Asianet Suvarna News Asianet Suvarna News

ಬೆಳಗಾವಿ: ಗೋಕಾಕ ಫಾಲ್ಸ್‌ ವೀಕ್ಷಣೆಗೆ ಮತ್ತೆ ಬ್ರೇಕ್‌..!

* ಪ್ರಕೃತಿ ಸೊಬಗು ವೀಕ್ಷಣೆಗೆ ಬ್ರೇಕ್‌
* ಗೋಕಾಕ ಫಾಲ್ಸ್‌, ಗೋಡಚಿನಮಲ್ಕಿಗೆ ಪ್ರವಾಸಿಗರ ಆಗಮನಕ್ಕೆ ನಿಷೇಧ
* ಜಿಲ್ಲಾಡಳಿತದ ಮೇಲೆ ಕೋಪಗೊಂಡ ಪ್ರವಾಸಿಗರು 
 

Entry Restriction to Gokak Falls due to Coronavirus grg
Author
Bengaluru, First Published Jul 16, 2021, 3:23 PM IST

ಭೀಮಶಿ ಭರಮಣ್ಣವರ 

ಗೋಕಾಕ(ಜು.16): ಮಳೆಗಾಲದಲ್ಲಿ ಮಾತ್ರ ತುಂಬಿ ತುಳುಕುತ್ತ ಪ್ರವಾಸಿಗರನ್ನು ಆಕರ್ಷಿಸುವ ಗೋಕಾಕ ಜಲಪಾತ ಹಾಗೂ ಗೋಡಚಿನಮಲ್ಕಿ ಜಲಪಾತ ರಜಾ ದಿನಗಳಲ್ಲಿ ಪ್ರವಾಸಿಗರ ಆಗಮನಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದು ಪ್ರವಾಸಿಗರಿಗೆ ಪ್ರಕೃತಿ ಸೊಬಕು ಕಣ್ತುಂಬಿಕೊಳ್ಳುವುದಕ್ಕೆ ಕೊರೋನಾ ಭೀತಿ ಬ್ರೇಕ್‌ ಹಾಕಿದೆ.

ಸುಪ್ರಸಿದ್ಧ ಗೋಕಾಕ ಜಲಪಾತ ಮಳೆಗಾಲದ ಸ್ವರ್ಗವೆಂದೆ ಬಿಂಬಿತವಾಗಿದೆ. ಈ ಜಲಪಾತ ಮಳೆಗಾಲದ ಪ್ರಾರಂಭದ ಎರಡ್ಮೂರು ತಿಂಗಳು ಮೈದುಂಬಿ ಹರಿಯುತ್ತದೆ. ಈ ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯಗಳ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಕೋವಿಡ್‌ 19 ಹಿನ್ನೆಲೆ ಹೊರ ರಾಜ್ಯದ ಪ್ರವಾಸಿಗರ ಆಗಮನಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಿದೆ.

ಬೆಳಗಾವಿ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಭಾಗದಲ್ಲಿ ಉತ್ತಮ ಮಳೆಯಾದರೆ ಸಾಕು ಗೋಕಾಕ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ. ಈ ಜಲಪಾತ ಭೋರ್ಗರೆಯುತ್ತಾ 180 ಮೀಟರ್‌ ಆಳಕ್ಕೆ ಧುಮುಕುವ ಮನಮೋಹಕ, ರುದ್ರರಮಣೀಯ ದೃಶ್ಯಕ್ಕೆ ಮನಸೋಲದವರೇ ಇಲ್ಲ. ಹೀಗಾಗಿ ಪ್ರತಿ ವರ್ಷವೂ ಸಾವಿರಾರು ಜನರು ತಮ್ಮ ಕುಟುಂಬ ಸಮೇತ ಹಾಗೂ ಗೆಳೆಯರೊಂದಿಗೆ ಭೇಟಿ ನೀಡಿ ಜಲಪಾತದ ಸೌಂದರ್ಯ ಸವಿಯುತ್ತಾರೆ. ಲಾಕ್‌ಡೌನ್‌ ನಂತರ ಮನೆಗಳಿಂದ ಹೊರ ಬಂದಿರುವ ಜನರಿಗೆ ಮಳೆಗಾಲ ಪ್ರಾರಂಭವಾದಾಗಿನಿಂದ ಪ್ರಕೃತಿಯ ಸೌಂದರ್ಯ ಸವಿಯಲು ಕಾತುರರಾಗಿದ್ದಾರೆ. ಆದರೆ ಕೊರೋನಾ ಹಿನ್ನೆಲೆ ಜಿಲ್ಲಾಡಳಿತ ನಿರ್ಬಂಧ ಹೇರಿದ ಹಿನ್ನೆಲೆ ಪ್ರವಾಸಿಗರು ಜಿಲ್ಲಾಡಳಿತದ ಮೇಲೆ ಕೋಪಗೊಂಡಿದ್ದಾರೆ.

ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ ಗೋಕಾಕ್ ಫಾಲ್ಸ್; ನೋಡುವುದೇ ಕಣ್ಣಿಗಾನಂದ..!

