ಕಲೆ ಮತ್ತು ಕ್ರೀಡೆಗಳ ಉಳಿವಿಗೆ ಎಲ್ಲರೂ ಶ್ರಮಿಸಿ: ಅಪ್ಪಚ್ಚು ರಂಜನ್
ಮಾನಸಿಕ, ದೈಹಿಕ ಕಸರತ್ತಿನ ಜತೆಗೆ ಮನರಂಜನೆಗೆ ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿವೆ. ಕಣ್ಮರೆಯಾಗುತ್ತಿರುವ ಕಲೆ ಮತ್ತು ಕ್ರೀಡೆ ಉಳಿವಿಗೆ ಎಲ್ಲರೂ ಶ್ರಮಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು
ಮಡಿಕೇರಿ (ಜು.24): ಮಾನಸಿಕ, ದೈಹಿಕ ಕಸರತ್ತಿನ ಜತೆಗೆ ಮನರಂಜನೆಗೆ ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಜನಮಾನಸದಿಂದ ದೂರವಾಗುತ್ತಿರುವ ಕಲೆ ಮತ್ತು ಕ್ರೀಡೆ ಉಳಿವಿಗೆ ಎಲ್ಲರೂ ಶ್ರಮಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ, ಭಾರತೀಯ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಗ್ಗೋಡ್ಲು ಗ್ರಾಮದ ಪಿ.ಬಿ. ಕುಶಾಲಪ್ಪ ಅವರ ಗದ್ದೆಯಲ್ಲಿ 30ನೇ ವರ್ಷದ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯ ಕಾಲದಲ್ಲಿ ಕೊಡಗಿನಲ್ಲಿ(Kodagu) ಪ್ರತಿಯೊಬ್ಬ ಜಮೀನ್ದಾರರು ಅವರ ಗದ್ದೆ ನಾಟಿ ಮುಗಿದ ನಂತರ ಆಟೋಟ ಸ್ಪರ್ಧೆ ಏರ್ಪಡಿಸುತ್ತಿದ್ದರು. ಎಲ್ಲರೂ ಒಂದಾಗಿ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರೊಂದಿಗೆ ಬೆರೆಯುತ್ತಿದ್ದರು ಎಂದರು.
ಇದೆಂತಾ ಅನ್ಯಾಯ?: ದಸರಾದಿಂದ ಗ್ರಾಮೀಣ ಕ್ರೀಡೆಗೆ ಗೇಟ್ ಪಾಸ್?
ಜಿಂದಾಲ್(Jindal) ಹಾಗೂ ಧರ್ಮಸ್ಥಳ(Dharmastala)ದ ಕಡೆ ಮಡ್ ಬಾತ್(Mud bath) ಮಾಡುತ್ತಾರೆ. ಮಡ್ ಬಾತ್ ಎಂದರೆ ಮಣ್ಣನ್ನು ಮೈಗೆ ಹಚ್ಚಿ ಒಣಗಿದ ನಂತರ ಸ್ನಾನ ಮಾಡುವ ಕ್ರಮ. ಇದು ಆಯುರ್ವೇದ ಚಿಕಿತ್ಸೆಯ ಒಂದು ಭಾಗವಾಗಿದೆ ಎಂದರು. ಈಗಿನ ಹಾಗೆ ಹಳೆ ಕಾಲದಲ್ಲಿ ಹೆಚ್ಚಾಗಿ ಯಂತ್ರೋಪಕರಣಗಳು ಇರಲಿಲ್ಲ. ಒಬ್ಬರಿಗೊಬ್ಬರು ಸೇರಿಕೊಂಡು ನಾಟಿ ಕೆಲಸ, ತೋಟದ ಕೆಲಸಗಳನ್ನು ಮಾಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಎಲ್ಲ ಕೆಲಸಗಳು ಮುಗಿದ ನಂತರ ಆಟೋಟ ಸ್ಪರ್ಧೆ ಏರ್ಪಡಿಸಿ ಎಲ್ಲರೂ ಸೇರಿ ಒಟ್ಟಾಗಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು ಎಂದು ಅಪ್ಪಚ್ಚು ರಂಜನ್ ಹೇಳಿದರು.
