ಚನ್ನಪಟ್ಟಣ: ಪುಂಡಾನೆ ಸೆರೆ ಕಾರ್ಯಾಚರಣೆ 2.0ಗೆ ತಪ್ಪದ ವಿಘ್ನ..!
ಕಾರ್ಯಾಚರಣೆ ನೇತೃತ್ವ ವಹಿಸಬೇಕಿದ್ದ ಅಭಿಮನ್ಯು ಅನಾರೋಗ್ಯದ ಕಾರಣ ಕಾರ್ಯಾಚರಣೆ ವಿಳಂಬ
ವಿಜಯ್ ಕೇಸರಿ
ಚನ್ನಪಟ್ಟಣ(ನ.10): ತಾಲೂಕಿನ ಗಡಿ ಗ್ರಾಮದ ಜನರ ಬಹುದಿನದ ಬೇಡಿಕೆಯ ಪುಂಡಾನೆ ಸೆರೆ ಕಾರ್ಯಾಚರಣೆಗೆ ಒಂದಲ್ಲ ಒಂದು ವಿಘ್ನ ಎದುರಾಗುತ್ತಿದೆ. ಆಪರೇಷನ್ ಟಸ್ಕರ್ 2.0ಗೆ ಆದೇಶ ಹೊರ ಬಿದ್ದು ಎರಡೂವರೆ ತಿಂಗಳು ಕಳೆದರೂ ಕಾರ್ಯಾಚರಣೆಗೆ ಕಾಲ ಕೂಡಿ ಬಾರದ ಕಾರಣ ರೈತರು ಕಂಗಾಲಾಗಿದ್ದಾರೆ.
ಗಡಿಭಾಗದ ಗ್ರಾಮಗಳಿಗೆ ಕಂಟಕ ಪ್ರಾಯವಾಗಿರುವ ಎರಡು ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಆದೇಶ ಹೊರಡಿಸಿ ಎರಡೂವರೆ ತಿಂಗಳು ಕಳೆದಿದೆ. ಏನಾದರೂ ಒಂದು ಕಾರಣಕ್ಕೆ ಕಾರ್ಯಾಚರಣೆ ಮುಂದೂಡುತ್ತಲೇ ಇರುವುದು ಮಾತ್ರ ವಿಪರ್ಯಾಸ. ಆ.30ರಂದೆ ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಅನುಮತಿ ದೊರೆಯಿತಾದರೂ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಆನೆಗಳು ಮೈಸೂರು ದಸರಾ ಹಿನ್ನೆಲೆಯಲ್ಲಿ ಮತ್ತೀಗೂಡು ಆನೆ ಶಿಬಿರಕ್ಕೆ ಮರಳಿದ್ದರಿಂದ ಕಾರ್ಯಾಚರಣೆ ಆರಂಭಿಸಲಾಗಿರಲಿಲ್ಲ. ದಸರಾ ಮುಗಿದ ನಂತರ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಲಾಗಿತ್ತಾದರೂ ದಸರಾದಲ್ಲಿ ಭಾಗಿಯಾಗಿ ಅನೆಗಳು ಬಸವಳಿದಿದ್ದರಿಂದ ಕಾರ್ಯಾಚರಣೆ ಆರಂಭವಾಗಿರಲಿಲ್ಲ. ಆ ನಂತರ ಮಳೆಯ ಕಾರಣ ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾಗಬೇಕಿದ್ದ ಪರಿಣಿತರ ತಂಡ ಬೇರೆ ಕಡೆ ಹೋದ ಕಾರಣಕ್ಕೆ ಮುಂದೂಡಿಕೆಯಾಗಿತ್ತು. ಇದೀಗ ನವಂಬರ್ ಮೊದಲ ವಾರದಲ್ಲಿ ಕಾರ್ಯಾಚರಣೆ ಆರಂಭವಾಗಬೇಕಿತ್ತಾದರೂ ಪುಂಡಾನೆ ಸೆರೆ ಕಾರ್ಯಾಚರಣೆ ನೇತೃತ್ವ ವಹಿಸಬೇಕಿದ್ದ ಅಭಿಮನ್ಯುವಿನ ಅನಾರೋಗ್ಯ ಕಾರಣದಿಂದಾಗಿ ಮತ್ತೆ ವಿಳಂಭವಾಗಿದ್ದು, ನ.20ರ ಹೊತ್ತಿಗೆ ಆರಂಭವಾಗುವ ನಿರೀಕ್ಷೆ ಇದೆ.
ಬಿಡದಿಯ ಮಿಟ್ಸುಬಿಷಿ ಘಟಕ ಸ್ಥಗಿತ: ಕಾರ್ಮಿಕರು ಬೀದಿಗೆ
ಮೊದಲಿಗೆ ಎರಡಾನೆ ಸೆರೆ:
ಕಾಡಂಚಿನ ಗ್ರಾಮಗಳಲ್ಲಿ ಪುಂಡಾನೆಗಳ ಹಾವಳಿ ತಪ್ಪಿಸಲು ಎರಡು ಆನೆಗಳ ಸೆರೆಗೆ ಅನುಮತಿ ನೀಡಿತ್ತು. ಕಳೆದ ಆಗಸ್ಟ್ ನಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ವಾರದಲ್ಲಿ ಎರಡು ಪುಂಡಾನೆಗಳನ್ನು ಸೆರೆಹಿಡಿಯಲಾಗಿತ್ತು.
