ರಾಜಧಾನಿ ಬೆಂಗಳೂರಿನಲ್ಲಿ ವರುಣ ಅರ್ಭಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಜಲಾವೃತಗೊಂಡ ಸಾಯಿ ಲೇಔಟ್‌, ಪೈ ಲೇಔಟ್‌, ರೈನ್‌ಬೋ ಡ್ರೈವ್‌ ಲೇಔಟ್‌ ಸೇರಿದಂತೆ ವಿವಿಧ ಕಡೆ ಜನರ ಪರದಾಟ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ವರುಣ ಅರ್ಭಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಜಲಾವೃತಗೊಂಡ ಸಾಯಿ ಲೇಔಟ್‌, ಪೈ ಲೇಔಟ್‌, ರೈನ್‌ಬೋ ಡ್ರೈವ್‌ ಲೇಔಟ್‌ ಸೇರಿದಂತೆ ವಿವಿಧ ಕಡೆ ಜನರ ಪರದಾಟ ಮುಂದುವರೆದಿದೆ. ಮಳೆರಾಯ ಗುರುವಾರ ಕೊಂಚ ಶಾಂತವಾಗಿದ್ದ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ನಗರದ 10ಕ್ಕೂ ಹೆಚ್ಚಿನ ಬಡಾವಣೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.

ಪ್ರವಾಹಕ್ಕೆ ತುತ್ತಾಗಿರುವ ಸಾಯಿ ಲೇಔಟ್‌, ಪೈ ಲೇಔಟ್‌ ನಿವಾಸಿಗಳು ಮನೆಯೊಳಗೆ ಮಳೆ ನೀರನ್ನಿಟ್ಟುಕೊಂಡು ಜೀವಿಸುವಂತಾಗಿದೆ. ಪ್ರವಾಹ ಉಂಟಾಗಿ ಐದು ದಿನಗಳು ಕಳೆದರೂ ಬಡಾವಣೆಯಲ್ಲಿ ಸಂಗ್ರಹವಾಗಿರುವ ನೀರು ಕಡಿಮೆಯಾಗುತ್ತಿಲ್ಲ. ಇಡೀ ಬಡಾವಣೆಗೆ ಕುಡಿಯುವ ನೀರು, ಸ್ನಾನ ಸೇರಿ ಇನ್ನಿತರ ಕಾರಣಕ್ಕಾಗಿ ಅಗತ್ಯವಿರುವ ನೀರು ಸಿಗದಂತಾಗಿದೆ. ಜತೆಗೆ ಬಿಬಿಎಂಪಿಯಿಂದ ನಿವಾಸಿಗಳಿಗೆ ಆಹಾರ ನೀಡಲಾಗುತ್ತಿದ್ದರೂ, ಅವರು ಕೊಟ್ಟರಷ್ಟೇ ಊಟ ಮಾಡಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಿವಾಸಿಗಳು ಆಹಾರದ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲೇ ಮೂರನೇ ಬಾರಿ ಪ್ರವಾಹ ಪರಿಸ್ಥಿತಿ ಎದುರಿಸಿದ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು ಮನೆ ಖಾಲಿ ಮಾಡಲು ಮುಂದಾಗಿದ್ದಾರೆ.

ಗದಗ ಮಳೆ ಅವಾಂತರ : ಪೆಟ್ರೋಲ್ ಬಂಕ್, ಹಾಸ್ಟೆಲ್‌ಗೆ ನುಗ್ಗಿದ ನೀರು..!

ಪರದಾಟದ ನಡುವೆ ಪ್ರತಿಭಟನೆ

ಬಿಬಿಎಂಪಿ ಪಂಪ್‌ಸೆಟ್‌ಗಳ ಮೂಲಕ ಬಡಾವಣೆಯಿಂದ ನೀರು ಹೊರಹಾಕಲು ಪ್ರಯತ್ನಿಸುತ್ತಿದ್ದರೂ, ಅದು ಪೂರ್ಣವಾಗುತ್ತಿಲ್ಲ. ಹೀಗಾಗಿ ಗುರುವಾರ ನಿವಾಸಿಗಳು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ದಿನ ಬಳಕೆ ಸಾಮಗ್ರಿ, ಆಹಾರ ಸೇರಿ ಇನ್ನಿತರ ಅಗತ್ಯ ವಸ್ತುಗಳು ಸಿಗದೆ ಜನರು ಪರದಾಡುತ್ತಿದ್ದರೂ ಬಿಬಿಎಂಪಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಗುಂಡಿಯಿಂದ ವ್ಯಕ್ತಿ ಕಾಲಿಗೆ ಗಾಯ

ಇಂದಿರಾ ನಗರ ಬಿಡಿಎ ಕಾಂಪ್ಲೆಕ್ಸ್‌ ಬಳಿ ಮಂಗಳವಾರ ರಾತ್ರಿ ವೆಂಕಟೇಶ್‌ ಎಂಬುವವರು ತಮ್ಮ ದ್ವಿಚಕ್ರ ವಾಹನದ ಮೂಲಕ ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ನೀರು ತುಂಬಿಕೊಂಡು ಗುಂಡಿ ತಿಳಿಯದೆ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿದ್ದಾರೆ. ಅದರ ಪರಿಣಾಮ ಕಾಲಿನ ಹಿಂಭಾಗಕ್ಕೆ ಪೆಟ್ಟಾಗಿದ್ದು 22 ಹೊಲಿಗೆ ಹಾಕಲಾಗಿದೆ.

ತುಮಕೂರಿನಲ್ಲಿ ಮಳೆ ಅವಾಂತರ: ಚರಂಡಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ
ರೈನ್‌ಬೋ ಲೇಔಟಲ್ಲಿ ಜನರ ಪ್ರಯಾಣಕ್ಕೆ ಟ್ಯಾಕ್ಟರೇ ಗತಿ!

ಮಹದೇವಪುರ ವಿಧಾನಸಭಾ ಕ್ಷೇತ್ರದ ರೈನ್‌ಬೋ ಡ್ರೈವ್‌ ಲೇಔಟ್‌ನಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಹ ಸೃಷ್ಟಿಯಾಗಿದ್ದು, ಕಟ್ಟಡಗಳ ನೆಲ ಮಹಡಿಯಲ್ಲಿ ಎರಡರಿಂದ ಮೂರು ಅಡಿ ನೀರು ನಿಂತಿದೆ. ರೈನ್‌ಬೋ ಡ್ರೈವ್‌ ಬಡಾವಣೆ ತುಂಬಾ ನೀರಿರುವ ಕಾರಣ ಕಾರು, ಬೈಕ್‌ ಅಥವಾ ಕಾಲ್ನಡಿಗೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರು ತಮ್ಮ ಮನೆಯಿಂದ ಪಕ್ಕದ ಬಡಾವಣೆಗೆ ತೆರಳಲು ಟ್ರ್ಯಾಕ್ಟರ್‌ ಬಳಸುವಂತಾಗಿದೆ. ಅದಕ್ಕಾಗಿ ಟ್ರ್ಯಾಕ್ಟರ್‌ಗೆ ಒಮ್ಮೆ ಪ್ರಯಾಣಿಸಿಲು ಪ್ರತಿಯೊಬ್ಬರು 50 ರೂ ನೀಡಬೇಕಿದೆ.


ಮನೆ ಗೋಡೆ ಕುಸಿತ

ಸಂಪಗಿರಾಮ ನಗರದಲ್ಲಿ ಚಂದ್ರು ಎಂಬುವವರ ಮನೆಯ ಗೋಡೆ ಮಳೆಯಿಂದಾಗಿ ಶಿಥಿಲಗೊಂಡು ಕುಸಿದು ಬಿದ್ದಿದೆ. ಗೋಡೆ ಬೀಳುವ ಸಂದರ್ಭದಲ್ಲಿ ಮನೆಯಲ್ಲಿ ಚಂದ್ರು ಅವರ ಮಗನಿದ್ದ. ಆದರೆ ಗೋಡೆ ಬೀಳುತ್ತಿರುವುದು ತಿಳಿಯುತ್ತಿದಂತೆ ಆತ ಹೊರಗೋಡಿ ಬಂದಿದ್ದಾನೆ. ಹೀಗಾಗಿ ತೊಂದರೆ ಉಂಟಾಗಿಲ್ಲ.