Chikkamagaluru ಮೂಡಿಗೆರೆ ಕ್ಷೇತ್ರದಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾನ ಬಹಿಷ್ಕಾರ ಕೂಗು ಮುಂದುವರೆದಿದ್ದು, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿ ಹೊಸಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸುಣ್ಣದಗೂಡಿನಲ್ಲಿ ನೆರೆ ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸದೇ ಇರುವುದರಿಂದ ಮತದಾನ ಬಹಿಷ್ಕರಿಸಲಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.31): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾನ ಬಹಿಷ್ಕಾರ ಕೂಗು ಮುಂದುವರೆದಿದ್ದು, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿ ಹೊಸಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸುಣ್ಣದಗೂಡಿನಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಮೂಲಭೂತ ಸೌಕರ್ಯ ಕಲ್ಪಿಸದೇ ಇರುವುದರಿಂದ ಮತದಾನ ಬಹಿಷ್ಕರಿಸಿದ್ದು, ನಿರಾಶ್ರಿತರ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.
ಮೂಲಭೂತ ಸೌಲಭ್ಯಕ್ಕೆ ಒತ್ತಾಯ:
ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಅತಿವೃಷ್ಟಿ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಿದಿರುತಳ, ಮಧುಗುಂಡಿ, ದುರ್ಗದಹಳ್ಳಿಗಳ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಧಾರಾಕಾರ ಮಳೆಗೆ ಗುಡ್ಡಗಳು ಕುಸಿದ ಪರಿಣಾಮ ಹಲವಾರು ಮನೆಗಳು ಹಾನಿಗೊಳಲಾಗಿದ್ದವು.ಗ್ರಾಮಗಳು ಗುರುತು ಸಿಗದಂತೆ ಕೊಚ್ಚಿಹೋಗಿದ್ದವು. 2019 ರಿಂದ ಹೊಸಬದುಕಿಗಾಗಿ ಗ್ರಾಮಸ್ಥರು ಹೋರಾಟ ನಡೆಸುತ್ತಲೇ ಬಂದಿದ್ದಾರೆ.
ಭೂ ಕುಸಿತ ಉಂಟಾದ ಮಧುಗುಂಡಿಗೆ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ ಮೇರೆಗೆ ಭೇಟಿನೀಡಿದ್ದು, ನಿರಾಶ್ರಿತರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು. ದುರ್ಗದಹಳ್ಳಿಯ ಜನರು ಕಷ್ಟಗಳನ್ನು ನೆನೆದು ಮುಖ್ಯಮಂತ್ರಿಗಳ ಎದುರು ಕಣ್ಣೀರು ಸುರಿಸಿದ್ದರು. ಜಿಲ್ಲಾಡಳಿತ ನಿರಾಶ್ರಿತರಿಗೆ ಬಣಕಲ್ ಬಳಿ ಜಾಗದ ವ್ಯವಸ್ಥೆ ಮಾಡಿದ್ದು, ಮೂಲ ಸೌಕರ್ಯ ಇಲ್ಲದೆ. ಕಷ್ಟಕಾರ್ಪಣ್ಯಗಳಿಂದಲೇ ದಿನ ದೂಡುವಂತಾಗಿದೆ.
ಬಣಕಲ್ ಪಂಚಾಯಿತಿ ಸಮೀಪದಲ್ಲಿ ಜಾಗನೀಡಿದ್ದು, ಈ ಪ್ರದೇಶ ಹೊಸಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಈ ಪಂಚಾಯಿತಿ ಬರಲು ಬಣಕಲ್ ಚಕಮಕ್ಕಿ ಭಾರತಿಬೈಲ್ ಮೂಲಕ ಹೊಸಳ್ಳಿ ಪಂಚಾಯಿತಿಗೆ 8 ಕಿ.ಮೀ.ಸುತ್ತಿಕೊಂಡು ಬರುವಂತಾಗಿದೆ.ಪಡಿತರ ಪಡೆಯಲು ಸೊಸೈಟಿಗೆ ಬರಲು ಸುತ್ತಾಕಿಕೊಂಡು ಬರುಬೇಕಾಗಿದೆ. ನಿವೇಶನದ ನೀಲಿ ನಕ್ಷೆಯೇ ಸರಿಯಿಲ್ಲ. ರಸ್ತೆಸರಿಯಿಲ್ಲ, 3 ವಿದ್ಯುತ್‌ಕಂಬ ಅಳವಡಿಸಿ ವಿದ್ಯುತ್ ಲೈನ್ ಎಳೆದಿದ್ದು, ಸಂಪರ್ಕವಿಲ್ಲ. ಬಾಕ್ಸ್ ಚರಂಡಿಗೆ ಭೂಮಿ ಅಗೆದಿದ್ದು, ಕಾಮಗಾರಿ ಅಪೂರ್ಣವಾಗಿದೆ.
