Tumakur : ಅರ್ಹ ವ್ಯಕ್ತಿ ಮತದಾನದಿಂದ ವಂಚಿತನಾಗಬಾರದು
ಮತದಾರರ ಪಟ್ಟಿಯು ಆರೋಗ್ಯಕರವಾಗಿರಬೇಕು, ಅಂದರೆ ದೋಷಮುಕ್ತವಾಗಿರಬೇಕು. ಮತದಾರರ ಪಟ್ಟಿಯಲ್ಲಿ ಇರಲೇಬೇಕಾದ ಅರ್ಹ ಮತದಾರನ ಹೆಸರು ಇರಲೇಬೇಕು. ಅರ್ಹ ಮತದಾರ ಎಂದಿಗೂ ತನ್ನ ಹಕ್ಕನ್ನು ಕಳೆದುಕೊಳ್ಳಬಾರದು.
ತುಮಕೂರು ( ನ.18): ಮತದಾರರ ಪಟ್ಟಿಯು ಆರೋಗ್ಯಕರವಾಗಿರಬೇಕು, ಅಂದರೆ ದೋಷಮುಕ್ತವಾಗಿರಬೇಕು. ಮತದಾರರ ಪಟ್ಟಿಯಲ್ಲಿ ಇರಲೇಬೇಕಾದ ಅರ್ಹ ಮತದಾರನ ಹೆಸರು ಇರಲೇಬೇಕು. ಅರ್ಹ ಮತದಾರ ಎಂದಿಗೂ ತನ್ನ ಹಕ್ಕನ್ನು ಕಳೆದುಕೊಳ್ಳಬಾರದು. ಅಂತೆಯೇ ಮತದಾರರಲ್ಲದವರ ಹೆಸರು ಪಟ್ಟಿಯಲ್ಲಿ ಇರಬಾರದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸುತ್ತಿದೆ. ಅಂತೆಯೇ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಈ ದಿಸೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರಡು ಮತದಾರರ ಪಟ್ಟಿಪರಿಷ್ಕರಣೆ-2023 ಕುರಿತು ವಿವಿಧ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಡಿಲೀಟ್ ಪಟ್ಟಿಯ ಲೈವ್ ಲಿಸ್ಟ್‌ನ್ನು ರಾಜಕೀಯ (Politics) ಪಕ್ಷಗಳಿಗೆ ಪ್ರಚುರಪಡಿಸಲಾಗುವುದು. ರಾಜಕೀಯ ಪಕ್ಷಗಳು ಬಿಎಲ್‌ಎ( Booth Level Agent ) ಬೂತ್ ಲೆವೆಲ್ ಏಜೆಂಟ್)ಗಳನ್ನು ನೇಮಕ ಮಾಡಬೇಕು. ಇದು ಪ್ರಮುಖ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಈ ಹಿಂದೆ 1ನೇ ಜನವರಿಯನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ ಈಗ ವರ್ಷದಲ್ಲಿ ನಾಲ್ಕು ಬಾರಿ 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ, 1ನೇ ಅಕ್ಟೋಬರ್‌ಗಳನ್ನು ಅರ್ಹತಾ ದಿನಗಳನ್ನಾಗಿ ಪರಿಗಣಿಸಲಾಗಿದೆ. ಹದಿನೇಳು ವರ್ಷ ತುಂಬಿದವರೂ ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಅವರು ಅರ್ಹರಾದ ದಿನಾಂಕದಂದು ಅಂದರೆ 18 ವರ್ಷ ತುಂಬಿದ ನಂತರ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ತಿಳಿಸಿದರು.
1950 ವೋಟರ್ ಹೆಲ್ಪ್‌ಲೈನ್ ಮೂಲಕ ಯಾವುದೇ ಮತದಾರರ ಪಟ್ಟಿಗೆ ಸಂಬಂಧಿಸಿದ ದೂರು ದಾಖಲಿಸಬಹುದು. ಗೊಂದಲವಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬಹುದು. ಅಂತೆಯೇ ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಬಹುದು. ಎಲ್ಲವೂ ಸಹ ಈ ಆ್ಯಪ್‌ನಿಂದ ಲಭ್ಯವಾಗಲಿದೆ ಎಂದು ಚೆನ್ನಬಸಪ್ಪ ತಿಳಿಸಿದರು.
