ಹಾಸನ(ಜು.21): ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಸತ್ತಿಗಾಲ್‌, ಜಾನೆಕೆರೆ ಸುತ್ತಮುತ್ತ ಅಪಾರ ಪ್ರಮಾಣದ ಬೆಳೆಯನ್ನು ನಾಶ ಮಾಡಿವೆ.

ತಾಲೂಕಿನ ಕುದರಂಗಿ, ಸುಳ್ಳಕ್ಕಿ, ಇಬ್ಬಡಿ, ಸತ್ತಿಗಾಲ, ಜಾನೆಕೆರೆ ಗ್ರಾಮಗಳ ಬಳಿ ಬೀಡುಬಿಟ್ಟಿರುವ ಕಾಡಾನೆ ಹಿಂಡು, ಆಹಾರ ಸಿಗದೆ ರೈತರು ನಾಟಿ ಮಾಡಿದ್ದ ಭತ್ತದ ಸಸಿ ಹಾಗೂ ಭತ್ತದ ಮಡಿಗಳನ್ನು ನಾಶ ಮಾಡಿವೆ. ಲೋಕೇಶ್‌, ರಮೇಶ್‌, ಈರಯ್ಯ, ಮಂಜುನಾಥ್‌, ಹರೀಶ್‌, ವಿಜಯ್‌ ಕುಮಾರ್‌ ಸೇರಿದಂತೆ ಇನ್ನಿತರರ ಜಮೀನುಗಳಲ್ಲಿ ಕಾಡಾನೆಗಳ ಹಿಂಡು ವ್ಯಾಪಕ ಪ್ರಮಾಣದಲ್ಲಿ ಬೆಳೆಗಳನ್ನು ನಷ್ಟಪಡಿಸಿವೆ.

ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ 20ಕ್ಕೂ ಹೆಚ್ಚು ಕಾಡಾನೆ:

ಇಬ್ಬಡಿ ಗ್ರಾಮದ ಕಾಫಿ ತೋಟದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ಕಾಡಾನೆಗಳ ಹಾವಾಳಿಯಿಂದ ರೈತರು ಕಂಗಲಾಗಿದ್ದಾರೆ. ಪ್ರತಿ ನಿತ್ಯ ಕಾಡಂಚಿನ ಗ್ರಾಮಗಳ ಗ್ರಾಮಸ್ಥರು ಜೀವ ಭಯದಲ್ಲಿ ಜೀವನ ನಡೆಸಬೇಕಾಗಿದೆ.

ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದರು ಸಹ ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಆನೆ ಹಿಂಡುಗಳು ಗ್ರಾಮಗಳತ್ತ ನುಗ್ಗುತ್ತಿರುವುದರಿಂದ ಜನರಲ್ಲಿ ಮತ್ತಷ್ಟುಆತಂಕ ಹುಟ್ಟಿಸಿದೆ.

ಮನೆಯೊಳಗೆ ಲಗ್ಗೆ ಇಟ್ಟ ಆನೆಗಳು: ಗ್ರಾಮಸ್ಥರಲ್ಲಿ ಆತಂಕ

ಹಲವು ಬಾರಿ ಸಾರ್ವಜನಿಕರು, ಸಂಘಟನೆಗಳು ಹೋರಾಟ ನೆಡೆಸಿದ್ದರೂ ಸಹ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ರೈತರು ತೀವ್ರ ಆಕೊ›ೕಶ ವ್ಯಕ್ತ ಪಡಿಸುತ್ತಿದ್ದಾರೆ. ತೀವ್ರ ಪುಂಡಾಟ ನೆಡೆಸುತ್ತಿರುವ ಆನೆಗಳನ್ನಾದರು ಸೆರೆ ಹಿಡಿಯಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.