ಬೆಂಗಳೂರಿನಲ್ಲಿ 9ನೇ ತರಗತಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ಆತನ ಸಹಚರನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಶಾಲಾ ಪ್ರಾಂಶುಪಾಲರು ವಿದ್ಯಾರ್ಥಿಯ ವರ್ತನೆಯಲ್ಲಿನ ಬದಲಾವಣೆಯನ್ನು ಗಮನಿಸಿ ಪೋಷಕರಿಗೆ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು: ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಕೆರೆ ನಿವಾಸಿ ಅರುಣ್ ಕುಮಾರ್ ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಬಂಧಿತರಾಗಿದ್ದು, ಆರೋಪಿಗಳಿಂದ ₹14.59 ಲಕ್ಷ ಮೌಲ್ಯದ 107 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ವಿದ್ಯಾರ್ಥಿ ಶಂಕಾಸ್ಪದ ವರ್ತನೆ ಕಂಡು ಆತನ ಪೋಷಕರಿಗೆ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದರು. ಆಗ ಬಾಲಕನನ್ನು ಪೋಷಕರು ವಿಚಾರಿಸಿದಾಗ ಸುಲಿಗೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತಿಕೆರೆಯಲ್ಲಿ ಸಂತ್ರಸ್ತ ವಿದ್ಯಾರ್ಥಿ ಹಾಗೂ ಆರೋಪಿಗಳು ವಾಸವಾಗಿದ್ದಾರೆ. ಮೋಜು ಮಸ್ತಿಗೆ ಖಯಾಲಿಗೆ ಬಿದ್ದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ, ಇದಕ್ಕೆ ಸುಲಭವಾಗಿ ಹಣ ಸಂಪಾದನೆಗೆ ಸುಲಿಗೆ ಕೃತ್ಯಕ್ಕಿಳಿದಿದ್ದಾನೆ. ಅಂತೆಯೇ 9ನೇ ತರಗತಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ ಮನೆಯಿಂದ ಆತ ಚಿನ್ನಾಭರಣ ಕಳವು ಮಾಡಿಸಿದ್ದಾನೆ. ಬಳಿಕ ಈ ಚಿನ್ನಾಭರಣಗಳನ್ನು ಅರುಣ್ ಮೂಲಕ ಅಡಮಾನವಿಟ್ಟು ಹಣವನ್ನು ಎಂಜಿನಿಯರಿಂಗ್ ವಿದ್ಯಾರ್ಥಿ ಪಡೆದಿದ್ದ. ತಾನು ಆಭರಣ ಅಡಮಾನವಿಡಲು ಮುಂದಾದರೆ ವ್ಯಾಪಾರಿಗಳಿಗೆ ಶಂಕೆ ಬಂದು ಸಿಕ್ಕಿ ಬೀಳುತ್ತೇನೆ ಎಂದು ಊಹಿಸಿ ಆತ ಜಾಗ್ರತೆವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಚಕ ವೃತ್ತಿ:

ಅರುಣ್‌ ಅರ್ಚಕರ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಹಣದಾಸೆಗೆ ಬಿದ್ದು ಈ ಸುಲಿಗೆ ಕೃತ್ಯಕ್ಕೆ ವಿದ್ಯಾರ್ಥಿಗೆ ಸಾಥ್ ಕೊಟ್ಟಿದ್ದಾನೆ. ಒಂದೇ ಪ್ರದೇಶದಲ್ಲಿ ನಿವಾಸಿಗಳಾಗಿದ್ದರಿಂದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಅರುಣ್‌ಗೆ ಪರಿಚಯಸ್ಥರಾಗಿದ್ದರು. ಎಂದು ಪೊಲೀಸರು ಹೇಳಿದ್ದಾರೆ.

ಚಿನ್ನಾಭರಣ ಕಳ್ಳತನ, ಹೆತ್ತವರಿಗೆ ಅರಿವಿಲ್ಲ

ಖಾಸಗಿ ಕಂಪನಿಯಲ್ಲಿ ಸಂತ್ರಸ್ತನ ತಂದೆ-ತಾಯಿ ಉದ್ಯೋಗಲಿದ್ದಾರೆ. ವಿದ್ಯಾರ್ಥಿ ವರ್ತನೆಯಲ್ಲಿ ಬಲಾವಣೆ ಕಂಡು ಪೋಷಕರಿಗೆ ಶಾಲಾ ಪ್ರಾಂಶುಪಾಲು ಮಾಹಿತಿ ನೀಡಿದ್ದರು. ಆಗಲೇ ತಮ್ಮ ಮನೆಯಲ್ಲಿ ಚಿನ್ನಾಭರಣ ನಾಪತ್ತೆ ಸಂಗತಿ ಅವರ ಅರಿವಿಗೆ ಬಂದಿದೆ. ಇನ್ನು ಎಂಜಿನಿಯರಿಂಗ್ ವಿದ್ಯಾರ್ಥಿ ಪೋಷಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಮಗನನ್ನು ಕೂಲಿನಾಲಿ ಮಾಡಿ ಆತನ ತಾಯಿ ಓದಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.