ಮರಣ ಪ್ರಕರಣ, ಖಾಯಂ ವಲಸೆ ಪ್ರಕರಣ, ಮದುವೆಯಾಗಿ ಹೋದವರ ಪ್ರಕರಣಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ತಿಳಿಸಿದರು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶೇ.10ರಷ್ಟುಇ.ಪಿ.ರೇಷಿಯೋ ಕಡಿಮೆ ಮಾಡಬೇಕು
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಇ.ಪಿ.ರೇಷಿಯೋ(ಎಲೆಕ್ಟರ್ ಪಾಪ್ಯೂಲೇಷನ್ ರೇಷಿಯೋ) ಶೇ.77 ಇದೆ. ಶೇ.10ರಷ್ಟುಜಾಸ್ತಿ ಇದೆ. ಜಿಲ್ಲೆಯ ಮತದಾರರು 21ಲಕ್ಷ ಇದ್ದಾರೆ. ಆರೋಗ್ಯಕರ ಇಪಿ ರೇಷಿಯೋ ಶೇ.67 ಇರಬೇಕು. ಶೇ.10ರಷ್ಟುಇ.ಪಿ.ರೇಷಿಯೋ ಕಡಿಮೆ ಮಾಡಬೇಕಿದೆ. ಇ.ಪಿ.ರೇಷಿಯೋ ಕಡಿಮೆ ಮಾಡಲು 80 ವರ್ಷಕ್ಕಿಂತ ಮೇಲ್ಪಟ್ಟಮತದಾರರ ಬಗ್ಗೆ ಮನೆ-ಮನೆ ಭೇಟಿ ವೇಳೆ ಪರಿಶೀಲಿಸಿ, ಮರಣ ಹೊಂದಿದ, ಖಾಯಂ ಸ್ಥಳಾಂತರಗೊಂಡ ಮತದಾರರನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡಲು ಕ್ರಮವಹಿಸಲಾಗುತ್ತಿದೆ. ಮರಣ ಪ್ರಕರಣಗಳ ಕುರಿತು ರಾಜಕೀಯ ಪಕ್ಷಗಳಿಗೆ ಮಾಹಿತಿ ಇದ್ದಲ್ಲಿ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಲ್ಲಿ ಸೂಕ್ತ ದಾಖಲಾತಿ ಪಡೆದು ಡಿಲೀಟ್ ಮಾಡಲಾಗುವುದು. ಇದುವರೆಗೂ 35 ಸಾವಿರ ಮರಣ ಹೊಂದಿದವರ ಹೆಸರನ್ನು ಕುಟುಂಬದವರ ಸಹಿ ಪಡೆದು, ದಾಖಲಾತಿ ಪಡೆದು ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಅರ್ಹ ವ್ಯಕ್ತಿ ಮತದಾನದಿಂದ ವಂಚಿತನಾಗಬಾರದು
ಮತದಾರರ ಪಟ್ಟಿಯು ದೋಷಮುಕ್ತವಾಗಿರಬೇಕು
ಕರಡು ಮತದಾರರ ಪಟ್ಟಿಪರಿಷ್ಕರಣೆ ಸಭೆಯಲ್ಲಿ ಡೀಸಿ ಪಾಟೀಲ
ಮತದಾರರ ಪಟ್ಟಿಯು ಆರೋಗ್ಯಕರವಾಗಿರಬೇಕು, ಅಂದರೆ ದೋಷಮುಕ್ತವಾಗಿರಬೇಕು.
ಮರಣ ಪ್ರಕರಣ, ಖಾಯಂ ವಲಸೆ ಪ್ರಕರಣ, ಮದುವೆಯಾಗಿ ಹೋದವರ ಪ್ರಕರಣಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ತಿಳಿಸಿದರು.