Mysuru : ಸಿರಿಧಾನ್ಯಗಳ ಆಹಾರ ವಸ್ತು ಪ್ರದರ್ಶನ
ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸರಣಿ ವೈವಿಧ್ಯಮಯ ಕಾರ್ಯಕ್ರಮಗಳು ಶುಕ್ರವಾರ ಮುಕ್ತಾಯವಾದವು.
ಮೈಸೂರು (ಅ.22): ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸರಣಿ ವೈವಿಧ್ಯಮಯ ಕಾರ್ಯಕ್ರಮಗಳು ಶುಕ್ರವಾರ ಮುಕ್ತಾಯವಾದವು.
’ಸಿರಿ ಸಂಭ್ರಮ’ ಶೀರ್ಷಿಕೆಯಲ್ಲಿ ಸಿರಿಧಾನ್ಯಗಳ (Millets) ಮಹತ್ವ ಮತ್ತು ಆರೋಗ್ಯಕ್ಕಾಗಿ ಆಯುರ್ವೇದ ಆಹಾರ (Food) ಸೂತ್ರಗಳ ಪ್ರದರ್ಶನ ಏರ್ಪಡಿ ಸಲಾಗಿತ್ತು. ಈ ಪ್ರದರ್ಶನವನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ದಾಕ್ಷಾಯಿಣಿ ಉದ್ಘಾಟಿಸಿದರು. ನಂತರು ಅವರು ಮಾತನಾಡಿ, ಆಯುರ್ವೇದ ಆಹಾರ ಪದ್ಧತಿಯನ್ನು ಎಲ್ಲರೂ ಅನುಸರಿಸುವಂತೆ ಕರೆ ನೀಡಿದರು.
ಮಧ್ಯಾಹ್ನ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಗಜಾನನ ಹೆಗಡೆ ಮಾತನಾಡಿ, ಪ್ರತಿ ಮನೆಯಲ್ಲಿಯೂ ಆಯುರ್ವೇದ ಇದೆ. ಮೊದಲು ಮನೆಯ ಮದ್ದು ಬಳಸುತ್ತಾರೆ. ಗುಣವಾಗದಿದ್ದಾಗ ನಂತರ ವೈದ್ಯರ ಬಳಿ ಹೋಗುತ್ತಾರೆ. ಆದ್ದರಿಂದ ಆಯುರ್ವೇದ ವೈದ್ಯರು ಮೊದಲು ಈ ಪದ್ಧತಿ ಬಳಸಬೇಕು. ನಂತರ ಬೇರೆಯವರಿಗೆ ಸಲಹೆ ಮಾಡಬೇಕು ಎಂದರು.
ನಾವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು. ಕೋವಿಡ್-19 ಸಂದರ್ಭದಲ್ಲಿ ಮಾಧ್ಯಮದವರ ಸಹಕಾರದಿಂದ ಬಹಳಷ್ಟುಸಾರ್ವಜನಿಕರು ಆಯುರ್ವೇದ ಆಸ್ಪತ್ರೆಯ ಸೌಲಭ್ಯ ಸದುಪಯೋಗ ಮಾಡಿಕೊಂಡರು ಎಂದು ಅವರು ಮೆಚ್ಚುಗೆ ಸೂಚಿಸಿದರು.
ಮುಖ್ಯ ಅತಿಥಿಯಾಗಿದ್ದ ಶಾರಾದವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಮಾತನಾಡಿ, ಆಯುರ್ವೇದ ತಾಯಿ, ಅಲೋಪತಿ ಹೆಂಡತಿ ಇದ್ದಂತೆ. ಆಯುರ್ವೇದ ವೈದ್ಯ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂಬುದನ್ನ ಮರೆಯಬಾರದು ಎಂದರು.
ಪ್ರತಿಯೊಬ್ಬರೂ ಆಹಾರ- ವಿಚಾರ- ವಿಹಾರ- ಚಿಕಿತ್ಸೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಶ್ರೀಧರ ಆರ್. ಭಟ್ಟ, ಸರ್ಕಾರಿ ಆಯುರ್ವೇದ ಸಂಶೋಧನಾ ರಕೇಂದ್ರದ ಸಹಾಯ ನಿರ್ದೇಶಕ ಡಾ. ಲಕ್ಷ್ಮೇನಾರಾಯಣ ಶೆಣೈ ಮಾತನಾಡಿದರು.
ವೈದ್ಯರಾದ ಮೈತ್ರಿ, ಶಶಿರೇಖಾ, ಸಂಜಯ್‌ಕುಮಾರ್, ವಾಸುದೇವ ಚಾಟೆ, ಎಚ್.ವಿ. ನಾಗರಾಜ್ ಸುನೀತಾ ಸಿದ್ದೇಶ್ ಅವರು ಆಯುರ್ವೇದ ಅರಿವಿನ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಚಿಕಿತ್ಸಾ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ವರದಿ ಮಂಡಿಸಿದರು. ಜ್ಯೋತಿ ಮೂರ್ತಿ ಬಹುಮಾನ ವಿಜೇತರ ಪಟ್ಟಿಪ್ರಕಟಿಸಿದರು.
ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾರ್ವಜನಿಕ ವಿಭಾಗದಲ್ಲಿ ಕಲ್ಪನಾ ಅರಸ್, ಕೋಕಿಲಾ, ಯದುಗಿರಿ, ವಿದ್ಯಾರ್ಥಿಗಳ ವಿಭಾಗದಲ್ಲಿ ಶಾರದಾ, ಗಯಾನ, ವಿನಿತಾ, ಜ್ಞಾನಶ್ರೀ, ಗಂಗಾಧರ್, ವಿಶಾಲ್, ಬಹುಮಾನ ಪಡೆದರು. ಆಶಾ, ಮೇಘಾ ವಿಶೇಷ, ಮಂಜುಳಾ, ಭವಾನಿ ಸಂತೋಷ್ ಭಾಗವಹಿಸುವರ ಮೆಚ್ಚುಗೆ ಬಹುಮಾನ ಪಡೆದರು.
ಡಾ.ಲಲಿತಾ, ದೀಪಿಕಾ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳು ಧನ್ವಂತರಿ ಸ್ತವನ, ನಾಡಗೀತೆ ಹಾಡಿದರು. ಡಾ.ಕೆ.ವಿ. ವೆಂಕಟಕೃಷ್ಣ ಸ್ವಾಗತಿಸಿದರು. ಡಾ.ಎಸ್.ಜಿ. ಆದಶ್‌ರ್ ವಂದಿಸಿದರು. ಸಿದ್ದರಾಮ ಗುಳೇದ್ ನಿರೂಪಿಸಿದರು.
ರಾಗಿಯಿಂದ ಅಚ್ಚರಿ ಲಾಭ
ಸಿರಿಧಾನ್ಯಗಳಲ್ಲಿ ರಾಗಿ ಕೂಡ ಒಂದು. ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಅದ್ಭುತ ಆರೋಗ್ಯ ಲಾಭ ಸಿಗುತ್ತವೆ. ರಾಗಿ (millet) ಹೆಚ್ಚಾಗಿ ದಕ್ಷಿಣ ಭಾರತ ಜನರು ಹೆಚ್ಚಾಗಿ ಸೇವಿಸುವ ಏಕದಳ ಆಹಾರವಾಗಿದೆ. ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ. ಅದಲ್ಲದೆ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇದು ಅತ್ಯುತ್ತಮ ಆಹಾರ. ರಾಗಿಯು ಪುರಾತನ ಧಾನ್ಯವಾಗಿದ್ದು, ಅದ್ಭುತ ಆರೋಗ್ಯ ಪ್ರಯೋಜನಗಳಿಂದ ಹೆಸರುವಾಸಿಯಾಗಿದೆ. ಇದು ಉತ್ತಮ ಕಾರ್ಬೋಹೈಡ್ರೇಟ್ ಗಳ ಶಕ್ತಿ ಕೇಂದ್ರವಾಗಿದ್ದು, ಅದಲ್ಲದೆ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಲುಣಿಸುವ ತಾಯಂದಿರು ತಮ್ಮ ಶಿಶುಗಳಿಗೆ (baby) ಸಾಕಷ್ಟು ಹಾಲು ಉತ್ಪಾದಿಸಲು ಸಾಧ್ಯವಾಗದಿದ್ದಲ್ಲಿ ರಾಗಿಯನ್ನು ಸೇವಿಸಬಹುದು. ರಾಗಿಯಿಂದ ನಮ್ಮ ದೇಹಕ್ಕೆ ಆಗುವ ಲಾಭಗಳ ವಿವರ ಇಲ್ಲಿದೆ.