ಈ ಜಲಪಾತ ಉಳಿದ ಫಾಲ್ಸ್‌ಗಳಿಗಿಂತ ವಿಭಿನ್ನವಾಗಿದೆ. ಮಳೆಗಾಲದಲ್ಲಿ ಕೆಂಪು ಮಿಶ್ರಿತ ನೀರಿನ ಕಲರವ ಹತ್ತಿರಕ್ಕೆ ಹೋದಂತೆ ಹಾಲಿನಂತೆ ಕಂಗೊಳಿಸುವ ಗೋಕಾಕ ಫಾಲ್ಸ್‌ ಆಸ್ವಾಧಿಸಲು ಪ್ರವಾಸಿಗರ ಆಗಮನಕ್ಕೆ ಬರೆ ಬಿದ್ದಂತಾಗಿದೆ ಎಂದು ಜಲಪಾತ ವೀಕ್ಷಣೆಗೆ ಬಂದಿರುವ ಪ್ರವಾಸಿಗರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕರ್ನಾಟಕ ಎರಡನೇ ಅತಿ ದೊಡ್ಡ ಈ ಜಲಪಾತವನ್ನು ಬ್ರಿಟಿಷರು ಕೆನಡಾದ ನಯಾಗರಕ್ಕೆ ಹೋಲಿಸಿದ್ದಾರೆ. ಪ್ರವಾಸಿಗರು ಈ ಜಲಪಾತವನ್ನು ಎಲ್ಲ ಬದಿಯಿಂದಲೂ ವೀಕ್ಷಿಸಬಹುದು. ಪ್ರಕೃತಿ ಸೌಂದರ್ಯದ ಜೊತೆಗೆ ಜಲಪಾತದ ಸೌಂದರ್ಯ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.

ಈ ಜಲಪಾತದ ಕೆಳಗೆ ವಿದ್ಯುತ್‌ ಉತ್ಪಾದನೆ ಘಟಕವಿದೆ. ಈ ವಿದ್ಯುತ್‌ ಘಟಕವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ 1885-87ರಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸಿದ ಇತಿಹಾಸವಿದೆ. ಏಷ್ಯಾಖಂಡದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್‌ ಉತ್ಪಾದನೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಜಲಪಾತದ ವಿದ್ಯುತ್‌ನ್ನು ಗೋಕಾಕ ಫಾಲ್ಸ್‌ ಟೆಕ್ಸಟೈಲ್‌ಮಿಲ್‌, ಹೆಸ್ಕಾಂ ಸೇರಿದಂತೆ ಸ್ಥಳೀಯ ಫಾಲ್ಸ್‌ನಲ್ಲಿ ನೆಲೆಸಿರುವ ಕಾರ್ಮಿಕರ ಮನೆಗಳಿಗೆ ಸರಬರಾಜು ನೀಡಲಾಗುತ್ತದೆ.

ತೂಗು ಸೇತುವೆ:

ಗೋಕಾಕ ಫಾಲ್ಸ್‌ನ ಮತ್ತೊಂದು ವಿಶೇಷತೆ ಎಂದರೆ ತೂಗು ಸೇತುವೆ. ಬ್ರಿಟಿಷರ ಕಾಲದಲ್ಲಿ ಇದನ್ನು ಮರದ ಕಟ್ಟಿಗೆ (ಪಳಿಗಳು) ಮತ್ತು ಕಬ್ಬಿಣದ ಸರಳುಗಳಿಂದ ಕಟ್ಟಲಾಗಿದೆ. ಜಲಪಾತ ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆ ಮೇಲೆ ನಡೆದಾಡುವದೇ ಒಂದು ಅದ್ಭುತ ರೋಮಾಂಚನದ ತೂಗುಯ್ಯಾಲೆಯ ಅನುಭವ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕಾರಿಯಗಿದೆ. ರಾಜ್ಯದಲ್ಲಿಯೇ ಅತಿದೊಡ್ಡ ತೂಗು ಸೇತುವೆ. ಇಂತಹ ಅದ್ಭುತ ಅನುಭವ ನೀಡುವ ತೂಗು ಸೇತುವೆಯ ಮೋಜು ಅನುಭವಿಸುವ ಭಾಗ್ಯದಿಂದ ಇನ್ನು ಮುಂದೆ ಪ್ರವಾಸಿಗರು ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಘಟಪ್ರಭೆ ರಭಸದಿಂದ ಹರಿಯುತ್ತಿರುವ ದೃಶ್ಯ ಮನಮೋಹಕ ರಸದೌತನ ನೀಡುತ್ತಿದೆ. ಇಂತಹ ಸೋಬಗನ್ನು ಅನುಭವಿಸಲು ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದು ಎಷ್ಟರ ಮಟ್ಟಿಗೆ ಸರಿ. ಕೊರೋನಾ ಮಾರ್ಗ ಸೂಚಿಗಳನ್ನು ಅನುಸರಿಸಿ ವೀಕ್ಷಣೆಗೆ ಆದರೂ ಅನುಮತಿ ನೀಡಬೇಕು. ಎಲ್ಲ ಪ್ರವಾಸಿ ತಾಣಗಳು ವೀಕ್ಷಣೆಗಿದ್ದು, ಗೋಕಾಕ-ಗೋಡಚಿನಮಲ್ಕಿ ಜಲಪಾತಗಳನ್ನೂ ವೀಕ್ಷಣೆಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕು ಎಂದು ಜಲಪಾತ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗ ರಮೇಶ ಬಂಕಾಪೂರ ತಿಳಿಸಿದ್ದಾರೆ. 
 

Follow Us:
Download App:
  • android
  • ios