತ್ವದ ಯೋಜನೆಗೆ ದಾಖಲಾತಿ ಒದಗಿಸಲು, ಹೆಸರು ಬದಲಾಯಿಸಲು ನಾಗರಿಕರು ಅಮೀನಗಡದ ಹೆಸ್ಕಾಂ ಶಾಖಾ ಕಚೇರಿಗೆ ಬಂದರೆ ಶಾಖಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿಯನ್ನು ವಿಚಾರಿಸಿದರೆ ಹೊರಗೆ ಗುತ್ತಿಗೆದಾರರನ್ನು ಸಂಪರ್ಕಿಸಿ ಎನ್ನುವ ಮೂಲಕ ಮಧ್ಯವರ್ತಿಗಳಿಗೆ, ಗುತ್ತಿಗೆದಾರರಿಗೆ ಹಣ ವಸೂಲಿಗೆ ಪ್ರೇರೇಪಿಸುತ್ತಿದ್ದಾರೆ ಎಂದು ದೂರಿದರು.

ಬಾಗಲಕೋಟೆ: ಕೃಷ್ಣನ ಒಡಲು ಕ್ಷೀಣ; ದರ್ಶನ ನೀಡಿದ ಈಶ್ವರ..!

ಹೊರಗೆ ನಿಂತಿರುವವವರು ಹೆಸರು ಬದಲಾಯಿಸಲು 3 ಹಾಗೂ 4 ಸಾವಿರ ಹಣ ಕೇಳುತ್ತಿದ್ದಾರೆ. ಇವರೇನು ನಿಮ್ಮ ಇಲಾಖೆಯವರೇ ನೇಮಿಸಿರುವ ಅಧಿಕೃತ ಗುತ್ತಿಗೆದಾರರೋ ಅಥವಾ ಮಧ್ಯವರ್ತಿಗಳೋ, ಇಷ್ಟೆಲ್ಲ ನಡೆಯುತ್ತಿದ್ದರೂ ನಿಮ್ಮ ಅರಿವಿಗೆ ಬಂದಿಲ್ಲವೇ ಅಥವಾ ನಿಮ್ಮ ಸಹಕಾರವೂ ಇದೆಯೇ? ಸರ್ಕಾರದ ಯೋಜನೆ ಜಾರಿಗೆ ಸಾರ್ವಜನಿಕರು ಯಾರಿಗೂ ಒಂದು ರುಪಾಯಿ ಕೊಡಬೇಡಿ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ಹಲವಾರು ಬಾರಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಆದರೆ, ಅಮೀನಗಡ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗರಿಕರ ಮನವಿ ಸ್ವೀಕರಿಸಿ ಮಾತನಾಡಿದ ಅಮೀನಗಡ ಹೆಸ್ಕಾಂ ಶಾಖಾ ಕಚೇರಿ ಶಾಖಾಧಿಕಾರಿ ಇಬ್ರಾಹಿಂ ಮ್ಯಾಗೇರಿ, ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಮೇಲಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ. ಗ್ರಾಹಕರಿಗೆ ಯಾವುದೇ ತೊಂದರೆ, ಮಾಹಿತಿ ಬೇಕಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದರು.

ಸೂಳೇಬಾವಿಯ ಹನಮಂತಗೌಡ ಪಾಟೀಲ, ಆನಂದ ಮೊಕಾಶಿ, ಗ್ಯಾನಪ್ಪ ಗೋನಾಳ, ಸುರೇಶ ಪವಾರ, ನಿಂಗಪ್ಪ ಹಣಗಿ, ರಮೇಶ ಮಡಿವಾಳರ, ವಿಶ್ವನಾಥ ಲೂತಿಮಠ, ರವಿ ಮಿಣಜಗಿ, ಮುರಳೀಧರ ಮಾಂಡ್ರೆ, ಹನಮಂತ ಮಾಹಿ, ಸುನೀಲ ಗಡೇದ, ಸಚಿನ ಅಂಗಡಿ, ರಮೇಶ ಭಾಪ್ರಿ, ವಿನಾಯಕ ಧೂಪದ, ಅಮೀನಗಡ ಪಪಂ ಸದಸ್ಯ ವಿಜಯಕುಮಾರ ಕನ್ನೂರ, ಮಾಜಿ ಸದಸ್ಯ ಗುರುನಾಥ ಚಳ್ಳಗಿಡದ, ಸಂತೋಷ ಕಂಗಳ, ಮಲ್ಲಿಕಾರ್ಜುನ ನಿಡಗುಂದಿ ಇತರರು ಇದ್ದರು.

Latest Videos
Follow Us:
Download App:
  • android
  • ios