Asianet Suvarna News Asianet Suvarna News

ಪಿಂಚಣಿಗೆ ಕಾಯತ್ತಿದ್ದಾರೆ ತುರ್ತು ಪರಿಸ್ಥಿತಿ ಹೋರಾಟಗಾರರು

  • ಬಿಹಾರ ಸೇರಿದಂತೆ ಬಿಜೆಪಿ ಆಡಳಿತದ 12 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಈಗಾಗಲೇ ಪಿಂಚಣಿ
  • ಕರ್ನಾಟಕದಲ್ಲಿ 2021 ಜನವರಿಯಲ್ಲಿ ಪಿಂಚಣಿ ಯೋಜನೆ ಘೋಣೆಯಾದರೂ ಇನ್ನೂ ಜಾರಿಯಾಗಿಲ್ಲ
Emergency period fighters  waiting for Karnataka govt pension Scheme snr
Author
Bengaluru, First Published Sep 23, 2021, 3:58 PM IST

ವರದಿ :  ಆತ್ಮಭೂಷಣ್‌

 ಮಂಗಳೂರು (ಸೆ.23):  ಬಿಹಾರ ಸೇರಿದಂತೆ ಬಿಜೆಪಿ ಆಡಳಿತದ 12 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ (emergency period) ಹೋರಾಟಗಾರರಿಗೆ ಈಗಾಗಲೇ ಪಿಂಚಣಿ (Pension) ನೀಡಲಾಗುತ್ತಿದೆ. ಕರ್ನಾಟಕದಲ್ಲಿ 2021 ಜನವರಿಯಲ್ಲಿ ಪಿಂಚಣಿ ಯೋಜನೆ ಘೋಣೆಯಾದರೂ ಇನ್ನೂ ಜಾರಿಯಾಗಿಲ್ಲ.

ದೇಶದಲ್ಲಿ ಪ್ರಧಾನಿ ಇಂದಿರಾಗಾಂಧಿ ಆಡಳಿತದಲ್ಲಿ 1975ಜೂ.25ರಿಂದ 1977 ಮಾ.20ರ ವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಇದರ ವಿರುದ್ಧ ಎಲ್ಲ ಕಡೆಗಳಲ್ಲಿ ಭೂಗತ ಸಹಿತ ಹೋರಾಟ ನಡೆದಿತ್ತು. ರಾಜ್ಯದಲ್ಲಿ ಸುಮಾರು 9,500 ಮಂದಿ ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದರು. ಅವರಲ್ಲಿ ಶೇ.50ರಷ್ಟುಮಂದಿ ಈಗ ನಿಧನರಾಗಿದ್ದಾರೆ. ಉಳಿದವರು ಇದ್ದರೂ ಇಲ್ಲದಂತೆ ಇದ್ದಾರೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದಕ್ಕಾಗಿ ಲಾಠಿ ಏಟು, ಜೈಲು ಶಿಕ್ಷೆ ಸೇರಿದಂತೆ ಅತ್ಯಂತ ಕಠಿಣ ಶಿಕ್ಷೆ ಅನುಭವಿಸಿ ದೈಹಿಕವಾಗಿ ಸೊರಗಿದ್ದಾರೆ. ಬಹುತೇಕ ಮಂದಿ ಆರ್ಥಿಕವಾಗಿಯೂ ಸೋತಿದ್ದಾರೆ. ಜೀವನಕ್ಕಾಗಿ ಪಡಿಪಾಟಿಲು ಪಡುವವರೇ ಹೆಚ್ಚು. ಆಗ ಲೋಕತಂತ್ರದ ಕರೆಯ ಮೇರೆಗೆ ಹೋರಾಟಕ್ಕೆ ಧುಮುಕಿ ಎಲ್ಲವನ್ನೂ ಕಳೆದುಕೊಂಡವರು ಇದ್ದಾರೆ. ಅಂತಹವರಿಗೆ ಬದುಕು ಕಟ್ಟುಕೊಡುವ ಪ್ರಯತ್ನ ಇಂದಿನವರೆಗೂ ಯಾರಿಂದಲೂ ನಡೆದಿಲ್ಲ.

75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ಸ್ ವಿನಾಯ್ತಿ ಫಾರಂ ಬಿಡುಗಡೆ!

ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು: 2018ರ ಅಸೆಂಬ್ಲಿ ಚುನಾವಣೆಯಲ್ಲಿ (Assembly election) ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದವರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತ್ತು. ಈ ವಿಚಾರದಲ್ಲಿ ತುರ್ತು ಪರಿಸ್ಥಿತಿಯ ಹೋರಾಟಗಾರರ ಪರವಾಗಿ ಲೋಕತಂತ್ರ ಸೇನಾನಿ ಸಂಘಟನೆ ಅಂದಿನ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭೇಟಿಯಾಗಿ ಮನವಿ ಸಲ್ಲಿಸಿ ನೆನಪಿಸಿತ್ತು. ಇದರ ಫಲವಾಗಿ 2021 ಜನವರಿಯಲ್ಲಿ ಯಡಿಯೂರಪ್ಪ ಅವರು ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ನೀಡುವಂತೆ ಆದೇಶ ಮಾಡಿ ಘೋಷಣೆಯನ್ನೂ ಮಾಡಿದ್ದರು.

9 ತಿಂಗಳಾದರೂ ಜಾರಿ ಇಲ್ಲ: ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದು ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದವರು ಪಿಂಚಣಿಗಾಗಿ ಅಲೆದಾಡಿ ಸುಸ್ತಾಗಿದ್ದಾರೆ. ಕೊನೆಗಾಲದಲ್ಲಾದರೂ ಪಿಂಚಣಿ ಸಿಗುವ ಆಸೆಯಲ್ಲಿ ಇದ್ದಾರೆ.

ಪ್ರಸಕ್ತ ರಾಜ್ಯದಲ್ಲಿ ಸುಮಾರು ಮೂರು ಸಾವಿರ ಮಂದಿ ತುರ್ತು ಪರಿಸ್ಥಿತಿ ಹೋರಾಟಗಾರರು ಇದ್ದಾರೆ ಎಂದು ಲೋಕತಂತ್ರ ಸೇನಾನಿ ಸಂಘಟನೆ ಹೇಳುತ್ತಿದೆ. ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಓಡಾಟ ನಡೆಸಿ ತುರ್ತು ಪರಿಸ್ಥಿತಿ ಹೋರಾಟಗಾರರ ಮಾಹಿತಿ ಸಂಗ್ರಹಿಸಿದೆ. ಈ ಅಂಕಿ ಅಂಶವನ್ನು ಆಯಾ ಜಿಲ್ಲಾಡಳಿತಗಳಿಗೆ ನೀಡಿದೆ. ಆದರೆ ಇವರಿಗೆ ಪಿಂಚಣಿ ಸೌಲಭ್ಯ ಮಾತ್ರ ಇನ್ನೂ ಜಾರಿಗೊಳಿಸಿಲ್ಲ.

ತಿಂಗಳಿಗೆ 42 ರೂ. ಪಾವತಿಸಿದ್ರೆ ಸಾಕು, ನೆಮ್ಮದಿಯ ನಿವೃತ್ತಿ ಬದುಕು ನಿಮ್ಮದು!

25 ಸಾವಿರ ರು.ವರೆಗೆ ಪಿಂಚಣಿ: ಈಗಾಗಲೇ ಪಿಂಚಣಿ ಜಾರಿಗೊಂಡಿರುವ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಮಾಸಿಕ ಕನಿಷ್ಠ 10 ಸಾವಿರ ರು.ನಿಂದ 25 ಸಾವಿರ ರು. ವರೆಗೆ ಮೊತ್ತ ಸಿಗುತ್ತಿದೆ. ಅಲ್ಲದೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ತುರ್ತು ಪರಿಸ್ಥಿತಿಯ ಹೋರಾಟಗಾರರು ಮೃತರಾದರೆ, ಅವರ ಪತ್ನಿಯರಿಗೆ ಪಿಂಚಣಿ ನೀಡಿಕೆ, ಹೋರಾಟಗಾರರಿಗೆ ಸರ್ಕಾರ ಗೌರವ ಸನ್ಮಾನ, ಲೋಕತಂತ್ರ ಸೇನಾನಿ ಮಾನ್ಯತೆಗಳನ್ನು ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ತಲಾ 10 ಸಾವಿರ ರು. ಪಿಂಚಣಿ ನೀಡುವಂತೆ ಯಡಿಯೂರಪ್ಪ ಆದೇಶಿಸಿದ್ದು ಬಿಟ್ಟರೆ ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ ಲೋಕತಂತ್ರ ಸೇನಾನಿ ಸಂಘದ ಉಪಾಧ್ಯಕ್ಷ ನಾರಾಯಣ ಗಟ್ಟಿ.

ಮೊದಲು ಜಾರಿಗೊಳಿಸಿದ್ದು ಮುಲಾಯಂ ಸಿಂಗ್‌!

ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಸೌಲಭ್ಯವನ್ನು ದೇಶದಲ್ಲಿ ಮೊದಲು ಜಾರಿಗೊಳಿಸಿದ್ದು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್‌ ಯಾದವ್‌. ಈಗ ಎನ್‌ಡಿಎ ಮೈತ್ರಿ ಕೂಟದ ಬಿಹಾರದಲ್ಲೂ ಪಿಂಚಣಿ ಜಾರಿಯಾಗಿದೆ. ಅಲ್ಲದೆ ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್‌, ಹರಿಯಾಣ ಸೇರಿದಂತೆ ಬಿಜೆಪಿ ಆಡಳಿತದ 12 ರಾಜ್ಯಗಳಲ್ಲಿ ಈ ಪಿಂಚಣಿ ಸೌಲಭ್ಯ ಅನುಷ್ಠಾನಕ್ಕೆ ಬಂದಿದೆ.

ತುರ್ತು ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಅವರಿಗೆ ಮಾಸಿಕ ಪಿಂಚಣಿ ಸೌಲಭ್ಯ ಆದಷ್ಟುಬೇಗ ಜಾರಿಗೊಳಿಸಬೇಕು.

-ಮಂಜುನಾಥ ಸ್ವಾಮಿ, ಅಧ್ಯಕ್ಷ, ಲೋಕತಂತ್ರ ಸೇನಾನಿ ಸಂಘ, ಕರ್ನಾಟಕ

Follow Us:
Download App:
  • android
  • ios