Asianet Suvarna News Asianet Suvarna News

ಜನಪದ ಕ್ರೀಡೆ ಕಂಬಳವೀಗ ಒಡೆದ ಮನೆ!, ಸಾಂಪ್ರದಾಯಿಕ ಆಯೋಜಕರಿಲ್ಲವೇ ಮಾನ್ಯತೆ?

ಕರಾವಳಿಯ ಅದ್ಭುತ ಸಾಂಪ್ರದಾಯಿಕ ಜನಪದ ಕ್ರೀಡೆ ಕಂಬಳ ಕ್ಷೇತ್ರ ಈಗ ಒಡೆದ ಮನೆಯಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಕಂಬಳ ನಡೆಸುವವರನ್ನು ನಿರ್ಲಕ್ಷಿಸಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

coastal traditional sports Kambala organizers neglected gow
Author
Bengaluru, First Published Jul 23, 2022, 8:38 PM IST

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಮಂಗಳೂರು (ಜು.23): ಕರಾವಳಿಯ ಅದ್ಭುತ ಸಾಂಪ್ರದಾಯಿಕ ಜನಪದ ಕ್ರೀಡೆ ಕಂಬಳ ಕ್ಷೇತ್ರ ಈಗ ಒಡೆದ ಮನೆಯಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಕಂಬಳ ನಡೆಸುವವರನ್ನು ನಿರ್ಲಕ್ಷಿಸಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯ ಸಮಿತಿಯಲ್ಲಿ ಸಾಂಪ್ರದಾಯಿಕ ಕಂಬಳ ಕ್ಷೇತ್ರವನ್ನೇ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಗೊಂಡಿದೆ. ಅಂದು ಕಂಬಳಕ್ಕೆ ನಿಷೇಧ ಹೇರಿದಾಗ ಇಡೀ ಕರ್ನಾಟಕ ರಾಜ್ಯ ತುಳುನಾಡಿನ ಬೆಂಗಾವಲಿಗೆ ನಿಂತಿತ್ತು. ಇದೊಂದು ಸಾಂಪ್ರದಾಯಿಕ ಕ್ರೀಡೆ ಎಂಬ ಕಾರಣಕ್ಕೆ ಎಲ್ಲರೂ ಬೆಂಬಲಿಸಿದ್ದರು. ಈ ಜನಪದ ಕ್ರೀಡೆಯಲ್ಲಿ ಆರಾಧನಾ ಅಂಶಗಳಿವೆ ಎಂಬ ಕಾರಣಕ್ಕೆ, ಕಂಬಳ ಉಳಿಸಬೇಕೆಂದು ಪಣತೊಟ್ಟಿದ್ದರು. ಆದರೆ ಇದೀಗ ಕಂಬಳ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಕಂಬಳ ಆಯೋಜಕರ ನಿರ್ಲಕ್ಷ್ಯವಾಗುತ್ತಿದೆಯಂತೆ. ಈ ಬಗ್ಗೆ ಸಾಂಪ್ರದಾಯಿಕ ಕಂಬಳ ನಡೆಸುವವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂದು ಕಂಬಳ ಉಳಿಸಲು ಸಾಂಪ್ರದಾಯಿಕ ವಿಚಾರಗಳನ್ನು ಮುಂದಿರಿಸಲಾಯಿತು. ಆದರೆ ಇಂದು ರಾಜ್ಯ ಸಮಿತಿ ನಿರ್ಮಿಸುವಾಗ ಸಾಂಪ್ರದಾಯಿಕ ಕಂಬಳ ನಡೆಸುವವರನ್ನು ಸಂಪೂರ್ಣ ದೂರವಿರಿಸಲಾಗಿದೆ ಎಂದು ಸಾಂಪ್ರದಾಯಿಕ ಕಂಬಳ ನಡೆಸುವ ಬೈಂದೂರಿನ ವೆಂಕು ಪೂಜಾರಿ ಕೋಪ ಹೊರ ಹಾಕಿದ್ದಾರೆ.

