ಮಂಗಳೂರು(ಡಿ.23): ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಸಾವಿಗೀಡಾಗಿರುವ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಪೊಲೀಸ್‌ ಅಧಿಕಾರಿಗಳನ್ನು ಕೂಡಲೇ ಅಮಾನತಗೊಳಿಸಿ ಜೈಲಿಗಟ್ಟಿ. ಜೊತೆಗೆ ನೈತಿಕತೆ ಇದ್ದರೆ ಮುಖ್ಯಮಂತ್ರಿಗಳು ಗೃಹಸಚಿವರನ್ನು ಸಂಪುಟದಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗೋಲಿಬಾರ್‌ ಘಟನೆ ಕುರಿತು ಯಾವುದೇ ತನಿಖೆಗೆ ನಾನು ಒತ್ತಾಯಿಸುವುದಿಲ್ಲ ಎಂದು ಅವರು ಈ ಸಂದರ್ಭ ಹೇಳಿದ್ದಾರೆ. ಕರ್ಫ್ಯೂ ಸಡಿಲಗೊಂಡ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ದಿಢೀರನೆ ಮಂಗಳೂರಿಗೆ ಆಗಮಿಸಿದ ಎಚ್‌.ಡಿ.ಕುಮಾರಸ್ವಾಮಿ, ಗೋಲಿಬಾರ್‌ನಿಂದ ಮೃತಪಟ್ಟಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ

ಮಂಗಳೂರಿಗೆ ಹೊರಭಾಗದ ವಾಹನಗಳ ಪ್ರವೇಶ ನಿರ್ಬಂಧ

ನಂತರ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ನಡೆದಿರುವ ಹಿಂಸಾಚಾರ ಹಾಗೂ ಗೋಲಿಬಾರ್‌ ಘಟನೆ ಕುರಿತು ರಾಜ್ಯ ಸರ್ಕಾರ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಧಿವೇಶನದಲ್ಲಿ ಪ್ರಸ್ತಾಪ:

ಕರಾವಳಿ ಜಿಲ್ಲೆಯೇನು ಪೊಲೀಸ್‌ ರಾಜ್ಯವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮಂಗಳೂರು ದುರ್ಘಟನೆಯ ವಿಚಾರವನ್ನು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು. ಶುಕ್ರವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ಪೊಲೀಸರು ನುಗ್ಗಿ ದಾಂದಲೆ ನಡೆಸಿದ್ದಾರೆ. ಬಹುಶಃ ಆರೆಸ್ಸೆಸ್‌ ಕಾರ್ಯಕರ್ತರು ಪೊಲೀಸ್‌ ಡ್ರೆಸ್‌ ಹಾಕಿ ಆಸ್ಪತ್ರೆಗೆ ನುಗ್ಗಿದರೇ ಎಂಬ ಅನುಮಾನ ಉಂಟಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.