ಶಿಕ್ಷಣದಿಂದ ಮಾತ್ರ ಮಹಿಳಾ ಶೋಷಣೆಗೆ ಇತಿಶ್ರೀ : ವಾಣಿ ಸತೀಶ್
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಹಲವಾರು ವರ್ಷಗಳೇ ಕಳೆದರೂ ಮಹಿಳೆ ಮಾತ್ರ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆಗಳಂತಹ ಕಿರುಕುಳಗಳಿಂದ ಇಂದಿಗೂ ಮುಕ್ತಿ ಸಿಗದೆ ನಿತ್ಯವೂ ಶೋಷಣೆಗೆ ಒಳಗಾಗುತ್ತಿರುವುದರಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ಇತಿಶ್ರೀ ಹಾಡಬೇಕೆಂದು ರಂಗಭೂಮಿ ಮತ್ತು ಭರತನಾಟ್ಯ ಕಲಾವಿದೆ ವಿಧೂಷಿ ವಾಣಿ ಸತೀಶ್ ತಿಳಿಸಿದರು.
ತಿಪಟೂರು : ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಹಲವಾರು ವರ್ಷಗಳೇ ಕಳೆದರೂ ಮಹಿಳೆ ಮಾತ್ರ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆಗಳಂತಹ ಕಿರುಕುಳಗಳಿಂದ ಇಂದಿಗೂ ಮುಕ್ತಿ ಸಿಗದೆ ನಿತ್ಯವೂ ಶೋಷಣೆಗೆ ಒಳಗಾಗುತ್ತಿರುವುದರಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ಇತಿಶ್ರೀ ಹಾಡಬೇಕೆಂದು ರಂಗಭೂಮಿ ಮತ್ತು ಭರತನಾಟ್ಯ ಕಲಾವಿದೆ ವಿಧೂಷಿ ವಾಣಿ ಸತೀಶ್ ತಿಳಿಸಿದರು.
ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕಲ್ಪತರು ಮಹಿಳಾ ಸಂಸ್ಥೆ ವತಿಯಿಂದ ತಿಪಟೂರಿನ ಮಹಿಳೆಯರಿಗಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೂರು ವರ್ಷಗಳ ಹಿಂದೆ ಮಹಿಳೆಯರ ಶೋಷಣೆ, ವೇತನ ಹೆಚ್ಚಳ, ಹಕ್ಕುಗಳ ಮೊಟಕು, ಆಸೆ ಆಕಾಂಕ್ಷೆಗಳ ದಮನ, ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ನ್ಯೂಯಾರ್ಕ್ನಲ್ಲಿ ಕ್ಲಾರಾ ಜೆಟ್‌ಕಿಂಗ್ ಎಂಬ ಮಹಿಳೆಯ ಮಾಡಿದ ಹೋರಾಟ ಫಲವಾಗಿ ಮತದಾನ ಹಾಗೂ ಉದ್ಯೋಗದ ಹಕ್ಕುಗಳು ಮಹಿಳೆಯರಿಗೆ ದೊರೆಯುವಂತಾಯಿತು. ಇದರ ಪರಿಣಾಮವಾಗಿ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡುವಂತೆ ಘೋಷಣೆ ಮಾಡಿತು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಶಮಂತಾ ಮನೋಜ್ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ ಮಹಿಳೆಯರಿಗೆ ಇರುವಂತಹ ಹಕ್ಕು ಮತ್ತು ಶಾಂತಿಯ ವಾತಾವರಣವನ್ನು ಸಮಾಜ ಕಲ್ಪಿಸಬೇಕೆಂಬುದಾಗಿದೆ. ಪ್ರತಿಯೊಬ್ಬ ಮಹಿಳೆ ಒಬ್ಬ ಪುರುಷನಿಗೆ ಸಮನಾಗಿದ್ದು, ಕಷ್ಟ, ಸುಖದಲ್ಲಿ ಭಾಗಿಯಾಗುತ್ತಿದ್ದಾಳೆ. ಯಶಸ್ವಿ ಪುರುಷನ ಹಿಂದೆ ಒಬ್ಬ ಯಶಸ್ವಿ ಮಹಿಳೆ ಇದ್ದೇ ಇರುತ್ತಾಳೆ. ಈ ನಿಟ್ಟಿನಲ್ಲಿ ಪುರುಷರು ಮಹಿಳೆಯರನ್ನು ಗೌರವಿಸುವ ಮೂಲಕ ಪೋ›ತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲ್ಪತರು ಮಹಿಳಾ ಸಂಸ್ಥೆ ಅಧ್ಯಕ್ಷೆ ಭಾಗ್ಯಮೂರ್ತಿ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳು ತಮ್ಮ ಛಾಪು ಮೂಡಿಸಿದ್ದು ಯಾರಿಗೇನೂ ಕಡಿಮೆ ಇಲ್ಲ ಎಂಬಂತೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದ್ದಾರೆ. ಮಹಿಳೆಯರು ಅಡಿಗೆ ಮನೆಗೆ ಮಾತ್ರ ಸೀಮಿತ ಎಂದುಕೊಂಡಿದ್ದ ಕಾಲ ಈಗ ಬದಲಾಗಿದ್ದು, ಮಹಿಳೆಯರು ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಸುಗಮ ಸಂಗೀತ ಗಾಯಕಿ ಸುಧಾ ಪೈ, ನೃತ್ಯ ಕಲಾವಿದೆ ಲಾಹಿತ್ಯ ಮಾತನಾಡಿದರು. ನಗರಸಭೆ ಮಾಜಿ ಸದಸ್ಯೆ ರೇಖಾ ಅನೂಪ್, ಕಲ್ಪತರು ಮಹಿಳಾ ಸಂಸ್ಥೆ ಉಪಾಧ್ಯಕ್ಷೆ ಸಾವಿತ್ರಿಸ್ವಾಮಿ, ಕಾರ್ಯದರ್ಶಿ ಲತಾಮೂರ್ತಿ, ಖಜಾಂಚಿ ಸುಮನಾ, ಪದಾಧಿಕಾರಿಗಳಾದ ಪ್ರಭಾ ವಿಶ್ವನಾಥ್, ಜಯಶೀಲಾ, ಜಯತಂಡಗ, ರೇವತಿ, ಸುಮನಾ, ಉಮಾ ನಾರಾಯಣಗೌಡ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ದಿನಾಚರಣೆ ಅಂಗವಾಗಿ ಜಾನಪದ ನೃತ್ಯ, ಭಾವಗೀತೆ, ವಿವಿಧ ರೀತಿಯ ಸೀರೆ ಉಡುವುದು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು