ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಜೋರು: ಶಾಸಕ ಹೆಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ

ಜಿಲ್ಲೆಯ ಮಲೆನಾಡು ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಲ್ಲಿ ವಾಸಿಸುತ್ತಿರೋ ಜನರು ಜೀವನ ನಡೆಸೋದೆ ಕಷ್ಟ ಎಂಬ ಪರಿಸ್ಥಿತಿ ಎದುರಾಗಿದೆ. 

elephants attack in hassan district continuely protest under the leadership of mla hk kumaraswamy gvd

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ (ಮೇ.16): ಜಿಲ್ಲೆಯ ಮಲೆನಾಡು ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಉಪಟಳ (Wild Elephants Attack) ದಿನೇ ದಿನೇ ಹೆಚ್ಚಾಗುತ್ತಿದ್ದು, ಅಲ್ಲಿ ವಾಸಿಸುತ್ತಿರೋ ಜನರು ಜೀವನ ನಡೆಸೋದೆ ಕಷ್ಟ ಎಂಬ ಪರಿಸ್ಥಿತಿ ಎದುರಾಗಿದೆ. ಈ ಸಂಬಂಧ‌ ಇಂದು ಆಲೂರು ಸಕಲೇಶಪುರ ಶಾಸಕ ಹೆಚ್.ಕೆ ಕುಮಾರಸ್ವಾಮಿ (HK Kumaraswamy) ನೇತೃತ್ವದಲ್ಲಿ ಕರ್ನಾಟಕ ಗ್ರೋವರ್ಸ್​ ಅಸೋಸಿಯೇಷನ್​ ,ಕನ್ನಡಪರ ಸಂಘಟನೆಗಳು  ಪ್ರತಿಭಟನೆ (Protest) ನಡೆಸಿದರು. ರಾಷ್ಟ್ರೀಯ ಹೆದ್ದಾರಿ ತಡೆದು ತಮ್ಮ ಆಕ್ರೋಶ ಹೊರಹಾಕಿದರು. ಶೀಘ್ರವೇ ಸರ್ಕಾರ ಎಚ್ಚೆತ್ತು ಶಾಶ್ವತ  ಪರಿಹಾರ ನೀಡಬೇಕು ಇಲ್ಲವಾದರೆ ವಿಧಾನಸೌಧ ಚಲೋ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಾಡಾನೆ ಸಮಸ್ಯೆಗೆ ನಲುಗಿ ಹೋಗಿರೋ ಹಾಸನ ಜಿಲ್ಲೆಯ ಸಕಲೆಶಪುರ, ಆಲೂರಿನ ಮಲೆನಾಡಿಗರು ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ ಜನ. ದಿನ ಬೆಳಗಾದ್ರೆ ಕಾಡಾನೆಗಳ ಜೊತೆ ಸಂಘರ್ಷ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಶಾಸಕರ ನೇತೃತ್ವದಲ್ಲಿ ಜನರು ರಸ್ತೆ ತಡೆ ನಡೆಸಿದ್ದಾರೆ. ಹೌದು! ಹಾಸನ ಜಿಲ್ಲೆಯ ಮಲೆನಾಡು ಸಕಲೇಶಪುರ ಭಾಗದಲ್ಲಿ ಕಾಡಾನೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಅಲ್ಲಿನ ಜನರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಕಾರ್ಮಿಕರ ಪರಿಸ್ಥಿತಿಯಂತೂ ಹೇಳ ತೀರದಾಗಿದೆ. ಕೂಲಿಯನ್ನೆ ನಂಬಿ ಜೀವನ ಮಾಡುತ್ತಿದ್ದ 60ಕ್ಕೂ ಹೆಚ್ಚು ಜನ 2000 ದಿಂದ ಇಲ್ಲಿಯವರೆಗೆ ಕಾಡಾನೆ ದಾಳಿಯಿಂದ ಜೀವ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ್ರೂ ಕೂಡ ಸರ್ಕಾರವಾಗಲೀ ಅರಣ್ಯ ಸಚಿವರಾಗಲೀ ಇತ್ತ ತಿರಿಗಿಯೂ ನೋಡುತ್ತಿಲ್ಲ. 

ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೇಕಾಬಿಟ್ಟಿ ದಾಂಧಲೆ: ಆನೆಗಳ ಭಯಕ್ಕೆ ತೋಟದ ಕಡೆ ತೆರಳದ ಕಾರ್ಮಿಕರು

ಎಷ್ಟೇ ಜನ ಸತ್ತರೂ ಅರಣ್ಯ ಸಚಿವ ಉಮೇಶ್ ಕತ್ತಿ ಇತ್ತ ಒಮ್ಮೆಯೂ ಬಂದು ನೋಡಿಲ್ಲ. ಇಲ್ಲಿನ ಜನರ ಕೂಗಿಗೆ ಸರ್ಕಾರ ನಿರ್ಲಕ್ಷ ಧೋರಣೆ ತೋರುತ್ತಿರೋದಂತೂ ಸತ್ಯ. ಈ ಬಗ್ಗೆ ಆಕ್ರೋಶಗೊಂಡಿರೋ ಈ ಭಾಗದ ಜನರು ಅನೇಕ ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ಇಂದೂ ಕೂಡ ಆಲೂರು ಸಕಲೇಶಪುರ ‌ಶಾಸಕ ಹೆಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ಗ್ರೋವರ್ಸ್​ ಅಸೋಸಿಯೇಷನ್​ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದವು. ‌ಇದೇ ವೇಳೆ ಕೆಲ ಹೊತ್ತು  ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ರು. ಸರ್ಕಾರದ ವಿರುದ್ದ ತಮ್ಮ ಆಕ್ರೋಶ ಹೊರಹಾಕಿದರು. ಸರ್ಕಾರ ಕಾಡಾನೆಗಳ ಸಮಸ್ಯೆ ಬಗ್ಗೆ ನಿರ್ಲಕ್ಷ್ಯಧೋರಣೆ ತಳೆದಿದೆ. ವಿಧಾನ ಸೌಧ ಚಲೋ ನಡೆಸುತ್ತೇವೆ. ಹೈಕೋರ್ಟ್ ನಲ್ಲಿ ಪಿಐಎಲ್​ ಹಾಲು ಚಿಂತನೆ ನಡೆಸಿದ್ದೇವೆಂದು ಶಾಸಕ ಹೆಚ್​ ಕೆ ಕುಮಾರಸ್ವಾಮಿ ತಿಳಿಸಿದರು.  

ಮಧ್ಯಾಹ್ನದ ನಂತರ ಪ್ರತಿಭಟನೆ ತೀವ್ರಗೊಳಿಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಕೂಡಲೇ ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಬರಬೇಕು ಎಂದು ಆಗ್ರಹಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಬಂದ ಹಾಸನ ಡಿಎಫ್‌ಓ ಡಾ. ಬಸವಾರುಜುಗೆ ತಡವಾಗಿ ಬಂದಿದ್ದಕ್ಕೆ ನೀವು ಮೊದಲು ಕ್ಷಮೆಯಾಚಿಸಬೇಕು ಎಂದು ಆಗ್ರಹಸಿದರು. ಕೆಲ ಹೊತ್ತು ಬಿಗುವಿನ ವಾತಾವರಣವೂ ನಿರ್ಮಾಣವಾಗಿತ್ತು. ಕೂಡಲೆ ಸರ್ಕಾರಕ್ಕೆ ಇಲ್ಲಿನ ಸಮಸ್ಯೆ ಬಗ್ಗೆ ಮನದಟ್ಟು ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಲ್ಲದೇ ಈಗಲು ಸರ್ಕಾರ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂದೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು. ಸರ್ಕಾರ ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾಡಾನೆಗಳ ಸ್ಥಳಾಂತರ ಮಾಡುವಂತೆ ಕರ್ನಾಟಕ ಗ್ರೋವರ್ಸ್ ಅಸೋಸಿಯೇಷನ್​ ಅಧ್ಯಕ್ಷ ಹೆಚ್ ಟಿ ಮೋಹನ್​ ಕುಮಾರ್​ ಒತ್ತಾಯಿಸಿದರು. 

Hassan: ಬಾಳ್ಳುಪೇಟೆ ಬಳಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕರ ಕೂಗಾಟದಿಂದ ಅದೃಷ್ಟವಶಾತ್‌ ಪಾರಾದ ಮಹಿಳೆ

ಆಲೂರು ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್​ ಹಾಕಲಾಗುತ್ತಿದೆ. 9 ಕಿ.ಮೀ ಪೂರ್ಣಗೊಂಡಿದೆ.45 ಕಿ.ಮೀ ರೈಲ್ವೆ ಬ್ಯಾರಿಕೇಡ್​ ಅಗತ್ಯವಿದೆ ಎಂದು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದು ಡಿಎಫ್​ ಒ ಬಸವರಾಜ್​ ತಿಳಿಸಿದರು. ಒಟ್ಟಾರೆ ಕಾಡಾನೆ ಸಮಸ್ಯೆಯಿಂದಾಗಿ 2 ದಶಕಗಳಿಂದಲೂ ಆಲೂರು, ಸಕಲೇಶಪುರ ಭಾಗದ ಮಲೆನಾಡ ಜನರು ತೊಂದರೆ ಅನುಭವಿಸುತ್ತಿದ್ದು, ಪ್ರತಿ ನಿತ್ಯ ಅನುಭಸುತ್ತಿರೋ ಸಂಕಟಗಳಿಂದ ಇದೀಗ ತಾಳ್ಮೆಯ ಕಟ್ಟೆ ಒಡೆದು ಪ್ರತಿಭಟನೆಗಳು ತೀರ್ವ ಸ್ವರೂಪ ಪಡೆಯುತ್ತಿವೆ. ಮುಂದೆ ಇನ್ನೂ  ಹೋರಾಟ ದೊಡ್ಡಮಟ್ಟದಲ್ಲಿ ನಡೆಯೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾಡಾನೆ ಸಮಸ್ಯೆ ಅರಿತು ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

Latest Videos
Follow Us:
Download App:
  • android
  • ios