ಸರ್ಕಾರಿ ಕಚೇರಿಯಲ್ಲೇ ಕೊರೋನಾ ರೂಲ್ಸ್‌ಗಿಲ್ಲ ಕಿಮ್ಮತ್ತು..!
ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಧರಿಸದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ| ಅವರಿಗೊಂದು ನ್ಯಾಯ, ನಮಗೊಂದು ನ್ಯಾಯಾನಾ?|ಸರ್ಕಾರಿ ಸಿಬ್ಬಂದಿಗೆ ಕೊರೋನಾ ವಿನಾಯಿತಿ ನೀಡಿದೆಯೇ? ಅವರಿಗೆ ಬರುವುದಿಲ್ವಾ? ಎಂಬ ಸಾರ್ವಜನಿಕರ ಪ್ರಶ್ನೆಗಳು|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಏ.21): ಕೋವಿಡ್ ನಿಯಮ ಪಾಲಿಸಿ, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಸರ್ಕಾರಿ ಕಚೇರಿ ಸಿಬ್ಬಂದಿಯೇ ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ..!
ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಾರ್ವಜನಿಕರಿಗೆ ದಂಡ ವಿಧಿಸುವ, ಜಾಗೃತಿ ಮಾಡಿಸುವ ಮಹಾನಗರ ಪಾಲಿಕೆ ಹಾಗೂ ತಹಸೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ಮಾಸ್ಕ್ ಧರಿಸುತ್ತಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ತ ಜಿಲ್ಲಾಡಳಿತ ಪ್ರತಿನಿತ್ಯ ಕೋವಿಡ್ ಸಂಬಂಧ ಸಭೆ ನಡೆಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸುತ್ತಿದೆ. ಇದರೊಂದಿಗೆ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರೇ ಫೀಲ್ಡಿಗಿಳಿದು ಮಾಸ್ಕ್ ಧರಿಸದವರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತ ಮಹಾನಗರ ಪಾಲಿಕೆ ಸಿಬ್ಬಂದಿಯೂ ಕಳೆದ ಒಂದು ತಿಂಗಳಿಂದ ಮಾಸ್ಕ್ ಧರಿಸದವರನ್ನು, ಸಾಮಾಜಿಕ ಅಂತರ ಕಾಯ್ದುಕೊಳ್ಳದವರನ್ನು ರಸ್ತೆಗಳಲ್ಲೇ ಹಿಡಿದು ದಂಡ ವಿಧಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ಕಾರಣದಿಂದಲೇ ಕಳೆದ ಒಂದು ತಿಂಗಳಲ್ಲಿ ಪಾಲಿಕೆ 12 ವಲಯ ಕಚೇರಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಂದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಾರ್ವಜನಿಕರಿಂದ ಬರೋಬ್ಬರಿ . 13 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದೆ. ಇದರಲ್ಲಿ . 10 ಲಕ್ಷ ಮಾಸ್ಕ್ ಧರಿಸದಿರುವುದಕ್ಕೆ ವಸೂಲಿ ಮಾಡಲಾಗಿದ್ದರೆ, ಇನ್ನುಳಿದ . 3 ಲಕ್ಷಕ್ಕೂ ಅಧಿಕ ಹಣವನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವವರಿಂದ ವಸೂಲಿ ಮಾಡಲಾಗಿದೆ.
ಅತ್ತ ಮಾರುಕಟ್ಟೆ, ರಸ್ತೆಗಳಲ್ಲಿ ದಂಡ ವಿಧಿಸುವ ಪಾಲಿಕೆ ಸಿಬ್ಬಂದಿ ಮಾತ್ರ ಇತ್ತ ತಮ್ಮ ಕಚೇರಿಗಳನ್ನೇ ಮರೆತಿದ್ದಾರೆ. ಪಾಲಿಕೆಯ ಕಚೇರಿಗಳಲ್ಲಿ, ಮಿನಿ ವಿಧಾನಸೌಧದಲ್ಲಿನ ಕಚೇರಿಗಳಲ್ಲಿ ಮಾಸ್ಕ್ ಧರಿಸುವಿಕೆ ಕಡ್ಡಾಯವೆಂಬುದೇ ಇಲ್ಲ. ಸಾಮಾಜಿಕ ಅಂತರದ ಪ್ರಶ್ನೆಯಂತೂ ಕೇಳುವಂತೆಯೇ ಇಲ್ಲ. ಆ ರೀತಿ ಅಕ್ಕಪಕ್ಕದಲ್ಲೇ ಸಾರ್ವಜನಿಕರು ನಿಂತಿರುವುದು ಕಾಣಸಿಗುತ್ತದೆ.
