ಕುವೆಂಪು ಸಾಹಿತ್ಯವನ್ನು ಎಲ್ಲರೂ ಓದಬೇಕು: ಶಾಸಕ ಜಿ.ಬಿ. ಜೋತಿ ಗಣೇಶ್

ಯುಗದ ಕವಿ, ಜಗದ ಕವಿ ಎಂದು ಸಾಹಿತ್ಯಾಸಕ್ತರಿಂದ ಕರೆಯಿಸಿಕೊಳ್ಳುವ ಕುವೆಂಪು ಸಾಹಿತ್ಯವನ್ನು ಓದಿ, ಅರ್ಥ ಮಾಡಿಕೊಳ್ಳುವ ಮೂಲಕ, ಅದರಂತೆ ನಾವೆಲ್ಲರೂ ನಡೆದುಕೊಳ್ಳುವ ಅಗತ್ಯವಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ. ಜೋತಿ ಗಣೇಶ್ ತಿಳಿಸಿದರು.

Everyone should read Kuvempu Sahitya: MLA G.B. Jyothi Ganesh snr

  ತುಮಕೂರು :  ಯುಗದ ಕವಿ, ಜಗದ ಕವಿ ಎಂದು ಸಾಹಿತ್ಯಾಸಕ್ತರಿಂದ ಕರೆಯಿಸಿಕೊಳ್ಳುವ ಕುವೆಂಪು ಸಾಹಿತ್ಯವನ್ನು ಓದಿ, ಅರ್ಥ ಮಾಡಿಕೊಳ್ಳುವ ಮೂಲಕ, ಅದರಂತೆ ನಾವೆಲ್ಲರೂ ನಡೆದುಕೊಳ್ಳುವ ಅಗತ್ಯವಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ. ಜೋತಿ ಗಣೇಶ್ ತಿಳಿಸಿದರು.

ನಗರದ ಕುವೆಂಪು ನಗರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕುವೆಂಪು ಅವರ 119 ನೇ ಜನ್ಮ ದಿನಾಚರಣೆ ಹಾಗೂ 68ನೇ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆಗೆ ಪೂಜೆ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರು ಮೊದಲಿಗೆ ಇಂಗ್ಲಿಷ್‌ನಲ್ಲಿ ಸಾಹಿತ್ಯ ಬರೆಯಲು ಆರಂಭಿಸಿ, ಹಿರಿಯರ ಸಲಹೆಯಂತೆ ಮಾತೃಭಾಷೆ ಕನ್ನಡದಲ್ಲಿ ಬರೆಯುವ ಮೂಲಕ ಜಗಕ್ಕೆ ವಿಶ್ವ ಮಾನವ ಸಂದೇಶ ಸಾರಿದರು. ಕುವೆಂಪು ನಗರದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನಾನು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ಈ ಭಾಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇನ್ನೂ ಕೆಲವು ಬಾಕಿ ಇದ್ದು, ಅನುದಾನ ಬಂದ ತಕ್ಷಣ, ನೇತಾಜಿ ಪಾರ್ಕಿನಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳ ಬೇಡಿಕೆ ಇವೆ, ಅವುಗಳನ್ನು ಮಾಡಿಕೊಡುವ ಭರವಸೆಯನ್ನು ಶಾಸಕ ಜಿ.ಬಿ. ಜೋತಿ ಗಣೇಶ್ ನೀಡಿದರು.

ಸ್ಪೂರ್ತಿ ಡೆವಲಪರ್ಸ್‌ನ ಎಸ್.ಪಿ. ಚಿದಾನಂದ ಮಾತನಾಡಿ, ಕುವೆಂಪು ನಗರ ಶಾಂತಿ ಸಹಬಾಳ್ವೆಗೆ ಹೆಸರಾದ ಬಡಾವಣೆ. ಇಲ್ಲಿನ ನಾಗರಿಕರು ಒಗ್ಗೂಡಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕುವೆಂಪು ದಿನಾಚರಣೆ ಒಂದು ಅರ್ಥಪೂರ್ಣ ಕಾರ್ಯಕ್ರಮ. ಅವರ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಕನ್ನಡ ನಾಡು ರಾಜ ಮಹಾರಾಜರ ಕಾಲದಿಂದ ಇಂದಿಗೂ ಶ್ರೀಮಂತವಾಗಿದೆ. ರಾಷ್ಟ್ರಕ್ಕೆ ಸಲ್ಲಿಕೆಯಾಗುವ ಒಟ್ಟು ಶುಲ್ಕದಲ್ಲಿ ಶೇ.9ರಷ್ಟು ಟ್ಯಾಕ್ಸ್ ಕರ್ನಾಟಕದಿಂದ ಸಲ್ಲಿಕೆಯಾಗುತ್ತದೆ. ಎಲ್ಲಾ ಕ್ಷೇತ್ರದಲ್ಲೂ ಕನ್ನಡಿಗರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜನರು ಮಾನವೀಯತೆಯನ್ನು ಬೆಳೆಸಿಕೊಂಡು, ಹೋರಾಟದ ಮನೋಭಾವನೆ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಕುವೆಂಪು ಅವರ ಕುರಿತು ಉಪನ್ಯಾಸ ನೀಡಿದ ಡಾ.ಜಿ.ಎಸ್.ಹಳ್ಳಿ ಪ್ರಕಾಶ್, ಕುವೆಂಪು ರಚಿಸದ ಸಾಹಿತ್ಯದ ಪ್ರಕಾರವೇ ಇಲ್ಲ. ಅವರ ನಾಟಕ, ಕಥೆ, ಕಾದಂಬರಿ, ಕಾವ್ಯಗಳಿಗಿಂತ ವಿಮರ್ಶನಾ ಸಾಹಿತ್ಯ ಹೆಚ್ಚು ಪ್ರಚಲಿತದಲ್ಲಿದೆ. ಜಲಗಾರ, ಶೂದ್ರ ತಪಸ್ವಿ, ರಾಮಾಯಾಣ ದರ್ಶನಂ ಇವೆಲ್ಲ ಕನ್ನಡ ಸಾರಸ್ವತ ಲೋಕದ ಅಮೂಲ್ಯ ಕೃತಿಗಳು. ಡಂಬಾಚಾರ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ ಕುವೆಂಪು ದೇವರನ್ನು ನಿರಾಕರಿಸಿದವರಲ್ಲ. ಆದರೆ ದೇವರ ಹೆಸರಿನಲ್ಲಿ ಮಾಡುವ ದೌರ್ಜನ್ಯ, ಶೋಷಣೆಯನ್ನು ಬಲವಾಗಿ ವಿರೋಧಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕುವೆಂಪುನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ. ಶ್ರೀನಿವಾಸ್, 1985ರಲ್ಲಿಯೇ ಕುವೆಂಪು ನಗರ ಬಡಾವಣೆ ನಿರ್ಮಾಣವಾದರೂ ಯಾವುದೇ ಅಭಿವೃದ್ಧಿ ಕಾಣದ ಹಿನ್ನೆಲೆ 2003ರಲ್ಲಿ ಕುವೆಂಪು ನಗರ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಿ, ಆ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಬಡಾವಣೆಗೆ ಅಗತ್ಯವಿರುವ ರಸ್ತೆ, ಕುಡಿಯುವ ನೀರು, ಚರಂಡಿ, ಉದ್ಯಾನವನಗಳನ್ನು ಸ್ಥಾಪಿಸಲಾಯಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ನಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ . ಬಸವನಗೌಡ ವಹಿಸಿದ್ದರು. ಬಡಾವಣೆಯ ಸಾಧಕರಾದ ಡಾ.ಬಿ. ರಾಜಣ್ಣ, ಬಯೋನೀಡ್ಸ್‌ನ ಎಂ.ಎಸ್. ನಾಗರಾಜು, ಅಡಿಟರ್ ಕೆ.ಎಸ್ ಶಶಿಧರ್, ಎಂ.ಡಿ. ವಿಜಯಕುಮಾರ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಡಾವಣೆಯ ಮಕ್ಕಳನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

Latest Videos
Follow Us:
Download App:
  • android
  • ios