ಅವಧಿ ಮುಗಿದ ಪೌಷ್ಟಿಕ ಆಹಾರ ಪೂರೈಕೆ: ಬಳಸಲು ತಾಯಂದಿರ ಹಿಂದೇಟು
ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಅವಧಿ ಮೀರಿದ ಪೌಷ್ಟಿಕ ಆಹಾರ ಪೂರೈಕೆ| ಬಳಸಲು ತಾಯಂದಿರ ಹಿಂದೇಟು| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಾನಾ ಗ್ರಾಮಗಳಿಗೆ ಪೂರೈಕೆಯಾದ ಅವಧಿ ಮೀರಿದ ಪೌಷ್ಟಿಕ ಆಹಾರ|
ಹನುಮಸಾಗರ(ಜ.25): ತಾಲೂಕಿನ ನಾನಾ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಈ ಬಾರಿ ಅವಧಿ ಮೀರಿದ ಪೌಷ್ಟಿಕ ಆಹಾರ ಪೂರೈಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಕ್ಕಳಿಗೆ ಪೌಷ್ಟಿಕ ಆಹಾರದ ರೂಪದಲ್ಲಿಯ ಪುಷ್ಟಿ ಹೆಸರಿನ ಆಹಾರ ಪ್ಯಾಕೆಟ್ ದಿನಾಂಕ ಮುಕ್ತಾಯವಾಗಿರುವುದರಿಂದ ತಾಯಂದಿರು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿ 6 ತಿಂಗಳ ಶಿಶುವಿನಿಂದ 3 ವರ್ಷದ ಮಗುವಿನ ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಹೆಸರುಬೇಳೆ, ಅಕ್ಕಿ ರವಾ, ಗೋದಿ ರವಾ, ಸಕ್ಕರೆ, ರಾಗಿ ಹಿಟ್ಟು ಒಗ್ಗೂಡಿಸಿ ಪುಷ್ಟಿ ಎಂಬ ಆಹಾರ, ಬಹುಧಾನ್ಯ ಮಿಶ್ರಿತ ಪಾಯಸದ 1 ಕೆಜಿ ಕಿಟ್ ವಿತರಿಸಲಾಗುತ್ತದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಯಂದಿರು ಪ್ರತಿ ತಿಂಗಳು ಅದನ್ನು ಪಡೆದು ತಮ್ಮ ಮಕ್ಕಳಿಗೆ ಬೇಯಿಸಿ ಉಣಬಡಿಸುತ್ತಾರೆ. ಆದರೆ ಈ ತಿಂಗಳು ಪೂರೈಕೆಯಾಗಿರುವ ಪುಷ್ಟಿ ಪ್ಯಾಕೆಟ್ ಮೇಲೆ ಸಿದ್ಧಗೊಂಡಿರುವ ದಿನಾಂಕ ಅಕ್ಟೋಬರ್ 2019 ಹಾಗೂ ಉಪಯೋಗಿಸುವ ಮುಕ್ತಾಯದ ದಿನಾಂಕ ನ. 30 ಇದೆ. ಇದರಿಂದಾಗಿ ಇದನ್ನು ಉಪಯೋಗಿಸಬೇಕೋ, ಬೇಡವೋ ಎಂಬ ಅನುಮಾನ ಕಾಡುತ್ತಿದೆ. ಇದನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡುವ ಆಹಾರ ಸೇವನೆ ಮತ್ತು ಸಂಸ್ಕರಣ ಘಟಕದ (ಎಂಎಸ್‌ಪಿ) ವತಿಯಿಂದ ಈ ರೀತಿಯ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.
ಇದರ ಬಗ್ಗೆ ಮಾಹಿತಿ ಇರಲಿಲ್ಲ. ಸದ್ಯಕ್ಕೆ ಎಲ್ಲ ಮೇಲ್ವಿಚಾರಕರಿಗೆ ಮಾಹಿತಿ ನೀಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರೈಕೆ ಮಾಡದಂತೆ ತಿಳಿಸಲಾಗುವುದು. ಕುಷ್ಟಗಿಯ ಎಂಎಸ್‌ಪಿ ಘಟಕಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಕುಷ್ಟಗಿ ಸಿಡಿಪಿಒ ವೀರೇಂದ್ರ ನಾವದಗಿ ಅವರು ಹೇಳಿದ್ದಾರೆ.
ಪುಷ್ಟಿ ಆಹಾರದ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಅತಿಸಾರ ಆಗಿದ್ದರಿಂದ ಮಗನಿಗೆ ಖಾಸಗಿ ವೈದ್ಯರ ಹತ್ತಿರ ಚಿಕಿತ್ಸೆ ಕೊಡಿಸಲಾಗಿದೆ ಎಂದು ಯರಗೇರಿ ಗ್ರಾಮಸ್ಥ ಬಸವರಾಜ ಬಂಡರಗಲ್ ಹೇಳಿದ್ದಾರೆ.