ಹಿಂದಿನಿಂದಲೂ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳು ದೊರೆಯತ್ತದೆ. ಕ್ರೀಡಾಪಟುಗಳು ಇಂತಹ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಿವಿಧ ಸ್ಪರ್ಧೆಗಳು:
ಕ್ರೀಡಾಕೂಟದಲ್ಲಿ ಮಕ್ಕಳಿಂದ ಹಿಡಿದು ವೃದ್ದರು ಕೆಸರುಗದ್ದೆಯಲ್ಲಿ ಮಿಂದೆದ್ದು ಸಂಭ್ರಮಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಕ್ರೀಡಾಪಟುಗಳು ಭಾಗವಹಿಸಿದರು. ಶಾಲಾ ಮಕ್ಕಳು, ಮಹಿಳೆಯರು, ಪುರುಷರು ಹಗ್ಗಜಗ್ಗಾಟ, ಓಟ, ಥ್ರೋಬಾಲ…, ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದರು. ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ವೀಕ್ಷಣೆಗೆ ದೂರದೂರುಗಳಿಂದ ಕ್ರೀಡಾಭಿಮಾನಿಗಳು ಆಗಮಿಸಿ, ತುಂತುರು ಮಳೆಯ ನಡುವೆಯು ಕೊಡೆ ಹಿಡಿದು ಕ್ರೀಡಾಕೂಟವನ್ನು ಸಂಭ್ರಮಿಸಿದರು.
ಜನಪದ ಕ್ರೀಡೆ ಕಂಬಳವೀಗ ಒಡೆದ ಮನೆ!, ಸಾಂಪ್ರದಾಯಿಕ ಆಯೋಜಕರಿಲ್ಲವೇ ಮಾನ್ಯತೆ?
ಹಾಕತ್ತೂರು ಗ್ರಾ.ಪಂ. ಸದಸ್ಯರಾದ ಪೊನ್ನಚ್ಚನ ಲೋಕೇಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ್, ಮಡಿಕೇರಿ ತಾಲೂಕು ಯುವ ಘಟಕದ ಅಧ್ಯಕ್ಷ ಬಾಲಾಡಿ ದಿಲೀಪ್ ಕುಮಾರ್, ಕಗ್ಗೋಡ್ಲು ಕಾವೇರಿ ಯುವಕ ಸಂಘದ ಅಧ್ಯಕ್ಷ ಚಿದಾನಂದ, ತೀರ್ಪುಗಾರರಾದ ಬೆಣ್ಣೆ ಕೃಷ್ಣ, ಕೊಚನ್ ತೇಜಸ್ವಿ, ರತೀಶ್, ಬಾಳಾಡಿ ಚಿನ್ನು, ಅಂದಾಯಿ ಇತರರು ಇದ್ದರು. ಕೇಕಡ ಇಂದುಮತಿ, ನೇತ್ರಾವತಿ ಪ್ರಾರ್ಥಿಸಿದರು. ಪಿ.ಪಿ. ಸುಕುಮಾರ್ ಸ್ವಾಗತಿಸಿದರು, ಸಾಬ ಸುಬ್ರಮಣಿ ನಿರೂಪಿಸಿ, ವಂದಿಸಿದರು.
ಆಟೋಟ ಸ್ಪರ್ಧೆಗಳ ವಿವರಗಳು: ಹಗ್ಗ ಜಗ್ಗಾಟ ಸಾರ್ವಜನಿಕ ಪುರುಷರ ವಿಭಾಗ ಮತ್ತು ಮಹಿಳೆಯರ ವಿಭಾಗ, ವಾಲಿಬಾಲ್ ಸಾರ್ವಜನಿಕ ಪುರುಷರ ವಿಭಾಗ, ಥ್ರೋಬಾಲ್ ಸಾರ್ವಜನಿಕ ಮಹಿಳೆಯರ ವಿಭಾಗ, ಕೆಸರು ಗದ್ದೆ ಸ್ಪರ್ಧೆಗಳು : ಕಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ ಮತ್ತು ಬಾಲಕಿಯರಿಗೆ 50 ಮೀ. ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ ಮತ್ತು ಬಾಲಕಿಯರಿಗೆ 100 ಮೀ. ಓಟ, ಪ್ರೌಢ ಶಾಲಾ ಬಾಲಕರಿಗೆ ಮತ್ತು ಬಾಲಕಿಯರಿಗೆ 200 ಮೀ. ಓಟ, ಪದವಿಪೂರ್ವ ಕಾಲೇಜು ಬಾಲಕರಿಗೆ ಮತ್ತು ಬಾಲಕಿಯರಿಗೆ 400 ಮೀ.ಓಟ, 40 ವರ್ಷ ಮೇಲ್ಪಟ್ಟಪುರುಷರಿಗೆ ಮತ್ತು ಮಹಿಳೆಯರಿಗೆ 300 ಮೀ. ಓಟ. ಸಾರ್ವಜನಿಕ ಪುರುಷರಿಗೆ ಮತ್ತು ಮಹಿಳೆಯರಿಗೆ ಮುಕ್ತ ಓಟ ಹಾಗೂ ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ನಡೆಯಿತು.