ಕೊರೋನಾ ಭೀತಿ: ಪಬ್, ಬಾರ್‌ಗಳತ್ತ ಸುಳಿಯದ ಗ್ರಾಹಕರು!
ಕೊರೋನಾ ಭೀತಿ, ಐಟಿ-ಬಿಟಿ ಮಂದಿಗೆ ವರ್ಕ್ ಫ್ರಂ ಹೋಂ ಎಫೆಕ್ಟ್, ನೀರಸ ಪ್ರತಿಕ್ರಿಯೆ| ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ಗಳು ಹೊಂದಿರುವ ಸಾಮರ್ಥ್ಯದ ಶೇ.50 ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಷರತ್ತು| ಆರು ತಿಂಗಳು ಬಂದ್ ಆಗಿದ್ದರೂ ಅಬಕಾರಿ ಇಲಾಖೆಗೆ ಕಟ್ಟುವ ವಾರ್ಷಿಕ ಶುಲ್ಕ 9 ಲಕ್ಷ ಕಟ್ಟಲೇಬೇಕು|
ಬೆಂಗಳೂರು(ಸೆ.02): ಐದು ತಿಂಗಳ ಬಳಿಕ ಮಂಗಳವಾರದಿಂದ ಕ್ಲಬ್, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಊಟದ ಜೊತೆಗೆ ಮದ್ಯ ವಿತರಣೆ ಪುನರಾರಂಭವಾಗಿದ್ದರೂ, ಕೊರೋನಾ ಸೋಂಕಿನ ಭೀತಿಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಸುಳಿಯಲಿಲ್ಲ.
ನಗರದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ವಿವಿಧ ಕಡೆ ಇರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ಪ್ರಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು ಗ್ರಾಹಕರ ಬರುವಿಕೆಗೆ ಕಾದಿದ್ದರೂ ಹೆಚ್ಚಿನ ಜನರು ಬರಲೇ ಇಲ್ಲ. ಅಲ್ಲದೇ ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಕೆಲವು ಉದ್ಯೋಗಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿರುವುದು ಸಹ ಇದಕ್ಕೆ ಕಾರಣ ಎನ್ನಲಾಗಿದೆ.
ಕೊರೋನಾತಂಕ ನಡುವೆ ಆನ್‌ಲೈನ್‌ಮೂಲಕ ಮನೆ ಬಾಗಿಲಿಗೆ ಮದ್ಯ!
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗ್ರಾಹಕರು ಬರುತ್ತಿಲ್ಲ. ಈ ಹಿಂದೆ ಮದ್ಯವನ್ನು ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಿದ್ದರಿಂದ ಬಾರ್‌ಗಳಲ್ಲಿ ಕುಳಿತು ಕುಡಿಯಲು ಜನ ಮುಂದಾಗುತ್ತಿಲ್ಲ ಎಂದು ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿತಿಳಿಸಿದ್ದಾರೆ.
ಸಿಬ್ಬಂದಿ ಕೊರತೆ:
ನಗರದಲ್ಲಿರುವ ಬಹುತೇಕ ಬಾರ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಉತ್ತರ ಭಾರತದವರಾಗಿದ್ದಾರೆ. ಇದೀಗ ಎಲ್ಲ ಸಿಬ್ಬಂದಿ ತಮ್ಮ ಊರುಗಳಿಗೆ ತೆರಳಿರುವ ಪರಿಣಾಮ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಿಬ್ಬಂದಿW ಕೊರತೆ ಇದೆ. ಹೀಗಾಗಿ ಕೇವಲ ಶೇ.30ಕ್ಕೂ ಕಡಿಮೆ ಬಾರ್ ಮತ್ತು ರೆಸ್ಟೋರೆಂಟ್‌ಗಳು ತೆರೆಯಲಾಗಿತ್ತು ಎಂದರು. ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆ ಬರುವ ಸಾಧ್ಯತೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ಗಳು ಹೊಂದಿರುವ ಸಾಮರ್ಥ್ಯದ ಶೇ.50 ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಷರತ್ತು ವಿಧಿಸಲಾಗಿದೆ. ಇದರಿಂದ ಲಾಭ ಬರುವುದಿರಲಿ, ನಷ್ಟವೇ ಹೆಚ್ಚಾಗುತ್ತದೆ. ಬಂದ್ ಮಾಡಿದಾಗ ಆಗುವ ನಷ್ಟಕ್ಕಿಂತ ಶೇ.50ರಷ್ಟು ಆಸನಕ್ಕೆ ಅವಕಾಶ ನೀಡುವುದರಿಂದ ಆಗುವ ನಷ್ಟದ ಪ್ರಮಾಣ ಹೆಚ್ಚು. ಜೊತೆಗೆ, ಆರು ತಿಂಗಳು ಬಂದ್ ಆಗಿದ್ದರೂ ಅಬಕಾರಿ ಇಲಾಖೆಗೆ ಕಟ್ಟುವ ವಾರ್ಷಿಕ ಶುಲ್ಕ 9 ಲಕ್ಷ ಕಟ್ಟಲೇಬೇಕು. ಸರ್ಕಾರ ರಿಯಾಯ್ತಿ ಘೋಷಿಸಿಲ್ಲ. ಇದೇ ಕಾರಣದಿಂದ ಬಾರ್‌ಗಳ ತೆಗೆಯಲು ಮುಂದಾಗುತ್ತಿಲ್ಲ ಎಂದರು.