ಚುನಾವಣಾ ಬಹಿಷ್ಕಾರ:
ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ವಾರಕ್ಕೊಮ್ಮೆ ಕುಡಿಯುವ ನೀರುನೀಡುತ್ತಿದ್ದು, ಈ ನೀರು ಸಾಕಾಗುವುದಿಲ್ಲ ಎಂಬುದು ನಿವಾಸಿಗಳ ಅಳಲಾಗಿದೆ. ಇಲ್ಲಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ತೆರಳಿದರೆ ಜನಪ್ರತಿನಿಧಿಗಳು ಪ್ರೋತ್ಸಾಹ ನೀಡುವುದಿಲ್ಲ ಎಂದು ಆರೋಪಿಸಲಾಗುತ್ತಿದೆ. ಜಿಲ್ಲಾಡಳಿತ ನಿರಾಶ್ರಿತರು ಅತಿವೃಷ್ಟಿ ಪ್ರದೇಶದಿಂದ ಹೊರಬಂದರೆ ಮೂಲಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದು, ಈಗ ಜಾಗಮಾತ್ರ ಕೊಟ್ಟು ಮೂಲಭೂತಸೌಲಭ್ಯಗಳು ಮರೀಚಿಕೆಯಾಗಿವೆ.
ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣಾ ದಿನಾಂಕ ಘೋಷಣೆ, ಫೆ.27ಕ್ಕೆ ಮತದಾನ!
ಹಾಗಾಗಿ ಸೌಲಭ್ಯಕ್ಕೆ ಒತ್ತಾಯಿಸಿ ನಿರಾಶ್ರಿತರು ಚುನಾವಣೆ ಬಹಿಷ್ಕರಿಸಿದ್ದಾರೆ.ಗ್ರಾಮಸ್ಥ ವಿಜೇಂದ್ರ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿ ಮಧುಗುಂಡಿ ಹಲಗಡಕ, ದುರ್ಗದಹಳ್ಳಿ, ಬಿದಿರುತಳದ 40 ನಿರಾಶ್ರಿತ ಕುಟುಂಬಗಳಿಗೆ 2020ರಲ್ಲಿ ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಣಕಲ್‌ನ ಸುಣ್ಣದಗೂಡಿನ ಸಮೀಪ ಜಾಗ ನೀಡಿದ್ದರೂ ಮೂಲಭೂತ ಸೌಕರ್ಯ ಇಲ್ಲದೇ ಇಂದಿಗೂ ಬಹುತೇಕ ನೆರೆಸಂತ್ರಸ್ತರು ನೆಲೆ ಕಂಡುಕೊಂಡಿಲ್ಲ. 5 ಕುಟುಂಬಗಳು ಮಾತ್ರ ಇಲ್ಲಿ ವಾಸಿಸುತ್ತಿವೆ.
2A ಮೀಸಲಾತಿ ಪಂಚಮಸಾಲಿ ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ!
ಈಗ ಬಣಕಲ್ ಗ್ರಾಮಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ನೀರು ಬಿಡುತ್ತಿರುವುದರಿಂದ ನೆರೆ ಸಂತ್ರಸ್ತರು ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ತಿಳಿಸಿದ್ದಾರೆ.ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೇ ಇರುವುದರಿಂದ ಮಳೆಗಾಲದ ಮಳೆನೀರು ಮನೆಯೊಳಗೆ ನುಗ್ಗುವ ಆತಂಕ ಎದುರಾಗಿದೆ. ಮನೆಗಳ ನಡುವಿನ ಒಳ ರಸ್ತೆಗಳ ಎರಡು ಕಡೆ ಬಾಕ್ಸ್ ಚರಂಡಿ ನಿರ್ಮಿಸಿದರೂ ಕೂಡ ಭೂಮಿ ಸಮತಟ್ಟು ಇಲ್ಲದೇ ಇರುವುದರಿಂದ ಮಳೆ ನೀರು ಮನೆಯೊಳಗೆ ನುಗ್ಗಬಹುದಾಗಿದೆ. ಮೂಲಭೂತ ಸೌಕರ್ಯ ಮರೀಚಿಕೆಯಾಗಿರುವುದರಿಂದ ಪುನರ್ವಸತಿ ಪ್ರದೇಶದಲ್ಲಿರುವ ನೆರೆಸಂತ್ರಸ್ತರು ಈ ಬಾರಿಯ ಚುನಾವಣೆ ಬಹಿಷ್ಕರಿಸಲು ನಿರ್ದರಿಸಿದ್ದೇವೆ ಎಂದು ತಿಳಿಸಿದ್ದಾರೆ.