ಕಂಬಳ ಆಧುನಿಕತೆಗೆ ತೆರೆದುಕೊಂಡಿದೆ. ಆರಾಧನೆಯ ಹೊರತಾದ ಅನೇಕ ಕಮರ್ಷಿಯಲ್ ವಿಚಾರಗಳು ಸೇರ್ಪಡೆಗೊಂಡಿವೆ. ತಂತ್ರಜ್ಞಾನಗಳ ಬಳಕೆ, ಸ್ಪರ್ಧೆ, ಪೈಪೋಟಿ , ಜೂಜು ಹೀಗೆ ನಾನಾ ಆಯಾಮಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಸ್ಪರ್ಧಾತ್ಮಕವಾಗಿ ಅತಿ ಹೆಚ್ಚು ಆಯೋಜನೆಯಾದರೆ, ಉಡುಪಿ ಜಿಲ್ಲೆಯ ಗ್ರಾಮೀಣ ತಾಲೂಕುಗಳಾದ ಕುಂದಾಪುರ ಬೈಂದೂರು ಮುಂತಾದ ಪ್ರದೇಶದಲ್ಲಿ ಇವತ್ತಿಗೂ ಆಡಂಬರವಿಲ್ಲದ ಸಾಂಪ್ರದಾಯಿಕ ಕಂಬಳ ನಡೆಯುತ್ತೆ. ಆದರೆ ಕಮರ್ಷಿಯಲ್ ಕಂಬಳಕ್ಕೆ ಒಟ್ಟಾಗುವ ಧನಸಂಗ್ರಹ, ಸಂಘಟಕರು ತೋರುವ ಆಸಕ್ತಿ ಸಾಂಪ್ರದಾಯಿಕ ಕಂಬಳದ ಬಗ್ಗೆ ಇಲ್ಲ. ಅತಿ ಹೆಚ್ಚು ಸಾಂಪ್ರದಾಯಿಕ ಕಂಬಳಗಳು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತೆ. ಆದರೆ ಯಾವುದೇ ಅನುದಾನ ಇವರಿಗೆ ಸಿಗುವುದಿಲ್ಲ.

ಜೋಡುಕೆರೆ ಕಂಬಳಗಳಿಗೆ 10 ಲಕ್ಷ ಅನುದಾನ ಕೊಟ್ಟರೆ, ಹಳ್ಳಿಗಳಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳಗಳಿಗೆ ನಯಾಪೈಸೆ ಸಿಗುತ್ತಿಲ್ಲ. ಮೇಲಾಗಿ ಇತ್ತೀಚಿಗೆ ರಚನೆಯಾದ ಕಂಬಳ ರಾಜ್ಯ ಸಮಿತಿಯಲ್ಲಿ, ಸಾಂಪ್ರದಾಯಕ ಕಂಬಳ ನಡೆಸುವ ಯಾರನ್ನೂ ಸದಸ್ಯರನ್ನಾಗಿ ಮಾಡಿಲ್ಲ. ಇದರಿಂದ ಕಂಬಳ ಕ್ಷೇತ್ರ ಒಡೆದ ಮನೆಯಾಗಿದೆ. ಈ ಬಗ್ಗೆ ಮಾತನಾಡಿರುವ ಹಿರಿಯ ಕಂಬಳ ಆಯೋಜಕ ಲೋಕೇಶ್ ಮಚ್ಚೊಟ್ಟು ಕಂಬಳ ಕ್ಷೇತ್ರದಲ್ಲಿ ಯಾರ ಸರ್ವಾಧಿಕಾರವೂ ನಡೆಯುವುದಿಲ್ಲ, ಯಜಮಾನರು, ವ್ಯವಸ್ಥಾಪಕರು ,ದುಡಿಯುವವರು ಎಲ್ಲರೂ ಜೊತೆಯಾಗಿ ಹೋಗಬೇಕು ಎಂದು ಹೇಳಿದ್ದಾರೆ.

ಅಂದು ಸಂಪ್ರದಾಯದ ಹೆಸರಲ್ಲಿ ಕಂಬಳನ್ನು ಉಳಿಸಲು ಹೋರಾಟ ನಡೆದಿತ್ತು. ಆದರೀಗ ಸಾಂಪ್ರದಾಯಿಕ ಕಂಬಳ ಆಯೋಜಕರಿಗೆ ಮಹತ್ವ ಸಿಗುತ್ತಿಲ್ಲ. ಒಡೆದ ಮನೆಯಾದ ಕಂಬಳ ಕ್ಷೇತ್ರ ಮತ್ತೆ ಒಂದಾಗಲಿ, ಪ್ರತಿಷ್ಠೆಗೆ ಬದಲಾಗಿ ಕರಾವಳಿಯ ಜನಪದ ಮತ್ತು ಮೆರೆದಾಡಲಿ ಎನ್ನುವುದು ಎಲ್ಲರ ಹಾರೈಕೆ.

Follow Us:
Download App:
  • android
  • ios