ಧಾರವಾಡ(ಏ. 21): ಕಳೆದ ಎರಡು ದಿನಗಳಿಂದ ಧಾರವಾಡ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಒಂಟಿ ಸಲಗ(ಕಾಡಾನೆ) ಯನ್ನು ನಿರಂತರ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಪುನಃ ಅರಣ್ಯ ಪ್ರದೇಶಕ್ಕೆ ಸೇರಿಸುವಲ್ಲಿ ಇಲ್ಲಿನ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ದಾಟಿ ನಾಯಕನ ಹುಲಿಕಟ್ಟಿ ಸಮೀಪ ಮಂಗ​ಳ​ವಾ​ರ ಬೆಳಗ್ಗೆ ಪ್ರತ್ಯ​ಕ್ಷ​ವಾದ ಈ ಆನೆಯು ನಂತರ ಮಂಡಿಹಾಳ ಮುಖಾಂತರ ಅರಣ್ಯ ಪ್ರದೇಶಕ್ಕೆ ಸೇರಿದೆ. ಸುತ್ತಲಿನ ಪ್ರದೇಶಗಳ ಜನರು ಹೆದರುವ ಅಗತ್ಯವಿಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ ಮನವಿ ಮಾಡಿದ್ದಾರೆ.

ಧಾರವಾಡ: ಕರ್ನಾಟಕ ವಿವಿಗೆ ಆಗಮಿಸಿದ ಗಜರಾಜ, ಹೌಹಾರಿದ ಜನ..!

ಕಳೆದ ಭಾನು​ವಾರ ನಸು​ಕಿ​ನಲ್ಲಿ ಕರ್ನಾ​ಟಕ ವಿವಿ ಗೆಸ್ಟ್‌ ಹೌಸ್‌ ಬಳಿ ಕಾಣಿ​ಸಿ​ಕೊಂಡಿದ್ದ ಈ ಆನೆ ಕವಿವಿ ಸಿಬ್ಬಂದಿ, ವಿದ್ಯಾ​ರ್ಥಿ​ಗಳು ಸೇರಿ​ದಂತೆ ಇಡೀ ಧಾರ​ವಾ​ಡದ ಜನ​ತೆ​ಯನ್ನು ಬೆಚ್ಚಿ ಬೀಳಿ​ಸಿತ್ತು. ಅಲ್ಲದೇ, ಮರು​ದಿನ ಎಸ್‌ಡಿಎಂ ಎಂಜಿ​ನಿ​ಯ​ರಿಂಗ್‌ ಕಾಲೇಜು ಸುತ್ತ​ಮು​ತ್ತಲು ಕಾಣಿ​ಸಿ​ಕೊಂಡು ಮತ್ತಷ್ಟು ಆತಂಕ ಸೃಷ್ಟಿ​ಸಿತ್ತು. ಈ ನಿಟ್ಟಿ​ನಲ್ಲಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಮೂರು ತರಬೇತಿ ಹೊಂದಿದ ಆನೆಗಳು ಹಾಗೂ ವೈದ್ಯರು ಸಹ ಮಂಗ​ಳ​ವಾ​ರ ಆಗ​ಮಿ​ಸಿ​ದ್ದರು. ಆದರೆ, ಅವರು ಕಾರ್ಯಾಚರಣೆಗೆ ಇಳಿಯುವ ಮುನ್ನವೇ ಕಾಡಾನೆಯು ಮತ್ತೆ ಅರಣ್ಯ ಪ್ರದೇಶ ಸೇರಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚ​ಪ್ಪ​ನ​ವರ, ಆರ್‌ಎಫ್‌ಒಗಳಾದ ಆರ್‌.ಎಸ್‌. ಉಪ್ಪಾರ, ಶ್ರೀಕಾಂತ ಪಾಟೀಲ, ಶ್ರೀಧರ ತೆಗ್ಗಿನಮನಿ ಸೇರಿದಂತೆ ಹುಬ್ಬಳ್ಳಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಭಾಗವಹಿಸಿದ್ದರು.