ತುಮಕೂರು (ನ.24):  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಆರಂಭಿಸಿದ್ದು, ಇನ್ನು ಮುಂದೆ ಕೊರೋನಾ ಕಾರಣಕ್ಕಾಗಿ ಪರೀಕ್ಷೆ ನಡೆಸದೇ ಪದವಿ ಕಾಲೇಜು ವಿದ್ಯಾರ್ಥಿಗಳನ್ನು ಪಾಸ್‌ ಮಾಡಲು ಅವಕಾಶ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದರು.

ತುಮಕೂರು ವಿಶ್ವವಿದ್ಯಾಲಯದ ಪದವಿ ಕಾಲೇಜಿಗೆ ಭೇಟಿ ನೀಡಿ ತರಗತಿಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವಿದ್ಯಾರ್ಥಿಗಳನ್ನು ಆಂತರಿಕ ಅಂಕಗಳ ಆಧಾರದ ಮೇಲೆ ಮೊದಲ ಮತ್ತು ಎರಡನೇ ಸೆಮಿಸ್ಟರ್‌ನಲ್ಲಿ ತೇರ್ಗಡೆ ಮಾಡಿದ್ದೆವು. ಇನ್ನು ಮುಂದೆ ಕೊರೋನಾ ಮುಂದು ಮಾಡಿಕೊಂಡು ಪಾಸ್‌ ಮಾಡುವುದಿಲ್ಲ ಎಂದರು.

ಶಾಲೆ ಪುನಾರಂಭ :ಪೋಷಕರು, ಆಡಳಿತ ಮಂಡಳಿ, ಸಾರ್ವಜನಿಕ ವಯದ ಅಭಿಪ್ರಾಯಗಳಿವು ...

ವಿದ್ಯಾರ್ಥಿಗಳಿಗಾಗಿ ಒಳ್ಳೆಯ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುತ್ತೇವೆ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮುಂದಿನ ತರಗತಿಗೆ ಹೋಗಬೇಕು ಎಂದರು.

ಇದುವರೆವಿಗೂ ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳು ಮಾತ್ರ ನಡೆಯುತ್ತಿದ್ದವು. ಆದರೆ, ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾಲೇಜುಗಳನ್ನು ಆರಂಭಿಸಿರುವುದರಿಂದ ಆಫ್‌ ಲೈನ್‌ ತರಗತಿಗಳು ನಡೆಯುತ್ತಿವೆ. ಯಾವುದೇ ಒತ್ತಡ ಇಲ್ಲದೆ ಸ್ವ ಇಚ್ಛೆಯಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬಹುದಾಗಿದೆ ಎಂದರು.

ವಿದ್ಯಾರ್ಥಿ ಜೀವನ ಕಲಿಕೆಗೆ ಮೀಸಲಾಗಿರಬೇಕು. ಹಾಗಾಗಿ ವಿದ್ಯಾರ್ಥಿಗಳು ಬೇರೆ ವಿಚಾರಗಳ ಬಗ್ಗೆ ಗಮನ ಕೊಡದೆ ಪರೀಕ್ಷೆಗಳನ್ನು ಬರೆಯುವ ನಿಟ್ಟಿನಲ್ಲಿ ಅಧ್ಯಯನಶೀಲರಾಗಬೇಕು ಎಂದು ಅವರು ಸಲಹೆ ಮಾಡಿದರು.

ಪದವಿ ಕಾಲೇಜುಗಳಲ್ಲಿ ಇದುವರೆಗೂ ಶೇ.9ರಷ್ಟುವಿದ್ಯಾರ್ಥಿಗಳ ಹಾಜರಾತಿ ಕಂಡು ಬರುತ್ತಿದ್ದು, ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳವಾಗುತ್ತಿದೆ. ಎಲ್ಲ ಮುಂಜಾಗ್ರತಾ ಕ್ರಮ ವಹಿಸಿ ಕಾಲೇಜುಗಳನ್ನು ನಡೆಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಕೋವಿಡ್‌ ಪರೀಕ್ಷೆ ವರದಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು 48 ಗಂಟೆ ಬದಲು 24 ಗಂಟೆಯೊಳಗೆ ನೀಡಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತ್ವರಿತವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಪದವಿಪೂರ್ವ ಕಾಲೇಜು ಸೇರಿದಂತೆ ಶಾಲೆಗಳನ್ನು ಆರಂಭಿಸಿಲ್ಲ. ಇಂದು ಶಾಲೆಗಳ ಆರಂಭ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದ್ದು, ಒಂದ ಸೂಕ್ತ ತೀರ್ಮಾನವಾಗಲಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರಮುಖ ಘಟ್ಟವಾಗಿದೆ. ಹಾಗಾಗಿ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ತರಗತಿಗಳನ್ನು ಆರಂಭಿಸುವ ಕುರಿತು ತೀರ್ಮಾನವಾದರೆ ಒಳಿತು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಕೇಳಲು ಮೊಬೈಲ್‌ ಸಂಪರ್ಕಗಳು ಸಮರ್ಪಕವಾಗಿ ಸಿಗದ ಕಾರಣ ಎಷ್ಟೋ ಮಕ್ಕಳು ಆನ್‌ಲೈನ್‌ ಪಾಠದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ 10 ನೇ ತರಗತಿ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವುದು ಸೂಕ್ತ ಎಂದರು.

ಇದೇ ಸಂದರ್ಭದಲ್ಲಿ ಪದವಿ ತರಗತಿಗಳಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್‌್ಥನಾರಾಯಣ ಅವರು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರ ಅಭಿಪ್ರಾಯಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್‌, ತುಮಕೂರು ವಿವಿ ಕುಲಪತಿ ಡಾ. ಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.