Asianet Suvarna News Asianet Suvarna News

ಕೃಷಿಕರೆ ಈ ರೀತಿಯ ಪಂಪ್ ಸೆಟ್ ಬಳಸಿ : ಇಂಧನ ಉಳಿಸಿ

ಬಿಇಇ ಸ್ಟಾರ್ ಲೇಬಲ್ ವುಳ್ಳ ಇಂಧನ ದಕ್ಷ ಕೃಷಿ ಪಂಪ್ ಸೆಟ್ ಬಳಕೆ ಮತ್ತು ಸೂಕ್ಷ್ಮ ನೀರಾವರಿ ಅಳವಡಿಕೆ ಮಾಡಿಕೊಳ್ಳುವುದರಿಂದ ಇಂಧನ ಉಳಿತಾಯದ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಸಾಧ್ಯ ಎಂದು ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸಿ. ರಾಮಚಂದ್ರ ತಿಳಿಸಿದರು.

Energy saving is possible by using BEE Star Label agricultural pump set snr
Author
First Published Nov 4, 2023, 10:10 AM IST

  ಮೈಸೂರು :  ಬಿಇಇ ಸ್ಟಾರ್ ಲೇಬಲ್ ವುಳ್ಳ ಇಂಧನ ದಕ್ಷ ಕೃಷಿ ಪಂಪ್ ಸೆಟ್ ಬಳಕೆ ಮತ್ತು ಸೂಕ್ಷ್ಮ ನೀರಾವರಿ ಅಳವಡಿಕೆ ಮಾಡಿಕೊಳ್ಳುವುದರಿಂದ ಇಂಧನ ಉಳಿತಾಯದ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಸಾಧ್ಯ ಎಂದು ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸಿ. ರಾಮಚಂದ್ರ ತಿಳಿಸಿದರು.

ಮೈಸೂರಿನ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಬಿಇ), ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಮತ್ತು ಮೈಸೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಡಿಮೆ ನೀರಿನ ಬಳಕೆಯಿಂದ ರಸಗೊಬ್ಬರಗಳು ಪೋಲಾಗುವುದು ಕಡಿಮೆಯಾಗಿ ಉತ್ತಮ ಬೆಳೆ ಪಡೆಯುವುದರ ಜೊತೆಗೆ ಮಣ್ಣಿನ ಫಲವತ್ತತೆ ಕಾಪಾಡಬಹುದು ಎಂದು ಅವರು ಹೇಳಿದರು.

ಕೃಷಿ ಪಂಪ್ ತಜ್ಞ ನಾಗರಾಜು ಮಾತನಾಡಿ, ವೈಂಡರ್ ಗಳು ಉತ್ತಮ ಗುಣಮಟ್ಟದ ಒಂದೇ ಮಾದರಿಯ ವೈಂಡಿಂಗ್ ಕಾಯಿಲ್ ಬಳಸಿ ಪಂಪ್ ಸೆಟ್ ರಿವೈಂಡಿಂಗ್ ಮಾಡುವುದರಿಂದ ಇಂಧನ ಉಳಿತಾಯದ ಜೊತೆಗೆ ದೀರ್ಘಕಾಲ ಬಾಳಿಕೆ ಸಾಧ್ಯ. ವಿದ್ಯುತ್ ಪಂಪ್ ಸೆಟ್ ನಿರ್ವಹಣೆಯಲ್ಲಿ ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆ, ಬೋರ್ ವೆಲ್ ಆಳಕ್ಕೆ ಅನುಗುಣವಾಗಿ ಕೃಷಿ ಪಂಪ್ ಸೆಟ್ ಗಳ ಆಯ್ಕೆ, ವೈರಿಂಗ್ ಪದ್ಧತಿ, ರಿವೈಂಡಿಂಗ್ ನಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳು ಮತ್ತು ಪರಿಣಾಮಗಳ ಕುರಿತು ವಿವರಿಸಿದರು.

ವಿಟಿಯು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ್ ಮಾತನಾಡಿ, ಉತ್ತಮ ಕೃಷಿ ಪಂಪ್ ಸೆಟ್ ಗಳ ಆಯ್ಕೆಯಿಂದ ರೈತರ ಶ್ರಮ, ಹಣ, ವಿದ್ಯುತ್ ಶಕ್ತಿ ಬಳಕೆ ಪ್ರಮಾಣ ಮತ್ತು ಬೆಳೆ ನಷ್ಟ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ವಿಟಿಯು ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಸ್. ಕೃಷ್ಣಮೂರ್ತಿ ಮಾತನಾಡಿ, ಆಟೋ ಮೇಷನ್ ತಂತ್ರಜ್ಞಾನಗಳ ಅಳವಡಿಕೆಯಿಂದ ಬೇಕಾದಷ್ಟು ಮಾತ್ರ ನೀರು ಬಳಕೆಯಾಗಿ ವಿದ್ಯುತ್ ಶಕ್ತಿ ಉಳಿತಾಯ ಸಾಧ್ಯ ಎಂದರು.

ಸೆಲ್ಕೋ ಕಂಪನಿಯ ಪ್ರತಿನಿಧಿ ರಕ್ಷಿತ್ ಮಾತನಾಡಿ, ಸೋಲಾರ್ ಕೃಷಿ ಪಂಪ್ ಸೆಟ್ ಗಳಿಗೆ ಪಿಎಂ ಕುಸುಮ್ ಯೋಜನೆಯಡಿ ದೊರೆಯುವ ಸಹಾಯಧನ ಮತ್ತು ಸೆಲ್ಕೋ ಕಂಪನಿಯಿಂದ ದೊರೆಯುವ ಸೇವೆಯನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 80 ಹೆಚ್ಚಿನ ರೈತರು ಮತ್ತು ವೈಂಡರ್ ಗಳು ಭಾಗವಹಿಸಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ರೈತ ಮಿತ್ರ ವೈಂಡರ್ಸ್ ಅಸೋಸಿಯೇಷನ್ ಮೈಸೂರು ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ, ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗೇಶ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್. ಯೋಗೇಶ್ ಇದ್ದರು. ಸಹಾಯಕ ಕೃಷಿ ನಿರ್ದೇಶಕಿ ವಜ್ರೇಶ್ವರಿ ನಿರೂಪಿಸಿದರು. ಕೃಷಿ ಅಧಿಕಾರಿ ಮಂಜುಳಾ ವಂದಿಸಿದರು.

Follow Us:
Download App:
  • android
  • ios