Asianet Suvarna News Asianet Suvarna News

ಹಂಪಿ: ತಿಂಗಳಿಗೆ 2 ಲಕ್ಷ ಪ್ರವಾಸಿಗರು, ಮೂಲ ಸೌಕರ್ಯ ಕೊರತೆ

ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ವಿದೇಶಿ ಪ್ರವಾಸಿಗರ ಹೆಚ್ಚಳ| ಹಂಪಿ ಸೊಬಗು ಸವಿಯಲು ಬರುವವರಿಗೆ ಮೂಲ ಸೌಕರ್ಯ ಕೊರತೆ| ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುತ್ತಾರೆ|

Every Month 2 lakh Tourists Visit to Hampi in Ballari District
Author
Bengaluru, First Published Dec 28, 2019, 9:43 AM IST
  • Facebook
  • Twitter
  • Whatsapp

ಸಿ. ಕೆ. ನಾಗರಾಜ್‌ ದೇವನಕೊಂಡ

ಹೊಸಪೇಟೆ(ಡಿ.28): ವಿಶ್ವ ವಿಖ್ಯಾತ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿನಕ್ಕೂ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಸ್ಥಳೀಯರು ಹಾಗೂ ವಿದೇಶಿ ಪ್ರವಾಸಿಗರು ಸೇರಿ ಈ ವರ್ಷ ಜನದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ವರ್ಷವೊಂದರಲ್ಲಿ ತಿಂಗಳಿಗೆ ಸರಾಸರಿ 2 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಹಂಪಿಯ ಕೆಲ ಸ್ಮಾರಕಗಳನ್ನು ನೋಡಲು ಪ್ರವಾಸಿಗರಿಂದ ಶುಲ್ಕವನ್ನು ಆಕರಿಸಲಾಗುತ್ತಿದ್ದು, ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಕಾರ 2017-18ನೇ ಸಾಲಿನಲ್ಲಿ ಭಾರತೀಯ ಪ್ರವಾಸಿಗರು 5,95,903 ಮತ್ತು ವಿದೇಶಿ 46,303 ಪ್ರವಾಸಿಗರು. 2018-19ನೇ ಸಾಲಿನಲ್ಲಿ ಭಾರತೀಯ ಪ್ರವಾಸಿಗರು 6,22,040 ಮತ್ತು 30,811 ವಿದೇಶಿ ಪ್ರವಾಸಿಗರು. ಪ್ರಸಕ್ತ ವರ್ಷ ಅಂದರೆ 2019-20ರ ನವೆಂಬರ್‌ ತಿಂಗಳವರೆಗೆ ದೇಶಿಯ 3,15,418 ಪ್ರವಾಸಿಗರು ಮತ್ತು 10,424 ವಿದೇಶಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ. ಪ್ರತಿ ತಿಂಗಳು 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಬಂದು ಹೋಗುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯವರು ತಿಳಿಸುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿದೇಶಿ ಪ್ರವಾಸಿಗರು ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರವಾಸಿಗರ ಹೆಚ್ಚಳದಿಂದ ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದೆ. ಸ್ಥಳೀಯ ವ್ಯಾಪಾರಸ್ಥರಿಗೆ ಒಂದಿಷ್ಟುವ್ಯಾಪಾರ ಜೋರಾಗಿ ನಡೆಯುತ್ತದೆ. ಸ್ಥಳೀಯ ಹೋಟೆಲ್‌ಗಳು, ರೆಸ್ಟೋರೆಂಟ್‌, ಟ್ರಾಕ್ಸಿ ವಾಹನಗಳು, ಪ್ರವಾಸಿ ಮಾರ್ಗದರ್ಶಿಗಳು, ರಸ್ತೆ ಬದಿಯ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.

ಕೆನಡಾ, ಇಟಲಿ, ಇಂಗ್ಲೆಡ್‌, ಅಮೆರಿಕಾ, ಫ್ರಾನ್ಸ್‌, ನೈಜೀರಿಯಾ, ದಕ್ಷಿಣ ಆಫ್ರಿಕಾ, ಜರ್ಮನಿ, ಇಸ್ರೇಲ್‌ ಹಾಗೂ ಇತರೆ ದೇಶಗಳಿಂದ ಹಂಪಿಗೆ ನಿತ್ಯವೂ ನೂರಾರು ಪ್ರವಾಸಿಗರು ಪ್ರತಿವರ್ಷವೂ ಭೇಟಿ ನೀಡಲಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುತ್ತಾರೆ.

