Asianet Suvarna News Asianet Suvarna News

Bengaluru Flood: ಬೆಂಗ್ಳೂರಿನ 2,626 ಸ್ಥಳಗಳಲ್ಲಿ ರಾಜಕಾಲುವೆ ಒತ್ತುವರಿ

ಬಿಬಿಎಂಪಿ ವ್ಯಾಪ್ತಿಯಲ್ಲಿ 840 ಕಿ.ಮೀ ಉದ್ದದ ರಾಜಕಾಲುವೆ, ಪ್ರಸ್ತುತ 696 ಒತ್ತುವರಿಗಳು ತೆರವಿಗೆ ಬಾಕಿ

Encroachment of Rajakaluve at 2626 Places in Bengaluru grg
Author
First Published Sep 3, 2022, 6:47 AM IST | Last Updated Sep 3, 2022, 6:49 AM IST

ಬೆಂಗಳೂರು(ಸೆ.03):  ನಗರದಲ್ಲಿ ಮಳೆಯಿಂದ ಉಂಟಾದ ಪ್ರವಾಹದಿಂದ ಎಚ್ಚೆತ್ತುಕೊಂಡು ಪಾಲಿಕೆ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿರುವಂತ ಒತ್ತುವರಿಗಳನ್ನು ತ್ವರಿತವಾಗಿ ತೆರವುಗೊಳಿಸಲು ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 840 ಕಿ.ಮೀ ಉದ್ದದ ರಾಜಕಾಲುವೆಗಳಿಗೆ. ಆ ಪೈಕಿ ಸುಮಾರು 400 ಕಿ.ಮೀ ಉದ್ದದ ರಾಜಕಾಲುವೆ ದುರಸ್ತಿಯಾಗಿದ್ದು ಅಭಿವೃದ್ಧಿ ಕಾಮಗಾರಿಯೂ ಪೂರ್ಣಗೊಂಡಿದೆ. ಇದೀಗ ಎರಡು ಹಂತದಲ್ಲಿ 171.50 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ 481.88 ಕೋಟಿ ರು.ಗಳ ವೆಚ್ಚದಲ್ಲಿ 47.49 ಕಿ.ಮೀ ಮತ್ತು ದ್ವಿತೀಯ ಹಂತದಲ್ಲಿ 1,005.12 ಕೋಟಿ ರು.ವೆಚ್ಚದಲ್ಲಿ 123.5 ಕಿ.ಮೀ ಉದ್ದದ ರಾಜಕಾಲುವೆಯನ್ನು ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕ್ರಿಯಾ ಯೋಜನೆಗೆ ತಾಂತ್ರಿಕ ಸಲಹಾ ಸಮಿತಿಯಿಂದ ಅನುಮತಿ ಪಡೆಯಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 696 ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ಬಾಕಿ ಇದೆ. ನಗರದಲ್ಲಿ ಉಂಟಾಗುವ ಪ್ರವಾಹ ನಿಯಂತ್ರಣ ಮಾಡುವ ಉದ್ದೇಶದಿಂದ 2016ರಲ್ಲಿ ಕಂದಾಯ ಇಲಾಖೆಯಿಂದ ಸಮೀಕ್ಷೆ ಮಾಡಿ 2,626 ಕಡೆ ರಾಜಕಾಲುವೆ ಒತ್ತುವರಿ ಪ್ರಕರಣವನ್ನು ಪತ್ತೆ ಮಾಡಲಾಗಿತ್ತು. ಈ ಪೈಕಿ 2016-17ನೇ ಸಾಲಿನಲ್ಲಿ 428, 2018-19ನೇ ಸಾಲಿನಲ್ಲಿ 1502 ಹಾಗೂ 2020ರಲ್ಲಿ 714 ಒತ್ತುವರಿ ಪ್ರಕರಣ ತೆರವು ಮಾಡಲಾಗಿದೆ. ಪ್ರಸ್ತುತ 696 ಒತ್ತುವರಿಗಳು ತೆರವಿಗೆ ಬಾಕಿ ಇವೆ.

ಬೆಂಗಳೂರು ರಾಜಕಾಲುವೆ ನಿರ್ಮಾಣಕ್ಕೆ 1500 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ಈ ಪೈಕಿ ಪೂರ್ವ 110, ಪಶ್ಚಿಮ 59, ದಕ್ಷಿಣ 20, ಕೋರಮಂಗಲ ಕಣಿವೆ 3, ಯಲಹಂಕ 96, ಮಹದೇವಪುರ 136, ಮಹದೇವಪುರ(ಹೊಸ) 45, ಬೊಮ್ಮನಹಳ್ಳಿ 26, ಬೊಮ್ಮನಹಳ್ಳಿ(ಹೊಸ) 66, ಆರ್‌.ಆರ್‌.ನಗರ 9, ದಾಸರಹಳ್ಳಿ 126 ಸೇರಿದಂತೆ ಹೀಗೆ ಒಟ್ಟು 696 ಒತ್ತುವರಿಗಳು ತೆರವಿಗೆ ಬಾಕಿ ಇದೆ. ರೈನ್‌ಬೊ ಬಡಾವಣೆಯಲ್ಲಿ ಕೆಲವರು ನಕ್ಷೆ ಉಲ್ಲಂಘಿಸಿ ರಾಜಕಾಲುವೆ ಮೇಲೆಯೇ ಮನೆ ಕಟ್ಟಿದ್ದಾರೆ. ಅದರಲ್ಲಿ 32 ಮನೆಗಳು ರಾಜಕಾಲುವೆ ಮೇಲೆ ಇವೆ. ಅವುಗಳನ್ನು ಕೂಡ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ತಿಳಿಸಿದೆ.

ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯೊಡ್ಡುತ್ತಿರುವ ಒತ್ತುವರಿಗಳನ್ನು ಮೊದಲಿಗೆ ತೆರವುಗೊಳಿಸಲಾಗುತ್ತಿದೆ. ಈಗಾಗಲೇ ಅನೇಕ ಕಟ್ಟಡಗಳು, ಕಾಂಪೌಂಡ್‌ಗಳು ಸೇರಿದಂತೆ ಖಾಸಗಿಯವರು ಮಾಡಿದ್ದ ಒತ್ತುವರಿಯನ್ನು ತೆರವುಗೊಳಿಸುತ್ತಿದ್ದೇವೆ. ಮಳೆಗಾಲ ಮುಗಿಯುತ್ತಿದ್ದಂತೆ ರಾಜಕಾಲುವೆಯ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಜೊತೆಗೆ ನಗರದ ರಾಜಕಲುವೆಗಳ ಅಭಿವೃದ್ಧಿಗೆ ಸಿದ್ದಪಡಿಸಿರುವ 1500 ಕೋಟಿ ವೆಚ್ಚದ ಕ್ರಿಯಾ ಯೋಜನೆಯ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ಹಾಗೂ ರಾಜಕಾಲುವೆ ಅಕ್ಕಪಕ್ಕದ ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು ಈ ಸಮಸ್ಯೆ ನಿವಾರಿಸಿ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ 1500 ಕೋಟಿ ಅನುದಾನ ನೀಡಿದೆ. ಅದಕ್ಕೆ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
 

Latest Videos
Follow Us:
Download App:
  • android
  • ios