ಬೆಂಗಳೂರು(ಅ.03): ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಯಲಹಂಕ ಸಮೀಪದ ಅನಿಲ ಆಧಾರಿತ ವಿದ್ಯುತ್‌ ಸ್ಥಾವರದಲ್ಲಿ (ವೈಸಿಸಿಪಿಪಿ) ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ 15 ಮಂದಿ ಎಂಜಿನಿಯರ್‌ಗಳು ಗಾಯಗೊಂಡಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.

ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ವೈಸಿಸಿಪಿಪಿ ಕಾರ್ಯಾರಂಭದ ಪ್ರಾಯೋಗಿಕ ಪರೀಕ್ಷೆ ವೇಳೆ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಕೆಪಿಸಿಎಲ್‌ನ (ಕರ್ನಾಟಕ ವಿದ್ಯುತ್‌ ನಿಗಮ) 11 ಹಾಗೂ ಬಿಎಚ್‌ಇಎಲ್‌ ಮತ್ತು ಜಿಇ ಕಂಪನಿಯ ತಲಾ ಇಬ್ಬರು ಎಂಜಿನಿಯರ್‌ಗಳು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನುಳಿದವರು ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2015ರಲ್ಲಿ ಯಲಹಂಕದ ಸಮೀಪ 370 ಮೆಗಾ ವ್ಯಾಟ್‌ ಉತ್ಪಾದನಾ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್‌ ಸ್ಥಾವರ ಸ್ಥಾಪನೆಗೆ ಕೆಪಿಸಿಎಲ್‌ ಸಂಸ್ಥೆ ಅನುಮತಿ ನೀಡಿದೆ. ಈ ಯೋಜನೆಯ ಕಾಮಗಾರಿಯನ್ನು ಬಿಇಎಎಲ್‌ ಸಂಸ್ಥೆ ಗುತ್ತಿಗೆ ಪಡೆದಿದೆ. ಮೊದಲ ಘಟಕದ ಕೆಲಸಗಳು ಪೂರ್ಣಗೊಂಡಿದ್ದು, ಅಧಿಕೃತ ಚಾಲನೆಗೂ ಮುನ್ನ ಪ್ರಾಯೋಗಿಕ ಪರೀಕ್ಷೆಗೆ ತಾಂತ್ರಿಕ ವರ್ಗ ಭರದ ಸಿದ್ಧತೆಯಲ್ಲಿ ತೊಡಗಿತ್ತು. ಆಗ ಶುಕ್ರವಾರ ಮುಂಜಾನೆ 3.20ರಲ್ಲಿ ಲೂಬ್ರಿಕೇಷನ್‌ ಮತ್ತು ಎಲ್‌ಪಿಜಿ ಅನಿಲ್‌ ಸೋರಿಕೆಯಾಗಿ ಕಾಣಿಸಿಕೊಂಡಿದೆ. ಟರ್ಬೈನ್‌ಗೆ ಬೆಂಕಿ ಕಿಡಿ ತಾಕಿ ಸ್ಫೋಟಗೊಂಡಿದೆ. ಈ ವೇಳೆ ಕೆಲಸದಲ್ಲಿ ನಿರತರಾಗಿದ್ದ ಎಂಜಿನಿಯರ್‌ಗಳು ಅಪಾಯ ಸಿಲುಕಿದ್ದಾರೆ. ಅವರಲ್ಲಿ ಇಬ್ಬರಿಗೆ ಬೆಂಕಿ ಸುಟ್ಟು ಗಾಯವಾಗಿವೆ. ಕೂಡಲೇ ವೈಸಿಸಿಪಿಪಿ ಆವರಣದಲ್ಲೇ ಇದ್ದ ಅಗ್ನಿ ಶಾಮಕ ಸಿಬ್ಬಂದಿ, ಎರಡು ವಾಹನಗಳಲ್ಲಿ ಬೆಂಕಿ ನಂದಿಸಲು ಕಾರ್ಯಾಚರಣೆ ಶುರು ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಬೆಂಕಿ ಕೆನ್ನಾಲೆಗೆ ಕಟ್ಟಡ ವ್ಯಾಪಿಸಿದೆ. ಈ ವಿಷಯ ತಿಳಿದ ಅಧಿಕಾರಿಗಳು, ಮತ್ತೆ ಹೆಚ್ಚುವರಿ ಅಗ್ನಿಶಾಮಕ ದಳವನ್ನು ಕರೆಸಿಕೊಂಡಿದ್ದಾರೆ. ಕೊನೆಗೆ ಮೂರು ತಾಸುಗಳ 6 ವಾಹನಗಳು ಕಾರ್ಯಾಚರಣೆ ಬೆಂಕಿ ಆರಿಸಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಸಂಬಂಧ ಯಲಹಂಕ ಉಪ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಮೆಟ್ರೋದ 28 ಸಿಬ್ಬಂದಿಗೆ ಕೊರೋನಾ ದೃಢ

ಗಾಯಾಳುಗಳ ವಿವರ ಹೀಗಿದೆ

ಎಚ್‌.ಎನ್‌.ಶ್ರೀನಿವಾಸ್‌, ಕೃಷ್ಣಭಟ್‌, ಮನೋಜ್‌, ನಿತೇಶ್‌, ನರಸಿಂಹಮೂರ್ತಿ, ಹರೀಶ್‌, ಅಕುಲ್‌ ರಘುರಾಮ್‌, ಶ್ರೀನಿವಾಸ್‌, ಅಶೋಕ್‌, ಡಿ.ಪಿ.ಶ್ರೀನಿವಾಸನ್‌, ಮಂಜಪ್ಪ, ಅಶ್ವತ್ಥ ನಾರಾಯಣ, ಕೆ.ಪಿ.ರವಿ, ಬಾಲರಾಜ್‌, ಮರಿಸ್ವಾಮಿ.
ವೈಸಿಸಿಪಿಪಿಯಲ್ಲಿ ಆಕಸ್ಮಿಕವಾಗಿ ಅನಿಲ ಸೋರಿಕೆಯಿಂದ ಅಗ್ನಿ ಕಾಣಿಸಿಕೊಂಡು ಸ್ಫೋಟವಾಗಿದೆ. ಘಟನೆ ಬಗ್ಗೆ ತನಿಖೆ ನಡೆದಿದ್ದು, ಕೆಪಿಸಿಇಎಲ್‌ನಿಂದ ಸಹ ವರದಿ ಕೇಳಿದ್ದೇವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು ತಿಳಿಸಿದ್ದಾರೆ. 

ಅಗ್ನಿ ದುರಂತ ಸಂಬಂಧ ಬಿಎಚ್‌ಇಎಲ್‌ ತಜ್ಞರ ನೇತೃತ್ವದಲ್ಲಿ ಆಂತರಿಕ ತನಿಖೆಗೆ ಸೂಚಿಸಲಾಗಿದೆ. ಈ ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ. ಮುಂದೆ ಈ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ಜಾಗ್ರತೆ ವಹಿಸಲಾಗುತ್ತದೆ ಎಂದು ವಿದ್ಯುತ್‌ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್‌ ಅವರು ತಿಳಿಸಿದ್ದಾರೆ.