ಹಂಪಿಯ ಸೊಬಗು

ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ, ಕಡಲೆ ಕಾಳು ಗಣೇಶ, ಸಾಸಿವೆ ಕಾಳು ಗಣೇಶ್‌, ಬಡವಲಿಂಗ, ಉಗ್ರನರಸಿಂಹ, ಕಮಲ್‌ ಮಹಲ್‌, ಆನೆಲಾಯ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ವಿಜಯ ವಿಠ್ಠಲ ದೇವಸ್ಥಾನ, ಸಪ್ತಸ್ವರ ಮಂಟಪ, ಕಲ್ಲಿನ ತೇರು, ಪುರಂದರ ದಾಸರ ಮಂಟಪ, ವರಾಹ ದೇವಸ್ಥಾನ, ಅಚ್ಯುತರಾಯ ದೇವಸ್ಥಾನ, ಉದ್ದಾನ ವೀರಭದ್ರೇಶ್ವರ ದೇವಸ್ಥಾನ, ಹಜಾರ ರಾಮ ದೇವಸ್ಥಾನ, ರಾಮಲಕ್ಷ್ಮಣರ ದೇವಸ್ಥಾನ, ಅಚ್ಯುತರಾಯ ದೇವಸ್ಥಾನ, ಕೃಷ್ಣದೇವಸ್ಥಾನ, ಪುಷ್ಕರಣಿಗಳು ಸೇರಿದಂತೆ ವಿವಿಧ ಸ್ಮಾರಕಗಳ ಸೊಬಗನ್ನು ಪ್ರವಾಸಿಗರು ನೋಡಲು ದೇಶ- ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಹಂಪಿಯ ಸ್ಮಾರಕಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ.

ರಾಜ್ಯದ ಇತರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಹಂಪಿಗೆ ಬರುವರ ಸಂಖ್ಯೆ ಹೆಚ್ಚಳವಾಗಿದೆ. ಆದರೂ ಹಂಪಿಯ ಸ್ಥಿತಿಗತಿಯನ್ನು ನೋಡಿದರೆ ಇಲ್ಲಿ ಸರಿಯಾದ ಮೂಲಭೂತ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ.
ಹಂಪಿ ಪ್ರವಾಸೋದ್ಯಮದಿಂದ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸರ್ಕಾರಕ್ಕೆ ವರ್ಷಕ್ಕೆ ನೂರಾರು ಕೋಟಿ ಆದಾಯ ಹರಿದು ಬರುತ್ತಿದೆ. ಆದರೆ ಹಂಪಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಇಲ್ಲಿ ಯಾವುದೇ ಸೌಲಭ್ಯಗಳು ಇಲ್ಲದಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಾರೆ.

ಪ್ರವಾಸಿಗರು ಹೊಸಪೇಟೆಯ ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡಿ ಹಂಪಿಯನ್ನು ವೀಕ್ಷಿಸುವಂತಾಗಿದೆ. ಹಂಪಿಯಲ್ಲಿ ಯಾವುದಾದರೂ ಮಾಹಿತಿ ಕೇಳಬೇಕೆಂದರೂ ಮಾಹಿತಿ ಕೇಂದ್ರವಿಲ್ಲ. ಹೊಸಪೇಟೆಯಲ್ಲಿ ಹಂಪಿಯ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗುವುದಕ್ಕೂ ಹೊಸಪೇಟೆಯಲ್ಲಿ ಮಾಹಿತಿ ಕೇಂದ್ರ ಇಲ್ಲ. ಹೊಸಪೇಟೆಯಲ್ಲಿರುವ ಮಾಹಿತಿ ಕೇಂದ್ರವನ್ನು ಕಮಲಾಪುರದ ಕಮಲ್‌ಮಹಲ್‌ ಬಳಿ ಇರುವ ರಾಜ್ಯಪುರಾತತ್ವ ಸರ್ವೇಕ್ಷಣಾ ಇಲಾಖೆಯ ಕಟ್ಟಡದಲ್ಲಿ ಸ್ಥಳಾಂತರಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ಹಂಪಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿ ತಿಂಗಳು ಕನಿಷ್ಠ 2 ಲಕ್ಷ ಪ್ರವಾಸಿಗರು ಹಂಪಿಗೆ ಬಂದು ಹೋಗುತ್ತಿದ್ದಾರೆ. ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಹಂಪಿಗೆ ಬರುವಂತಹ ಪ್ರವಾಸಿಗರಿಗೆ ಬೇಕಾಗುವ ಮಾಹಿತಿಯನ್ನು ಒದಗಿಸಲಾಗುವುದು ಎಂದು ಬಳ್ಳಾರಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಮೋತಿಲಾಲ್‌ ಲಮಾಣಿ ಅವರು ಹೇಳಿದ್ದಾರೆ.
 

Follow Us:
Download App:
  • android
  • ios