Asianet Suvarna News Asianet Suvarna News

ಬಾಗಲಕೋಟೆ: ಕೃಷ್ಣನ ಒಡಲು ಕ್ಷೀಣ; ದರ್ಶನ ನೀಡಿದ ಈಶ್ವರ..!

ರಬಕವಿ-ಮಹಿಷವಾಡಗಿ ಬ್ಯಾರೇಜ್‌ನ ಹಿಂಭಾಗದಲ್ಲಿ ಕಟ್ಟಿರುವ ಶತಮಾನದ ದೇಗುಲವೊಂದು 14 ವರ್ಷಗಳ ನಂತರ ಗೋಚರವಾಗಿದೆ. ಹೀಗಾಗಿ ಜನರು ತಂಡೋಪ ತಂಡವಾಗಿ ದೇವಸ್ಥಾನ ನೋಡಲು ತೆರಳಿ ಆಶೀರ್ವಾದ, ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

Eshwar Temple Visible After 14 Years in Krishna River at Bagalkot grg
Author
First Published Jun 23, 2023, 10:30 PM IST

ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಜೂ.23): ಮಳೆಯಾಗದೇ ಕೆರೆ, ಬಾವಿಗಳು, ಜಲಾಶಯಗಳು ಬರಿದಾಗುತ್ತಾ ಸಾಗಿವೆ. ಇದೆ ವೇಳೆ ಕೃಷ್ಣೆಯ ಒಡಲು ಕೂಡ ಬರಿದಾದ ಕಾರಣ ರಬಕವಿ-ಮಹಿಷವಾಡಗಿ ಬ್ಯಾರೇಜ್‌ನ ಹಿಂಭಾಗದಲ್ಲಿ ಕಟ್ಟಿರುವ ಶತಮಾನದ ದೇಗುಲವೊಂದು 14 ವರ್ಷಗಳ ನಂತರ ಗೋಚರವಾಗಿದೆ. ಹೀಗಾಗಿ ಜನರು ತಂಡೋಪ ತಂಡವಾಗಿ ದೇವಸ್ಥಾನ ನೋಡಲು ತೆರಳಿ ಆಶೀರ್ವಾದ, ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಅಪರೂಪ ಎನ್ನುವಂತೆ ಬರಗಾಲ ಬಂದಾಗ ಮಾತ್ರ ಇದು ಗೋಚರಿಸುತ್ತದೆ. ಜತೆಗೆ ಕೆಲವೇ ದಿನಗಳು ಪೂಜೆಗೊಳ್ಳುವ ವಿಶೇಷ ದೇವಸ್ಥಾನವಾಗಿದೆ. ದಿನದಿನಕ್ಕೆ ನೀರು ಕಡಿಮೆಯಾದಂತೆ ಗೋಚರಿಸುವ ಈ ದೇವಾಲಯವು ಪೂರ್ವಾಭಿಮುಖವಾಗಿ ನಿರ್ಮಿತಗೊಂಡಿದೆ. ದೇವಾಲಯದ ಗರ್ಭಗುಡಿಯಲ್ಲಿ ಈಶ್ವರ ಲಿಂಗವಿದೆ. ವಿಶಾಲವಾದ ಪಡಸಾಲೆ ಇದೆ. ಮೂರು ಕಮಾನುಗಳ ಪ್ರವೇಶ ದ್ವಾರವಿದ್ದು, ನದಿಯ ಕಡೆ ಒಂದು ಬಾಗಿಲು, ಅದಕ್ಕೆ ಎದುರುಗಡೆ ಮತ್ತೊಂದು ಬಾಗಿಲು, ಬೃಹತ್‌ ಆಕಾರದ ಕರಿ ಕಲ್ಲಿನಿಂದ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಯಾವುದೇ ವಾಸ್ತು ಶಿಲ್ಪವಾಗಲಿ ಕೆತ್ತನೆಯ ಕೆಲಸವಾಗಲಿ ಇಲ್ಲ. ಅದರೂ ಅದು ನೋಡುಗರನ್ನು ಆಕರ್ಷಿಸುವಂತಿದೆ.

