ನಾಗರಹೊಳೆ ಭೀಮನಕಟ್ಟೆಯಲ್ಲಿ ನೂತನ ಆನೆ ಶಿಬಿರ
ಅರಣ್ಯ ವೀಕ್ಷಕರು ಹಾಗೂ ಮಾವುತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿದಾಗ ಮಾತ್ರ ಉತ್ತಮ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಪಿರಿಯಾಪಟ್ಟಣ (ಅಮ08): ಅರಣ್ಯ ವೀಕ್ಷಕರು ಹಾಗೂ ಮಾವುತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿದಾಗ ಮಾತ್ರ ಉತ್ತಮ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ಹುಣಸೂರು ವನ್ಯಜೀವಿ ವಿಭಾಗದ ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆಯಲ್ಲಿ ತೆರೆಯಲಾಗಿರುವ ನೂತನ ಆನೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಕಾಡಂಚಿನ ಗ್ರಾಮದ ನಿವಾಸಿಗಳಿಗೆ ಕಾಡು ಪ್ರಾಣಿ (Wild Animals) ಹಾವಳಿಯಿಂದ ಆಗುತ್ತಿರುವ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ರೇಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ, ಅಧಿಕಾರಿಗಳು ಕಾಮಗಾರಿ ಅನುಷ್ಠಾನಕ್ಕಾಗಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಮಡಿಕೇರಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ಮೂರ್ತಿ ಮಾತನಾಡಿ, ಸರ್ಕಾರದ (Karnataka Govt) ವತಿಯಿಂದ ಅರಣ್ಯ ಇಲಾಖೆ ಮೂಲಕ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಕಾಮಗಾರಿ ಅನುಷ್ಠಾನದ ಮಾಹಿತಿಯನ್ನು ಸ್ಥಳೀಯ ಶಾಸಕರಿಗೆ ಅಧಿಕಾರಿಗಳು ಮಾಹಿತಿ ನೀಡುವ ಮೂಲಕ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಬಳಿ ಸಫಾರಿ ಕೇಂದ್ರವನ್ನು ನವೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹುಣಸೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ, ಹುಣಸೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್. ದಯಾನಂದ್, ನಾಗರಹೊಳೆ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ…, ಹುಣಸೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಎಂ.ಎ. ರತನ್‌ಕುಮಾರ್, ಆನೆಚೌಕೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಗಣರಾಜ… ಪಟೇಗಾರ್, ಉಪವಲಯ ಅರಣ್ಯಾಧಿಕಾರಿ ಸಿದ್ದರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ಗಗನ್, ಕಾಳೇಗೌಡ, ಹುಣಸೂರು ವನ್ಯಜೀವಿ ವಿಭಾಗದ ಉಪ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಆನೆ ಮರಿ ರಕ್ಷಣೆಗೆ ಸಿಎಂ ಸೂಚನೆ
ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿರುವ ಆನೆ ಮರಿ ಬಗ್ಗೆ ಸಂಸದ ರಾಹುಲ್ ಗಾಂಧಿ ತೋರಿದ ಕಾಳಜಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದ್ದಾರೆ. ಈ ಸಂಬಂಧ ಗುರುವಾರ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಬೊಮ್ಮಾಯಿ, ಅ.5ರಂದು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಛಾಯಾಚಿತ್ರಗಳ ಸಹಿತ ಗಾಯಗೊಂಡಿರುವ ಆನೆ ಮರಿ ಬಗ್ಗೆ ತಾವು ನನಗೆ ಬರೆದಿರುವ ಪತ್ರವನ್ನು ಸ್ವೀಕರಿಸಿದ್ದೇನೆ. ಗಾಯಗೊಂಡಿರುವ ಆನೆ ಮರಿ ಸ್ಥಿತಿಯ ಬಗೆಗಿನ ನಿಮ್ಮ ಕಾಳಜಿ ಪ್ರಶಂಸನೀಯ ಎಂದಿದ್ದಾರೆ.
ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ, ಕಾಡು ಪ್ರಾಣಿಗಳು ಈ ಆನೆ ಮರಿ ಮೇಲೆ ದಾಳಿ ಮಾಡಿರುವ ವಿಚಾರ ಗೊತ್ತಾಯಿತು. ಸದ್ಯ ಆ ಆನೆ ಮರಿ ತಾಯಿ ಹಾಲಿನ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಹೀಗಾಗಿ ನಮ್ಮ ಅಧಿಕಾರಿಗಳು ತಾಯಿ ಆನೆ ಮತ್ತು ಗಾಯಾಳು ಆನೆ ಮರಿ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆನೆ ಮರಿಯನ್ನು ತಾಯಿಯಿಂದ ಬೇರ್ಪಡಿಸಿ ಚಿಕಿತ್ಸೆ ನೀಡುವುದು ಸರಿಯಲ್ಲ. ಒಂದು ವೇಳೆ ಆನೆ ಮರಿಯನ್ನು ತಾಯಿಯಿಂದ ಬೇರ್ಪಡಿಸಿದರೆ ಸಮಸ್ಯೆ ಉಲ್ಬಣಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
78 ಲಕ್ಷ ರೈತರ ಜಮೀನಿಗೆ ಆಧಾರ್ ಜೋಡಣೆ: ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿ..!
ಹೀಗಾಗಿ ಗಾಯಾಳು ಆನೆ ಮರಿಗೆ ಅಗತ್ಯವಿರುವ ಔಷಧೋಪಚಾರ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಸಮಯಕ್ಕೆ ಅನುಗುಣವಾಗಿ ಔಷಧೋಪಚಾರ ಮಾಡುವುದರ ಜತೆಗೆ ಆನೆ ಮರಿ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸುವಂತೆ ಸೂಚಿಸಿದ್ದೇನೆ. ಈ ಆನೆ ಮರಿ ಜೀವ ಉಳಿಸಲು ನಮ್ಮ ಸರ್ಕಾರ ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರದ ಮುಖಾಂತರ ರಾಹುಲ್ ಗಾಂಧಿ ಅವರಿಗೆ ಭರವಸೆ ನೀಡಿದ್ದಾರೆ.
ಮರಿ ಆನೆ ರಕ್ಷಿಸಲು ಸಿಎಂಗೆ ರಾಹುಲ್ ಪತ್ರ: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ತಾಯಿ ಆನೆಯೊಂದಿಗೆ ಗಾಯಗೊಂಡ ಸ್ಥಿತಿಯಲ್ಲಿ ಕಣ್ಣಿಗೆ ಬಿದ್ದ ಪುಟ್ಟಮರಿ ಆನೆ ಸ್ಥಿತಿ ಬಗ್ಗೆ ಎಐಸಿಸಿ ನಾಯಕ ರಾಹುಲ್‌ಗಾಂಧಿ ಮರುಕ ವ್ಯಕ್ತಪಡಿಸಿದ್ದು, ಮರಿ ಆನೆಗೆ ತುರ್ತು ವೈದ್ಯಕೀಯ ಆರೈಕೆ ಒದಗಿಸಿ ಬದುಕಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಬುಧವಾರ ಸಂಜೆ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ನಾಗರಹೊಳೆ ಅರಣ್ಯದಲ್ಲಿ (ರಾಷ್ಟ್ರೀಯ ಉದ್ಯಾನ) ಪುಟ್ಟಮರಿ ಆನೆ ತನ್ನ ತಾಯಿ ಆನೆಯೊಂದಿಗೆ ನಮ್ಮ ಕಣ್ಣಿಗೆ ಬಿದ್ದಿತ್ತು.
ಮರಿ ಆನೆಯ ಸೊಂಡಿಲು, ಬಾಲ ತೀವ್ರವಾಗಿ ಗಾಯಗೊಂಡಿದ್ದು, ತನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಪ್ರಕೃತಿಗೆ ಸಹಜವಾಗಿಯೇ ಗುಣಪಡಿಸುವ ಶಕ್ತಿಯಿದ್ದು, ಅದಕ್ಕೆ ಅವಕಾಶ ಕೊಡಬೇಕು ಎಂಬ ನಿಲುವನ್ನು ಒಪ್ಪುತ್ತೇನೆ. ಆದರೆ, ಈ ಪ್ರಕರಣದಲ್ಲಿ ಗಾಯದ ತೀವ್ರ ಆಧಾರದ ಮೇಲೆ ಅವಸಾನದ ಅಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸಬೇಕಿರುವುದು ತುರ್ತು ಅಗತ್ಯ. ಆನೆ ಮರಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಹೀಗಾಗಿ ರಾಜಕೀಯ ಗಡಿಗಳನ್ನು ದಾಟಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಪುಟ್ಟಆನೆಯನ್ನು ರಕ್ಷಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.