ಅರಣ್ಯ ಸೇರಿದ ಒಂಟಿ ಸಲಗ: ನಿಟ್ಟುಸಿರು ಬಿಟ್ಟ ಧಾರವಾಡ ಮಂದಿ..!
ಯಾರೂ ಧರಿಸುತ್ತಿಲ್ಲ:
ಪಾಲಿಕೆ ಕಚೇರಿ, ತಹಸೀಲ್ದಾರ್ ಕಚೇರಿ ಸೇರಿದಂತೆ ಯಾವ ಸರ್ಕಾರಿ ಕಚೇರಿಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿದೆಯೇ? ಎಂಬುದನ್ನು ಕನ್ನಡಪ್ರಭ ರಿಯಾಲಿಟಿ ಚೆಕ್ ಮಾಡಿದಾಗ ಯಾವ ಕಚೇರಿಯಲ್ಲೂ ಕೋವಿಡ್ ನಿಯಮ ಪಾಲನೆಯಾಗದಿರುವುದು ಗೋಚರವಾಯಿತು. ಕಚೇರಿಗೆ ಬರುವ ಸಾರ್ವಜನಿಕರು ಮಾಸ್ಕ್ ಧರಿಸಿದರೂ ಸಿಬ್ಬಂದಿಯೇ ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಧರಿಸಿದ್ದರೂ ಮೂಗಿನಿಂದ ಕೆಳಗೆ ಇರುತ್ತದೆ. ಅಂದರೆ ಹೆಸರಿಗಷ್ಟೇ ಮಾಸ್ಕ್ ಧರಿಸುವಿಕೆ ನಡೆಯುತ್ತಿದೆ. ಇನ್ನೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಲೇ ಇಲ್ಲ. ಒಂದು ವೇಳೆ ಹಿರಿಯ ಅಧಿಕಾರಿಗಳೇನಾದರೂ ಸಿಬ್ಬಂದಿ ಕರೆದರೆ ಆಗ ಮಾತ್ರ ಮಾಸ್ಕ್‌ನ್ನು ಹಾಕಿಕೊಂಡು ಅಧಿಕಾರಿಗಳ ಬಳಿ ತೆರಳುವುದು ಗೋಚರವಾಗುತ್ತದೆ.
ಆಕ್ರೋಶ:
ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಧರಿಸದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಾರ್ವಜನಿಕರಿಗಾದರೆ ರಸ್ತೆಗಳಲ್ಲೇ ತಡೆದು ನಿಲ್ಲಿಸಿ ದಂಡ ಹಾಕಲಾಗುತ್ತಿದೆ. ಇದೇ ಸಿಬ್ಬಂದಿ ಕಚೇರಿಗಳಲ್ಲಿ ಮಾಸ್ಕ್ ಇಲ್ಲದೇ ಕೆಲಸ ಮಾಡುತ್ತಾರಲ್ಲ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ? ಸರ್ಕಾರಿ ಸಿಬ್ಬಂದಿಗೆ ಕೊರೋನಾ ವಿನಾಯಿತಿ ನೀಡಿದೆಯೇ? ಅವರಿಗೆ ಬರುವುದಿಲ್ವಾ? ಎಂಬೆಲ್ಲ ಪ್ರಶ್ನೆಗಳು ಸಾರ್ವಜನಿಕರದ್ದು.
ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳು ಮೊದಲು ತಮ್ಮ ಕಚೇರಿಯ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕು. ಮಾಸ್ಕ್ ಧರಿಸದಿದ್ದಕ್ಕೆ ದಂಡ ಹಾಕಬೇಕು. ಆಮೇಲಷ್ಟೇ ಸಾರ್ವಜನಿಕರಿಗೆ ದಂಡ ವಿಧಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ನಮಗೊಂದು ನ್ಯಾಯ ಅವರಿಗೊಂದು ನ್ಯಾಯನಾ? ಮಾಸ್ಕ್ ಧರಿಸದ ಸಿಬ್ಬಂದಿಗೆ ಮೊದಲು ದಂಡ ವಿಧಿಸಬೇಕು ಎಂದು ಸಾರ್ವಜನಿಕ ಹನುಮಂತಗೌಡ ಪಾಟೀಲ ಅವರು ತಿಳಿಸಿದ್ದಾರೆ.