Asianet Suvarna News Asianet Suvarna News

'ಎಲ್ಲರೂ ಸಿರಿಧಾನ್ಯ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ'

ತಮ್ಮ ಮನೆಗಳಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯವನ್ನು ಬಳಸುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಕರೆ ನೀಡಿದರು.

 Everybody should use Millets and maintain health    snr
Author
First Published Dec 23, 2023, 10:34 AM IST

  ಹಾಸನ :  ತಮ್ಮ ಮನೆಗಳಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯವನ್ನು ಬಳಸುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಕರೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ಕಾಲೇಜು ಕಾರೆಕೆರೆ ಹಾಗೂ ಹಾಸನ ಲಯನ್ಸ್‌ ಕ್ಲಬ್ ಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಬಳಕೆ ಕುರಿತು ಅರಿವು ಮೂಡಿಸುವ ಜಾಥಾವನ್ನು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಾನು ಕಳೆದ ಹಲವಾರು ವರ್ಷಗಳಿಂದಲೂ ಸಿರಿಧಾನ್ಯವನ್ನು ಉಪಯೋಗಿಸುತ್ತಿದ್ದು, ಅದರ ಪ್ರಯೋಜನವನ್ನು ನಾನು ತಿಳಿದಿದ್ದೇನೆ. ಆಧುನಿಕತೆಯ ಬದುಕಿನಲ್ಲಿ ಪೋಷಕಾಂಶ ಭರಿತ ಆಹಾರಗಳು ಸಿರಿಧಾನ್ಯಗಳು ಕಣ್ಮರೆಯಾಗುತ್ತಿರುವುದು ಕಂಡು ಬಂದಿರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಿರಿಧಾನ್ಯಗಳು ಪೋಷಣೆಗೆ ಅವಶ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ. ಸಿರಿಧಾನ್ಯದ ಬೆಳೆಗಳು ಅತೀ ಕಡಿಮೆ ಮಳೆ ಬೀಳುವ ಮಳೆಯಾಶ್ರಿತ ಪ್ರದೇಶದಲ್ಲಿ ಕಡಿಮೆ ಫಲವತ್ತತೆ ಹೊಂದಿದ ಭೂಮಿಗಳಲ್ಲಿ ಹಾಗೂ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಈ ಸಿರಿಧಾನ್ಯಗಳು ಆಸರೆಯಾಗುತ್ತವೆ. ಸಿರಿಧಾನ್ಯಗಳು ಪೋಷಕಾಂಶಗಳ ಕಣಜ. ಇವುಗಳನ್ನು ದಿನನಿತ್ಯ ಬಳಸುವುದರಿಂದ ಹಲವಾರು ರೋಗಗಳಾದ ರಕ್ತದ ಒತ್ತಡ, ಮಧುಮೇಹವನ್ನು ತಡೆಗಟ್ಟಬಹುದು ಎಂದು ಹೇಳಿದರು.

ತಮ್ಮ ತಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯವನ್ನು ಬಳಕೆ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳುವಂತೆ ತಮ್ಮ ಭಾಷಣದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಿಶ್ವಸಂಸ್ಥೆಯ 2023 ನೇ ವರ್ಷವನ್ನು "ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ"ವೆಂದು ಘೋಷಣೆ ಮಾಡಲಾಗಿದ್ದು, ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶಗಳನ್ನು 2024 ಜನವರಿ ೫ರಿಂದ ಜನವರಿ 7ರವರೆಗೂ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮತ್ತು ಸಾವಯವಗಳ ಜಾಗೃತಿ ಜಾಥಾವು ಜಿಲ್ಲಾ ಕ್ರೀಡಾಂಗಣದಿಂದ ಹೊರಟು ಸಾಲಗಾಮೆ ರಸ್ತೆ, ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತದಿಂದ ಹೇಮಾವತಿ ಪ್ರತಿಮೆ ಮುಂಭಾಗ ಮಕ್ತಾಯಗೊಂಡಿತು.

ಜಾಥಾದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಎಂ.ಎನ್. ರಾಜಸುಲೋಚನ, ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷ ತಮ್ಲಾಪುರ ಕೃಷ್ಣೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಚ್‌.ಕೆ. ನಾಗೇಶ್, ಖಜಾಂಚಿ ರವಿಕುಮಾರ್ ಬಲ್ಲೇನಹಳ್ಳಿ, ಲಯನ್ಸ್ ಮಾಜಿ ಅಧ್ಯಕ್ಷರಾದ ಸೋಮಶೇಖರ್‌, ರೋಟರಿ ಕ್ಲಬ್ ಗಿರೀಶ್, ಇಲಾಖೆಯ ಕೋಕಿಲಾ, ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲ ಲೀಲಾವತಿ, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಹಿರಿಯ ಕಲಾವಿದ ಬಿ.ಟಿ. ಮಾನವ, ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios