Heli Tourism : ಕೊಡಗಿನಲ್ಲಿ ಪರ-ವಿರೋಧ - ಪ್ರವಾಸೋದ್ಯಮ ಉತ್ತೇಜನ ಉದ್ದೇಶ

  • ಪ್ರವಾಸಿಗರನ್ನು ಸೆಳೆಯಲು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ   ಹೆಲಿ ಟೂರಿಸಂ 
  • ಹೆಲಿ ಟೂರಿಸಂಗೆ ಕೊಡಗು ಜಿಲ್ಲೆಯಲ್ಲಿ ಪರ-ವಿರೋಧ ವ್ಯಕ್ತ
Environmentalists oppose For Heli Tourism in Kodagu snr

ವರದಿ : ಮೋಹನ್‌ ರಾಜ್‌

 ಮಡಿಕೇರಿ (ಡಿ.11): ಪ್ರವಾಸಿಗರನ್ನು (Tourist) ಸೆಳೆಯಲು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಹೆಲಿ ಟೂರಿಸಂ (Heli - Tourism) ಅಭಿವೃದ್ಧಿಗೆ ಚಿಂತಿಸಲಾಗಿದೆ. ಇದರ ನಡುವೆಯೇ ಹೆಲಿ ಟೂರಿಸಂಗೆ ಕೊಡಗು ಜಿಲ್ಲೆಯಲ್ಲಿ ಪರ-ವಿರೋಧ ವ್ಯಕ್ತವಾಗಿದೆ.  ಕೆಲ ಪರಿಸರ ತಜ್ಞರ ಪ್ರಕಾರ (Environmentalist), ಹೆಲಿ ಟೂರಿಸಂನಿಂದ ಜಿಲ್ಲೆಯ ಜನತೆಗೆ ಅನಾನುಕೂಲವೇ ಹೆಚ್ಚು, ಇದರಿಂದ ಯಾವುದೇ ಪ್ರಯೋಜನವಿಲ್ಲ, ಇದು ಕೇವಲ ಮೋಜು ಮಸ್ತಿ ಮಾಡುವವರಿಗೆ ಹಾಗೂ ಬೆರಳೆಣಿಕೆಯ ಜನತೆ ಮಾತ್ರ ಉಪಯೋಗವಾಗುತ್ತಿದ್ದು, ಉತ್ತಮ ಗಾಳಿ, ಪರಿಸರ ಹೊಂದಿರುವ ಜಿಲ್ಲೆಯಲ್ಲಿ ಮಾಲಿನ್ಯ ಉಂಟುಮಾಡಲು ಇಂತಹ ಸಾಹಸಗಳನ್ನು ಮಾಡಲು ಕೆಲವು ಸಂಸ್ಥೆಗಳು ಮುಂದಾಗಿದ್ದು, ಹೆಲಿ ಟೂರಿಸಂ ಅನ್ನು ತಡೆಹಿಡಿಯಲು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತವಾಗಿದೆ.

ಹೆಲಿ ಟೂರಿಸಂನಿಂದ ಜಿಲ್ಲೆಯಲ್ಲಿ  (Kodagu) ಯಾವುದೇ ರೀತಿಯ ತೊಂದರೆ ಆಗಿಲ್ಲ. ಇದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲು ಅನುಕೂಲವಾಗುತ್ತಿದೆ. ಪರಿಸರ ಅಥವಾ ವಾಯು ಮಾಲಿನ್ಯ (Pollution) ಹೆಲಿಕಾಪ್ಟರ್‌ ಹಾರಾಟದಿಂದ ಸಂಭವಿಸಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತಿಸದ, ಪ್ರವಾಸೋದ್ಯಮವನ್ನು ವಿರೋಧಿಸುವ ಕೆಲವು ಪರಿಸರವಾದಿಗಳು ಇದನ್ನು ವಿರೋಧಿಸುತ್ತಿದ್ದಾರೆ ಹೊರತು ಜಿಲ್ಲೆಯ ಜನತೆಯಲ್ಲ. ಜಿಲ್ಲೆಯಲ್ಲಿ ಹೆಲಿ ಟೂರಿಸಂ ಆರಂಭವಾಗಿರುವುದು ಸ್ವಾಗತಾರ್ಹ ಎನ್ನುತ್ತಾರೆ ಪ್ರವಾಸೋದ್ಯಮ ಅವಲಂಬಿತರು.

ಏನಿದು ಯೋಜನೆ?

ಇದು ಖಾಸಗಿ ಯೋಜನೆ. ಕೊಡಗಿನ (Kodagu) ನಾಪೋಕ್ಲು ಸಮೀಪದ ಕಕ್ಕಬ್ಬೆಯ ಖಾಸಗಿ ರೆಸಾರ್ಟ್‌ (Resort) ಒಂದರಲ್ಲಿ ಹೆಲಿಪ್ಯಾಡ್‌ ವ್ಯವಸ್ಥೆಯಿದ್ದು, ಬೆಂಗಳೂರಿನಿಂದ (Bengaluru) ಕೊಡಗಿಗೆ ಹೆಲಿಕಾಪ್ಟರ್‌ ಹಾರಾಟಕ್ಕೆ ಖಾಸಗಿ ಸಂಸ್ಥೆ ಅವಕಾಶ ಕಲ್ಪಿಸಿದೆ. ಈಗಾಗಲೇ ಮೂರು ಬಾರಿ ಬೆಂಗಳೂರಿನಿಂದ ಹೆಲಿಕಾಪ್ಟರ್‌ ಲ್ಯಾಂಡ್‌ ಮಾಡಲಾಗಿದೆ. ಕೊಡಗಿನಲ್ಲಿ ಸತತ ಮಳೆಯ ಕಾರಣ ಹೆಲಿಕಾಪ್ಟರ್‌ ಹಾರಾಟಕ್ಕೆ ತೊಡಕುಂಟಾಗಿದೆ.