ಮಧುಮೇಹ ನಿಯಂತ್ರಣಕ್ಕೆ ರಾಗಿ ಸಹಾಯಕಾರಿ:
ರಾಗಿಯಲ್ಲಿ ಮೆಗ್ನೀಸಿಯಮ್ ಅಂಶ ಹೇರಳವಾಗಿದ್ದು, ಇದು ದೇಹದ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ರಾಗಿಯಲ್ಲಿ ಹೆಚ್ಚಿನ ಮಟ್ಟದ ಫೈಬರ್ ಒಳಗೊಂಡಿರುವುದರ ಜೊತೆಗೆ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ, ಇದು ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಅಕ್ಕಿ, ಗೋಧಿ (Wheet) ಮತ್ತು ಜೋಳದಂತಹ ಸಾಮಾನ್ಯವಾಗಿ ಬಳಸುವ ಧಾನ್ಯಗಳಿಗಿಂತ ಹೆಚ್ಚಿನ ಅಂಶಗಳನ್ನು ಹೊಂದಿದೆ . ಅದಲ್ಲದೆ ರಾಗಿಯಲ್ಲಿರುವ ಪಾಲಿಫಿನಾಲ್ ಅಂಶಗಳು ಮಧುಮೇಹದ ಚಿಕಿತ್ಸೆಯಲ್ಲಿ ಮತ್ತು ಅದರ ಕೆಲವು ತೊಡಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಸಮೃದ್ಧ ಖನಿಜಗಳ ಆಗರ:
ರಾಗಿಯಲ್ಲಿ ಕ್ಯಾಲ್ಸಿಯಂ ಅತ್ಯಂತ ಹೇರಳವಾಗಿ ಲಭ್ಯವಾಗುತ್ತದೆ. 100 ಗ್ರಾಂ ರಾಗಿಯಲ್ಲಿ 344 ಮಿ.ಗ್ರಾಂ ಕ್ಯಾಲ್ಸಿಯಂ ಇದ್ದು, ಮೂಳೆಗಳು (Bones) ಮತ್ತು ಹಲ್ಲುಗಳ ಆರೋಗ್ಯಕ್ಕೆ ಸಹಾಯಕವಾಗಿದೆ. ಇದು ರಂಜಕ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಿಂದಲೂ ಸಮೃದ್ಧವಾಗಿದೆ. ರಾಗಿಯಲ್ಲಿ ರಂಜಕವೂ ಕ್ಯಾಲ್ಸಿಯಂನೊಂದಿಗೆ ಸೇರಿ ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. ರಾಗಿಯು ಮಕ್ಕಳು ಮತ್ತು ವಯಸ್ಸಾದವರಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ (Vitamin D) ನೀಡುವ ಅತ್ಯುತ್ತಮ ಮೂಲ. ಇದು ಮಕ್ಕಳಲ್ಲಿ ಮೂಳೆ ಬೆಳವಣಿಗೆಗೆ ಮತ್ತು ವಯಸ್ಕರಲ್ಲಿ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೇ ಬೆಳೆಯುವ ಮಕ್ಕಳಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿರುವುದರಿಂದ ರಾಗಿಯನ್ನು ಗಂಜಿ ರೂಪದಲ್ಲಿ ನೀಡಬಹುದು.
ವೇಟ್ ಲಾಸ್ ಮಾಡಲು ಉತ್ತಮ ಆಹಾರ:
ರಾಗಿಯಲ್ಲಿನ ಹೆಚ್ಚಿನ ಪ್ರಮಾಣದ ನಾರಿನಂಶವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ. ರಾಗಿಯು (millet) ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ, ನಮ್ಮ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಏಕೆಂದರೆ ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ರಾಗಿಯಲ್ಲಿನ ಹೆಚ್ಚಿನ ಪ್ರಮಾಣದ ಫೈಬರ್ ಅಂಶವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ
ಇದನ್ನೂ ಓದಿ: ನೀವು ತಿನ್ನೋದು ನಕಲಿ ಡ್ರೈ ಫ್ರುಟ್ಸ್ ಅಲ್ಲಾ ತಾನೆ…? ಪತ್ತೆ ಹಚ್ಚೋದು ಹೇಗೆ?
ತ್ವಚೆ ಕಾಪಾಡಿಕೊಳ್ಳಲು ರಾಗಿ ಉತ್ತಮ:
ತ್ವಚೆಯನ್ನು ಕಾಪಾಡಿಕೊಳ್ಳಲು ರಾಗಿ ಅದ್ಭುತ ಮೂಲವಾಗಿದೆ. ರಾಗಿಯಲ್ಲಿರುವ ವಿಟಮಿನ್ ಇ (Vitamin E) ಮತ್ತು ಕ್ಯಾಲ್ಸಿಯಂ ಹೊಸ ಮತ್ತು ಆರೋಗ್ಯಕರ ಚರ್ಮವನ್ನು ರೂಪಿಸಲು ಮತ್ತು ಚರ್ಮದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆ ಇದರಲ್ಲಿರುವ ಮೆಥಿಯೋನಿನ್ ಮತ್ತು ಲೈಸಿನ್ ನಂತಹ ಪ್ರಮುಖ ಆಮ್ಲಗಳು ಚರ್ಮದ (Skin) ಅಂಗಾಂಶಗಳನ್ನು ಸುಕ್ಕುಗಳು ಮತ್ತು ಕುಗ್ಗುವಿಕೆಯಿಂದ ತಡೆಯುತ್ತದೆ. ರಾಗಿಯು ನಿಮ್ಮ ಚರ್ಮದ ಮೇಲಿನ ಕಲೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ರಾಗಿ ಹಿಟ್ಟಿನ ಸಾಮಾನ್ಯ ಪ್ರಯೋಜನವೆಂದರೆ ಚರ್ಮವನ್ನು ಪುನರುಜ್ಜೀವನಗೊಳಿಸುವುದು. ಅದಲ್ಲದೆ ಕೂದಲಿಗೆ ರಾಗಿ ಹೇರ್ ಮಾಸ್ಕ್ ಉಪಯೋಗಿಸಿದರೆ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು.