ಬೆಂಗಳೂರು(ಜ.28): ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿಯ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ ಕಾರ‌್ಯಾಚರಣೆ ಮತ್ತಷ್ಟು ವಿಳಂಬವಾಗಲಿದೆ. ಏಕೆಂದರೆ, ಎಲೆಕ್ಟ್ರಿಕ್ ಬಸ್ ಪೂರೈಸುವ ಕಂಪನಿ ಹೆಚ್ಚಿನ ದರಕ್ಕೆ ಬಿಡ್ ಮಾಡಿದ ಪರಿಣಾಮ ಆ ಟೆಂಡರ್ ರದ್ದುಗೊಳಿಸಿ, ಮರು ಟೆಂಡರ್ ಕರೆಯಲಾಗಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮಾತೃಸಂಸ್ಥೆ ಕೆಎಸ್‌ಆರ್‌ಟಿಸಿಯು ಕೇಂದ್ರ ಸರ್ಕಾರದ ಫೇಮ್ ಯೋಜನೆ-2ನೇ ಹಂತದ ಅನುದಾನ ಬಳಸಿಕೊಂಡು ಬಿಎಂಟಿಸಿಗೆ ಗುತ್ತಿಗೆ ಆಧಾರದಡಿ ಹವಾನಿಯಂತ್ರಿತ 300 ಎಲೆಕ್ಟ್ರಿಕ್ ಬಸ್ ಪಡೆಯುವ ಸಂಬಂಧ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್‌ನಲ್ಲಿ ಭಾಗಿಯಾಗಿದ್ದ ಎರಡು ಕಂಪನಿಗಳ ಪೈಕಿ ಅಂತಿಮವಾಗಿ ಅರ್ಹತೆ ಪಡೆದ ಹೈದರಾಬಾದ್ ಮೂಲದ ‘ಒಲೆಕ್ಟ್ರಾ ಗ್ರೀನ್ ಟೆಕ್’ ಕಂಪನಿ, ಪ್ರತಿ ಕಿ.ಮೀ.ಗೆ 89.64 ರ ಬಿಡ್ ಸಲ್ಲಿಸಿತ್ತು.

ಸಾರ್ವಜನಿಕರ ಸೊತ್ತು ರಕ್ಷಣೆ ಆಧುನಿಕ ಲಾಕರ್, ಕದಿಯೋಕೆ ಬಂದ್ರೆ ಮೆಸೇಜ್ ಹೋಗುತ್ತೆ

ಇಷ್ಟೊಂದು ದುಬಾರಿ ಮೊತ್ತ ಪಾವತಿ ಕಷ್ಟ ಆಗಿರುವುದರಿಂದ ಹಾಗೂ ನಿಗಮದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಟೆಂಡರ್ ರದ್ದುಪಡಿಸಿದೆ. ಹವಾ ನಿಯಂತ್ರಿತ ಡೀಸೆಲ್ ಬಸ್ ಕಾರ್ಯಾಚರಣೆಗೆ ಪ್ರತಿ ಕಿ.ಮೀ. ₹75ರಿಂದ ₹80 ವೆಚ್ಚವಾಗುತ್ತಿದೆ. ಹೀಗಿರುವಾಗ ಒಲೆಕ್ಟ್ರಾ ಗ್ರೀನ್ ಟೆಕ್ ಕಂಪನಿ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ಡೀಸೆಲ್ ಬಸ್ ಕಾರ್ಯಾಚರಣೆ ದರಕ್ಕಿಂತಲೂ ಹೆಚ್ಚಿನ ದರಕ್ಕೆ ಬಿಡ್ ಮಾಡಿತ್ತು.

ಟೆಂಡರ್‌ನಲ್ಲಿ ಟಾಟಾ ಮೋಟಾರ್ಸ್‌ ಹಾಗೂ ಈ ಒಲೆಕ್ಟ್ರಾ ಕಂಪನಿ ಮಾತ್ರ ಭಾಗವಹಿಸಿದ್ದವು. ಇದರಲ್ಲಿ ಪೂರಕ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್‌ ಅರ್ಹತೆ ಕಳೆದುಕೊಂಡಿತ್ತು. ಹೀಗಾಗಿ ಟೆಂಡರ್‌ನಲ್ಲಿ ಈ ಒಲೆಕ್ಟ್ರಾ ಕಂಪನಿ ಮಾತ್ರ ಉಳಿದಿತ್ತು. ಟೆಂಟರ್ ನಲ್ಲಿ ದರ ಪೈಪೋಟಿ ನಡೆಸಲು ಮತ್ತೊಂದು ಕಂಪನಿ ಇಲ್ಲದ ಪರಿಣಾಮ ದುಬಾರಿ ಮೊತ್ತಕ್ಕೆ ಬೇಡಿಕೆ ಇರಿಸಿತ್ತು. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಟೆಂಡರ್ ರದ್ದು ಪಡಿಸಲಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಸರ್ಕಾರ ಸಮಯ ವಿಸ್ತರಣೆ:

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯವು ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ‘ಫೇಮ್’ ಯೋಜನೆ ರೂಪಿಸಿದೆ. ಬಿಎಂಟಿಸಿಯು ಫೇಮ್ ಯೋಜನೆಯ ಎರಡನೇ ಹಂತದ ಅನುದಾನ ಬಳಸಿಕೊಂಡು ಗುತ್ತಿಗೆ ಆಧಾರದಡಿ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿತ್ತು. 2020ರ ಜ.15ರೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಬೇಕಿತ್ತು. ಈ ನಡುವೆ ಟೆಂಡರ್ ರದ್ದುಗೊಳಿಸಿದ್ದರಿಂದ ಫೇಮ್ ಯೋಜನೆಯ ಎರಡನೇ ಹಂತದ ಅನುದಾನ ಕೈ ತಪ್ಪುವ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯವನ್ನು ಸಂಪರ್ಕಿಸಿ, ವಾಸ್ತವಾಂಶಗಳನ್ನು ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾಗಿದೆ.

ಬಾಲ್‌ ಎಸೆಯಿರಿ, ಕಸವನ್ನಲ್ಲ; ಸ್ವಚ್ಛ ನಗರಕ್ಕಾಗಿ BBMP ಹೊಸ ಐಡಿಯಾ

ಹೀಗಾಗಿ ಸಚಿವಾಲಯವು ಮರು ಟೆಂಡರ್ ಕರೆದು ಪ್ರಕ್ರಿಯೆ ಮುಗಿಸಲು ಬಿಎಂಟಿಸಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ. ಅಲ್ಪಾವಧಿ ಟೆಂಡರ್: ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ ಪಡೆಯುವ ಸಂಬಂಧ ಬಿಎಂಟಿಸಿ ಅಲ್ಪಾವಧಿ ಟೆಂಡರ್ ಆಹ್ವಾನಿಸಿದೆ. ಈ ಬಾರಿ ಟೆಂಡರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇರಿಸಿಕೊಂಡಿದೆ. ಅಲ್ಲದೆ, ಒಂದು ತಿಂಗಳ ಅವಧಿಯಲ್ಲಿ ಈ ಟೆಂಡರ್ ಪ್ರಕ್ರಿಯೆ ಮುಗಿಸುವ ಗುರಿ ಹಾಕಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆ.೧೫ರೊಳಗೆ ಟೆಂಡರ್ ಪ್ರಕ್ರಿಯೆ ಮುಕ್ತಾ ಯವಾಗಲಿದೆ. ಒಂದು ವೇಳೆ ಈ ಟೆಂಡರ್‌ನಲ್ಲೂ ಹೆಚ್ಚಿನ ಕಂಪನಿಗಳು ಭಾಗವಹಿಸದಿದ್ದರೆ, ಎಲೆಕ್ಟ್ರಿಕ್ ಬಸ್ ಯೋಜನೆ ಮತ್ತಷ್ಟು ಕಠಿಣವಾಗಲಿದೆ.

ಎಲೆಕ್ಟ್ರಿಕ್ ಬಸ್ ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ್ದರಿಂದ ಟೆಂಡರ್ ರದ್ದು ಮಾಡಲಾಗಿದೆ. ಇದೀಗ ಅಲ್ಪಾವಧಿ ಟೆಂಡರ್ ಆಹ್ವಾನಿಸಿದ್ದು, ಹೆಚ್ಚಿನ ಕಂಪನಿಗಳು ಭಾಗಿಯಾಗುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

-ಮೋಹನ ಹಂಡ್ರಂಗಿ