ಶಕ್ತಿ ಯೋಜನೆ ಎಫೆಕ್ಟ್: ಸಿಗದ ಟ್ಯಾಕ್ಸಿ ಬಾಡಿಗೆ, ಕಂಗಾಲಾದ ಟ್ಯಾಕ್ಸಿ ಚಾಲಕರ ಬದುಕು

ದೇವಾಲಯದ ಐತಿಹ್ಯ:

ಈ ದೇವಾಲಯದ ಕುರಿತು ಮಾಹಿತಿ ಕಲೆ ಹಾಕುವಾಗ ರಬಕವಿಯ ಮರೆಗುದ್ದಿ ಮನೆತನದ ಹಿರಿಯ ಅಜ್ಜ ಬಾಳಪ್ಪ ಮರೆಗುದ್ದಿ ಎರಡು ದೇವಾಲಯಗಳನ್ನು ಕಟ್ಟಿಸಿದ್ದು ಎಂದು ತಿಳಿದು ಬಂದಿದೆ. ಈಗಲೂ ಎರಡೂ ದೇಗುಲಗಳಿಗೆ ಬಾಳಪ್ಪನ ಗುಡಿ ಅಂತ ಹೆಸರಿದೆ. ಆದರೆ, ಅದು ಈಶ್ವರ ದೇವಸ್ಥಾನ. ಮರೆಗುದ್ದಿ ಮನೆತನದ ಶಶಿಕಾಂತ ಮರೇಗುದ್ದಿ ಹೇಳುವ ಪ್ರಕಾರ ಮನೆತನದ ಪೂರ್ವಿಕ ಬಾಳಪ್ಪಜ್ಜಗ ಗಂಡು ಸಂತಾನ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು. ಅವರದು ಮದುವೆ ಆಗಿತ್ತು. ಬಾಳಪ್ಪ ಸಣ್ಣ-ಪುಟ್ಟವ್ಯಾಪಾರ ಮಾಡುತ್ತಿದ್ದ. ಚಿಲ್ಲರೆ ನಾಣ್ಯಗಳಿಂದ ಸಾಕಷ್ಟುಹಣ ಕೂಡಿಸಿದ್ದ. ಆ ಹಣ ಏನು ಮಾಡುವುದು ಎಂಬ ವಿಚಾರದಲ್ಲಿ ಹಿರಿಯರನ್ನು ಕೇಳಿದಾಗ ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ಗುಡಿ ಇಲ್ಲ. ಅಲ್ಲಿ ಗುಡಿ ಕಟ್ಟಿಸಿದರ ಹೋಗಿ ಬರುವ ಜನಕ್ಕೆ ಪೂಜೆ ಮಾಡಲಿಕ್ಕೆ ಒಂದು ಪ್ರಶಸ್ತ್ಯ ಸ್ಥಳವಾಗುತ್ತದೆ. ಇದರಿಂದ ಬಹಳ ಜನಕ್ಕ ಅನುಕೂಲ ಆಗುವುದರಿಂದ ಅದಕ್ಕ ಅಲ್ಲೇ ಗುಡಿ ಕಟ್ಟಿಸು ಎಂದು ಸಲಹೆ ನೀಡಿದರು. ಅದರಂತೇ ಬಾಳಪ್ಪಜ್ಜ ನದಿ ರಸ್ತೆಯ ಹನುಮ ದೇವರ ಗುಡಿ ಕೆಳಭಾಗದಲ್ಲಿ (ಜಾರ್ಪಡಿ ಬಳಿ) ಪಾದಚಾರಿಗಳಿಗೆ ಆಶ್ರಯವಾಗಲು ಮತ್ತು ದಣಿವಾರಿಸಿಕೊಳ್ಳಲು ಒಂದು ದೇವಸ್ಥಾನ ಮತ್ತು ನದಿ ಮಧ್ಯದಲ್ಲಿ ಮತ್ತೊಂದು ದೇವಸ್ಥಾನ ಸೇರಿದಂತೆ ಎರಡು ದೇಗುಲಗಳನ್ನು ನಿರ್ಮಿಸಿದರು.ಆಗ ರಬಕವಿ ಪಟ್ಟಣ ಸಾಂಗ್ಲಿ ಸಂಸ್ಥಾನಕ್ಕೆ ಸೇರಿತ್ತು. ಆಗಿನ ಸಾಂಗ್ಲಿ ಸಂಸ್ಥಾನದಿಂದ ದೇವಾಲಯ ಕಟ್ಟಲು ಪರವಾನಗಿ ಪಡೆದು 1912ರ ಸುಮಾರಿಗೆ ಈ ದೇವಾಲಯವನ್ನು ನಿರ್ಮಿಸಲಾಯಿತು. ಧಾರ್ಮಿಕ ಕಾರ್ಯವಾಗಿದ್ದರಿಂದ ನಮ್ಮ ಪೂರ್ವಜ ಬಾಳಪ್ಪಜ್ಜ ಯಾವುದಕ್ಕೂ ನನ್ನ ಹೆಸರು ಬೇಡ ಅಂದರು. ಈ ದೇವಾಲಯ ಕಟ್ಟಿಸಿದರ ಬಗ್ಗೆ ಸಾಂಗ್ಲಿಯಲ್ಲಿ ದಾಖಲೆಗಳು ಮೋಡಿ ಭಾಷೆಯೊಳಗೆ ನೋಡಲು ಸಿಗುತ್ತಾವೆ ಎನ್ನುತ್ತಾರೆ ಶಶಿಕಾಂತ ಮರೆಗುದ್ದಿ.