ಎರಡನೇ ಅನೆ ಸರಿ ಹಿಡಿದ ಸಮಯದಲ್ಲಿ ಉಪಟಳಕಾರಿ ಪುಂಡಾನೆಯನ್ನು ಸೆರೆ ಹಿಡಿಯದೇ ಯಾವುದೋ ಸಣ್ಣ ಆನೆಯನ್ನು ಹಿಡಿದು ರೈತರ ಕಣ್ಣೊರೆಸುವ ತಂತ್ರ ಮಾಡಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಪುಂಡನೆ ಸೆರೆ ಕಾರ್ಯಾಚರಣೆಯನ್ನು ಮುಂದುವರಿಸಿ, ಮತ್ತೊಂದು ಆನೆ ಸೆರೆ ಹಿಡಿಯೋ ಭರವಸೆಯೊಂದಿಗೆ ಗ್ರಾಮಸ್ಥರನ್ನು ಅರಣ್ಯ ಅಧಿಕಾರಿಗಳು ಸಮಾಧಾನಪಡಿಸಿದರು.
ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟಹಿನ್ನೆಲೆಯಲ್ಲಿ ಮತ್ತೆರಡು ಪುಂಡಾನೆ ಸೆರೆಗೆ ಆದೇಶ ಹೊರಡಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಆ.30ರಂದು ಎರಡು ಆನೆಗಳ ಸೆರೆಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದರು. ಆದರೆ, ಹಲವು ಕಾರಣಗಳಿಂದ ಕಾರ್ಯಾಚರಣೆ ಮುಂದೂಡಿಕೆಯಾಗುತ್ತಲೇ ಇದ್ದರೆ ಇನ್ನೊಂದೆಡೆ ಪುಂಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಲೇ ಇರುವುದು ರೈತರನ್ನು ಕಂಗಾಲಾಗಿಸಿದೆ.
ಕನಕಪುರ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸುವೆ : HD Kumaraswamy
ಆಪರೇಷನ್ ಟಸ್ಕರ್‌ಗೆ ಅಭಿಮನ್ಯು ಸಾರಥಿ
ಈ ಬಾರಿಯ ಕಾರ್ಯಾಚರಣೆಗೆ ಅನುಭವವುಳ್ಳ ಅಭಿಮನ್ಯು, ಗೋಪಾಲಸ್ವಾಮಿ, ಅರ್ಜುನ ಮತ್ತು ಪ್ರಶಾಂತ ಆನೆಗಳನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಪುಂಡಾನೆ ಸೆರೆಯಲ್ಲಿ ಸ್ಪಷಲಿಸ್ಟ್ ಎಂದೇ ಖ್ಯಾತಿ ಗಳಿಸಿದೆ. ಸ್ವಾಭಾವಿಕವಾಗಿ ಶಾಂತ ಸ್ವಭಾವದ ಅಭಿಮನ್ಯು ಕಾರ್ಯಾಚರಣೆಗಿಳಿದರೆ ಎಂಥ ದೈತ್ಯ ಆನೆ ಎದುರಾದರೂ ಮಣಿಸಿ ಸೆರೆ ಹಿಡಿಯುವಲ್ಲಿ ನಿಸ್ಸೀಮ. ಇದುವರೆಗೂ ಸುಮಾರು 150ಕ್ಕೂ ಹೆಚ್ಚು ಆನೆ ಸೆರೆ, ಹುಲಿ, ಚಿರತೆ ಸೆರೆ ಕಾರ್ಯಾಚರಣೆಗಳಲ್ಲಿ ಅಭಿಮನ್ಯು ಭಾಗಿಯಾಗಿ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬಾರಿ ಅಭಿಮನ್ಯವಿನ ಆಗಮನದಿಂದ ಕಾರ್ಯಾಚರಣೆ ತಂಡಕ್ಕೆ ಭೀಮ ಬಲ ಬಂದಂತಾಗಿದೆ.
ಅಭಿಮನ್ಯಗೆ ಅನಾರೋಗ್ಯ
ಪುಂಡಾನೆ ಸೆರೆ ಕಾರ್ಯಾಚರಣೆ 2.0ಗೆ ಪಳಗಿದ ಹಿರಿಯ ಆನೆಗಳನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿ, ನವಂಬರ್ ಮೊದಲ ವಾರದಲ್ಲಿ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿತ್ತು. ಆದರೆ, ಕಾರ್ಯಚರಣೆಯ ನೇತೃತ್ವ ವಹಿಸಬೇಕಿದ್ದ ಅಭಿಮನ್ಯುವಿಗೆ ಆರೋಗ್ಯ ಕೈಕೊಟ್ಟಿದೆ. ಅಭಿಮನ್ಯು ಅತಿಸಾರ ಮತ್ತು ವಾಂತಿಯಿಂದ ಬಳಲುತ್ತಿದೆ. ಅನಾರೋಗ್ಯದಿಂದ ನಿತ್ರಾಣಗೊಂಡಿರುವ ಅಭಿಮನ್ಯು ಚೇತರಿಸಿಕೊಳ್ಳಲು ಕೆಲದಿನ ಬೇಕಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಾರ್ಯಚರಣೆ ಮುಂದೂಡುವಂತಾಗಿದೆ. ಅಭಿಮನ್ಯು ಬೇಗ ಚೇತರಿಸಿಕೊಂಡು ಎಲ್ಲ ಯೋಚನೆಯಂತೆ ನಡೆದರೆ ನ.20ರ ಹೊತ್ತಿಗೆ ಕಾರ್ಯಚರಣ ಆರಂಭಗೊಳ್ಳಲಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.