ಮಂಗಳವಾರ ಮತ್ತು ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಲಭ್ಯವಿರುತ್ತದೆ. ಬ್ಲೇಡ್‌ ನ್ಯೂಯಾರ್ಕ್ ಮತ್ತು ದೆಹಲಿ (Delhi) ಮೂಲದ ಸಾಹಸೋದ್ಯಮ ಬಂಡವಾಳ ಸಂಸ್ಥೆ ಹಂಚ್‌ ವೆಂಚರ್ಸ್‌ ಸಹಯೋಗದೊಂದಿಗೆ ಬ್ಲೇಡ್‌ ಇಂಡಿಯಾ, ಅರ್ಬನ್‌ ಏರ್‌ ಮೊಬಿಲಿಟಿ ಪ್ಲಾಟ್‌ ಫಾರಂ ಈ ಹಾರಾಟ ರೂಪಿಸಿದೆ.ಬ್ಲೇಡ್‌ ಇಂಡಿಯಾ (Blade India) ಡಿ. 18, 2020 ರಂದು ಬೆಂಗಳೂರು, ಕೊಡಗು, ಕಬಿನಿ, ಚಿಕ್ಕಮಗಳೂರು ಮತ್ತು ಹಂಪಿಗಳನ್ನು ಒಳಗೊಂಡ ಖಾಸಗಿ ಚಾರ್ಟರ್‌ ಸೇವೆಗಳನ್ನು ಪ್ರಾರಂಭಿಸಿದೆ. ಬೆಂಗಳೂರಿನಿಂದ ಕೊಡಗಿಗೆ ಏಕಮುಖ ಪ್ರಯಾಣದ ದರವು ಪ್ರತಿ ಆಸನಕ್ಕೆ 16 ಸಾವಿರ ರು. ನಿಗದಿಪಡಿಸಲಾಗಿದೆ.

ಜಿಲ್ಲೆಯಲ್ಲಿ ಹೆಲಿ ಟೂರಿಸಂ ಆರಂಭಿಸಿರುವುದು ಸೂಕ್ತವಲ್ಲ. ಇದು ಪರಿಸರ ವಿರೋಧಿ ಚಟುವಟಿಕೆ ಆಗಿದ್ದು, ಜಿಲ್ಲೆಯಲ್ಲಿ ಪರಿಸರ ಮತ್ತು ವಾಯು ಮಾಲಿನ್ಯ ಉಂಟು ಮಾಡಲು ನಡೆಯುತ್ತಿರುವ ಹುನ್ನಾರ. ಇದರಿಂದ ಕೇವಲ ಬೆರಳೆಣಿಕೆ ಜನರ ಮೋಜು ಮಸ್ತಿ ಮಾಡಿಕೊಂಡರೆ ಮತ್ತೆ ಕೆಲವರ ಜೇಬು ತುಂಬಲಿದೆ. ಜಿಲ್ಲೆಯ ಜನತೆಗೆ, ಪರಿಸರಕ್ಕೆ ಮಾರಕವಾಗಿ ಆರಂಭಿಸಲಾಗಿರುವ ಹೆಲಿ ಟೂರಿಸಂ ತಡೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗಿದೆ.

-ರವಿ ಚಂಗಪ್ಪ, ಪರಿಸರವಾದಿ ಹಾಗೂ ಕಾವೇರಿ ಸೇನೆ ಜಿಲ್ಲಾಧ್ಯಕ್ಷ.

ಸರ್ಕಾರದ ನಿಯಮಗಳಿಗೆ ಅನುಗುಣವಾಗಿ, ಅನುಮತಿ ಪಡೆದ ಬಳಿಕವೇ ಹೆಲಿ ಟೂರಿಸಂ ಮಾಡಲು ಸಾಧ್ಯ. ನಿಗದಿತ ಪ್ರದೇಶದಲ್ಲಿ ಮಾತ್ರ ಹೆಲಿಕಾಪ್ಟರ್‌ ಇಳಿಸಲಾಗುತ್ತೆ. ಕೆಲ ದಿನಗಳ ಹಿಂದೆ ಹೆಲಿಕಾಪ್ಟರ್‌ ಮೂಲಕ ಮೊದಲ ಗೆಸ್ಟ್‌ ಜಿಲ್ಲೆಯ ಕಕ್ಕಬೆ ಭಾಗದಲ್ಲಿ ಬಂದಿಳಿದ್ದರು. ಇದು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಮತ್ತು ಸ್ವಾಗತಾರ್ಹ ಬೆಳವಣಿಗೆ, ಪ್ರವಾಸಿಗರ ಆಕರ್ಷಣೆಗೆ ಇದು ಮತ್ತಷ್ಟುಸಹಕಾರಿಯಾಗಲಿದೆ. ಪರಿಸರವಾದಿಗಳ ಮನವೊಲಿಸುವ ಪ್ರಯತ್ನ ಆಗಬೇಕಾಗಿದೆ. ಹೆಲಿ ಟೂರಿಸಂ ಪರಿಸರ ಸ್ನೇಹಿಯೇ ಹೊರತು ಮಾರಕವಾಗಿಲ್ಲ.

-ನಾಗೇಂದ್ರ ಪ್ರಸಾದ್‌, ಉದ್ಯಮಿ.

Latest Videos
Follow Us:
Download App:
  • android
  • ios