ಟಿಕೆಟ್‌ ಕೇಳಿದ್ದಕ್ಕೆ ಉಚ್ಛಾಟನೆ; ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷನ ವಿರುದ್ಧ ತಿರುಗಿಬಿದ್ದ ಉಪಾಧ್ಯಕ್ಷ!

ಶತಮಾನಗಳ ಇತಿಹಾಸ ಸಾರುವ ಈ ದೇಗುಲ ಇಲ್ಲಿ ಇದೇ ಎಂಬ ಮಾಹಿತಿ ಬಹುತೇಕರಿಗೆ ತಿಳಿಯದ ವಿಷಯವಾಗಿದೆ. ಅದರಲ್ಲೂ ಈಗೀನ ಯುವ ಸಮುದಾಯಕ್ಕಂತೂ ಎಳ್ಳಷ್ಟು ಮಾಹಿತಿ ಇಲ್ಲ. ಇದೀಗ ಕೃಷ್ಣಾ ನದಿ ನೀರು ಖಾಲಿಯಾಗಿ ದೇವಾಲಯ ಗೋಚರಿಸುತ್ತಿರುವ ಕಾರಣ ಜನರು ಅಲ್ಲಿಗೆ ತೆರಳಿ ಭಕ್ತಿಪರವಶವಾಗುತ್ತಾ, ದೇವಾಲಯದ ಇತಿಹಾಸ ತಿಳಿದುಕೊಳ್ಳುತ್ತಾ, ನಮ್ಮಲ್ಲೂ ಇಂತಹದೊಂದು ಐತಿಹಾಸಿ ದೇವಾಲಯ ಇದೇಯಲ್ಲ ಎಂದು ಹೆಮ್ಮೆ ಪಡುತ್ತಿದ್ದಾರೆ.

ದೇವಾಲಯ ಯಾಕೆ? ನೀರಲ್ಲಿದೆ:

ಮೊದಲು ನದಿಯ ಹರವಿನ ವ್ಯಾಪ್ತಿ ಬಹಳ ಕಡಿಮೆ ಇದ್ದ ಕಾರಣ ದೇವಾಲಯ ನದಿಯ ಈಚೆಗಿನ (ರಬಕವಿ) ದಡದಲ್ಲಿ ಇತ್ತು. ಆದರೆ 1971ರಲ್ಲಿ ವೀರೇಂದ್ರ ಪಾಟೀಲ ಸರ್ಕಾರ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ್‌ ನಿರ್ಮಿಸಲು ಅನುಮತಿ ನೀಡಿದರೆ, 1973ರಲ್ಲಿ ದೇವರಾಜ ಅರಸು ಸರ್ಕಾರವಿದ್ದಾಗ ಪ್ರಥಮ ಬಾರಿಗೆ ನೀರನ್ನು ತಡೆ ಹಿಡಿಯಲಾಯಿತು. ಕಾರಣ ದೇವಾಲಯ ನೀರೊಳಗೆ ಮುಳುಗಿ ಹೋಯಿತು. ಈಗ ಅದೇ ನದಿಯ ಮಧ್ಯ ಭಾಗವಾಗಿದೆ. ನಿಜಕ್ಕೂ ಇದೊಂದು ಅಪರೂಪದ ದೇವಸ್ಥಾನವಾಗಿರುವ ಇದು ಶತಮಾನಗಳು ಕಳೆದರೂ ಎಂಥದೇ ಪ್ರವಾಹದ ಸೆಳೆತದ ನೀರಿಗೂ ಗರ್ಭಗುಡಿಯಲ್ಲಿರುವ ಮೂರ್ತಿಗಳು ಅಲ್ಲಾಡದೇ ಸ್ಥಿರವಾಗಿ ನಿಂತಿರುವುದು ಇಲ್ಲಿನ ವಿಶೇಷವಾಗಿದೆ.

Follow Us:
Download App:
  • android
  • ios