ಹಾವೇರಿ: ಅನೈತಿಕ ಚಟುವಟಿಕೆ ತಾಣವಾದ ರೈಲ್ವೆ ಮೇಲ್ಸೆತುವೆ

ರೈಲ್ವೆ ಮೇಲ್ಸೆತುವೆಯಲ್ಲಿ ಬೆಳಗದ ವಿದ್ಯುತ್‌ ದೀಪಗಳು| ಕತ್ತಲಾದರೆ ಸಾಕು ಕುಡುಕರ ಹಾವಳಿ, ಬೀದಿ ದೀಪ ದುರಸ್ತಿಗೆ ಸಾರ್ವಜನಿಕರ ಆಗ್ರಹ|ಸಾರ್ವಜನಿಕರಿಗೆ ತೊಂದರೆ|
 

Electric lights not On in Railway Flyover inn Haveri

ವೀರೇಶ ಮಡ್ಲೂರ

ಹಾವೇರಿ(ಫೆ.09): ನಗರದ ರೈಲ್ವೆ ಮೇಲ್ಸೆತುವೆಯಲ್ಲಿ ಅಳವಡಿಸಿರುವ ವಿದ್ಯುತ್‌ ದೀಪಗಳು ಹಲವಾರು ತಿಂಗಳಿಂದ ಕಣ್ಣುಮಚ್ಚಿದ್ದು, ಅಲ್ಲಿ ಸಂಜೆ ಯಾದರೆ ಸಾಕು ಯುವಕ ದಂಡು, ಮದ್ಯದ ಬಾಟಲಿಗಳ ಸೌಂಡ್‌ ಜೋರಾಗುತ್ತಿದೆ. ಮೇಲ್ಸೆತುವೆ ಅಕ್ಷರಶಃ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರು ಮೇಲ್ಸೆತುವೆ ಮೇಲೆ ಸಂಚಾರಕ್ಕೆ ಭಯ ಪಡುವಂತಾಗಿದೆ.

ನಗರದ ರೈಲ್ವೆ ನಿಲ್ದಾಣದ ಸಮೀಪ ಗುತ್ತಲ-ಹಾವೇರಿ ರಸ್ತೆ ಮಾರ್ಗದಲ್ಲಿ ಕೋಟ್ಯಂತರ ವೆಚ್ಚ ಮಾಡಿ ಈ ಸೇತುವೆ ನಿರ್ಮಿಸಲಾಗಿದೆ. ನಗರದ ಮಾರುಕಟ್ಟೆ, ಜಿಲ್ಲಾಸ್ಪತ್ರೆ, ಕೇಂದ್ರ ಬಸ್‌ ನಿಲ್ದಾಣದಿಂದ ವಿಜಯ ನಗರ, ಉದಯ ನಗರ, ಯತ್ತಿನಹಳ್ಳಿ, ಗಾಂಧಿಪುರ, ಅಗಡಿ, ಗುತ್ತಲ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕರು ಸಂಚಾರಕ್ಕೆ ಈ ಮೇಲ್ಸೆತುವೆಯನ್ನೇ ಅವಲಂಬಿಸಿದ್ದಾರೆ.

ರೈಲ್ವೆ ಮೇಲ್ಸೆತುವೆ ಮೇಲೆ ಲಕ್ಷಾಂತರ ವೆಚ್ಚದಲ್ಲಿ ಅಳವಡಿಸಿದ್ದ ಬೀದಿ ದ್ವೀಪಗಳು ಸುಮಾರು ತಿಂಗಳಿಂದ ಬೆಳಗುತ್ತಿಲ್ಲ. ಇದರಿಂದಾಗಿ ಈ ಪ್ರದೇಶದಲ್ಲಿ ರಾತ್ರಿಯಾದರೆ ಕಗ್ಗತ್ತು ಆವರಿಸಿಕೊಂಡು ಅನೈತಿಕ ಚಟುವಟಿಕೆಗೆ ತಾಣವಾಗುತ್ತಿದೆ. ರೈಲ್ವೆ ಮೇಲ್ಸೆತುವೆ ಕೆಳಗಡೆ, ಅಕ್ಕ ಪಕ್ಕದಲ್ಲಿ ಬಾರ್‌ಗಳು, ಹೋಟಲ್‌ಗಳು ಇರುವುದರಿಂದ ಕುಡುಕರು ಬಾಟಲ್‌ ತೆಗೆದುಕೊಂಡು ಸೇತುವೆ ಮೇಲೆ ಕತ್ತಲಲ್ಲಿ ಕುಳಿತು ಎಣ್ಣೆ ಹೊಡೆಯುವ ಅಡ್ಡ ಮಾಡಿಕೊಂಡಿದ್ದಾರೆ. ಸಂಜೆಯಾದರೆ ಸಾಕು ಹಳ್ಳಿಗಳಿಗೆ ಹೋಗುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕುಡುಕರ ಹಾವಳಿಯಿಂದ ವಾಹನ ಸವಾರರಿಗೆ ನಿತ್ಯ ಕಿರಿಕಿಯಾಗುತ್ತಿದೆ. ಕುಡಿದ ಮತ್ತಿನಲ್ಲಿ ವಾಹನಗಳನ್ನು ಅಡ್ಡಗಟ್ಟಿತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಕುಡುಕರ ಹಾವಳಿ ತಪ್ಪಿಸಬೇಕು. ನಗರಸಭೆ ಮೇಲ್ಸೆತುವೆ ಮೇಲೆ ಬೀದಿ ದೀಪಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮುಕ್ತ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಸೇತುವೆ ಕೆಳಗಡೆ ಅಂಡರ ಪಾಸ್‌ನಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರ ಬಗ್ಗೆ ಸಂಬಂಧಪಟ್ಟಅಧಿಕಾರಿಗಳು ಎಚ್ಚೆತ್ತುಕೊಂಡು ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ತಿಂಗಳ ಹಿಂದೆ ಇದೇ ಮೇಲ್ಸೇತುವೆಯಲ್ಲಿ ರಾತ್ರಿ ವೇಳೆ ಬೈಕ್‌ ಅಪಘಾತವಾಗಿ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‌ನಿಂದ ಬಿದ್ದರೂ ಯಾರಿಗೂ ಕಾಣದೇ ಕೆಲ ಸಮಯ ಅಲ್ಲೇ ಆತ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಯಾವ ವಾಹನ ಡಿಕ್ಕಿ ಹೊಡೆದು ಹೋಗಿದೆ ಎಂಬುದೂ ಗೊತ್ತಾಗದ ಸ್ಥಿತಿಯಿದೆ. ನಗರಸಭೆಯಲ್ಲಿ ಅಧಿಕಾರಿಗಳದ್ದೇ ಆಡಳಿತವಾಗಿರುವುದರಿಂದ ಹೇಳುವವರು- ಕೇಳುವವರೇ ಇಲ್ಲ. ಮೇಲ್ಸೇತುವೆಗೆ ವಿದ್ಯುತ್‌ ದೀಪ ಅಳವಡಿಸಿ ಅನುಕೂಲ ಕಲ್ಪಿಸಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

ಕತ್ತಲಾದರೆ ಸಾಕು ಈ ಸೇತುವೆ ಮೇಲೆ ಮತ್ತು ಕೆಳಗಡೆ ಕುಡುಕರ ತಾಣವಾಗುವ ಜೊತೆಗೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಇದರಿಂದ ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಾಯಕ ಗುಡಗುಂಟಿ ಅವರು ಹೇಳಿದ್ದಾರೆ. 

ಮೇಲ್ಸೆತುವೆಗೆ ಅಳಡಿಸಿದ್ದ ಬೀದಿದೀಪಗಳು ಕೇಲವೇ ದಿನಗಳಲ್ಲಿ ಬಂದ್‌ ಆಗಿದ್ದು, ಮರಳಿ ದೀಪಗಳು ಉರಿದಿಲ್ಲ. ಚೆನ್ನಾಗಿದ್ದ ಬೀದಿ ದೀಪದ ಎಲೆಕ್ಟ್ರಿಕಲ್‌ ವಸ್ತುಗಳು ಕಳ್ಳತನವಾಗಿ ಸಂಪೂರ್ಣ ಹಾಳಾಗಿವೆ. ಆದಷ್ಟು ಬೇಗ ಅಧಿಕಾರಿಗಳು ಬೀದಿದೀಪ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ಪ್ರಕಾಶ ಕೌದಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ನಗರಸಭೆ ಆಯುಕ್ತ ಬಸವರಾಜ ಜಿದ್ದಿ ಅವರು, ರೈಲ್ವೆ ಮೇಲ್ಸೆತುವೆ ಮೇಲಿನ ಬೀದಿ ದೀಪ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಬೀದಿ ದೀಪಗಳನ್ನು ಅಳವಡಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಬೀದಿ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios