ಮಂಡ್ಯ (ಸೆ.02):  ಕೊರೋನಾ ಸಂಕಷ್ಟ ಸಮಯದಲ್ಲಿ ಕೆಲಸ ಕಳೆದುಕೊಂಡು ರಾಜಧಾನಿಯಿಂದ ವಾಪಸಾದ ಇಬ್ಬರು ಎಂಜಿನಿಯರ್‌ ಪದವೀಧರರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಹೊಸ ಐಡಿಯಾ ಮಾಡಿದ್ದಾರೆ. ಗ್ರಾಹಕರ ಮನೆಗೆ ಬಂದು ಕಾರುಗಳನ್ನು ಕಡಿಮೆ ದರಕ್ಕೆ ವಾಶಿಂಗ್‌ ಮತ್ತು ಕ್ಲೀನಿಂಗ್‌ ಮಾಡಿಕೊಟ್ಟು ಹೋಗುತ್ತಾರೆ!

ಹೌದು, ಕಾರುಗಳನ್ನು ಸ್ವಚ್ಛಗೊಳಿಸುವ, ಪಾಲಿಶ್‌ ಮೂಲಕ ಅಂದ ಹೆಚ್ಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಂಡ್ಯದ ಇಬ್ಬರು ಎಂಜಿನಿಯರ್‌ಗಳ ಈ ಕೆಲಸಕ್ಕೆ ನಗರದ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್‌ ಕೂಡ ದೊರಕಿದೆ. ಕಳೆದ 2 ತಿಂಗಳಲ್ಲಿ 320 ಕಾರುಗಳನ್ನು ವಾಶ್‌ ಮತ್ತು ಕ್ಲೀನ್‌ ಮಾಡಿದ್ದಾರೆ. ಪ್ರತಿ ಕಾರಿಗೆ 280 ರೂ.ನಿಂದ 350 ರೂ. ಪಡೆಯುತ್ತಾರೆ.

ಕೊರೋನಾ ಭೀತಿ: ಪಬ್‌, ಬಾರ್‌ಗಳತ್ತ ಸುಳಿಯದ ಗ್ರಾಹಕರು!...

ಮಂಡ್ಯ ನೆಹರು ನಗರದ ಸಚಿನ್‌, ಸಂದೇಶ್‌ ಇಬ್ಬರೂ ಎಂಜಿನಿಯರ್‌ಗಳು. ಸಚಿನ್‌ ಸಿವಿಲ್‌ ಎಂಜಿನಿಯರ್‌ ಪದವೀಧರರಾಗಿದ್ದರೆ, ಸಂದೇಶ್‌ ಮೆಕ್ಯಾನಿಕಲ್‌ ಎಂಜಿಯರ್‌. ಇಬ್ಬರೂ ಒಂದೇ ಬಡಾವಣೆಯವರಾಗಿದ್ದು ಗೆಳೆಯರೂ ಹೌದು. ಸಚಿನ್‌ ಓದು ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸೈಟ್‌ ಎಂಜಿನಿಯರ್‌ ಆಗಿ ನೇಮಕಗೊಂಡಿದ್ದರು. ಸಂದೇಶ್‌ ಕೂಡ ಪದವಿ ಮುಗಿಸಿ ಬೆಂಗಳೂರಿನಲ್ಲೇ ಕೆಲಸದಲ್ಲಿದ್ದರು.