ಪ್ರಪಂಚದಾದ್ಯಂತ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿರುವ 'ಎಲ್‌ನಿನೋ' ವಿದ್ಯಮಾನದಿಂದಾಗಿ ಬರುವ ಮಾರ್ಚ್‌ ವೇಳೆಗೆ ಭಾರತದಲ್ಲಿ ಹೆಚ್ಚುವರಿಯಾಗಿ 55,000 ಜನರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಕ್ಲೈಮ್ಯಾಟ್‌ ಇಂಪ್ಯಾಕ್ಟ್‌ ಲ್ಯಾಬ್‌ ವರದಿ ಮಾಡಿದೆ. ವಿಶ್ವದಾದ್ಯಂತ ಸುಮಾರು 3,73,000 ಹೆಚ್ಚುವರಿ ಸಾವುಗಳು ಸಂಭವಿಸುವ ಭೀತಿಯಿದೆ.

ವಾಷಿಂಗ್‌ಟನ್ / ನವದೆಹಲಿ (ಅ.30): ಪ್ರಪಂಚದಾದ್ಯಂತ ಮಳೆ ಕೊರತೆ, ತೀವ್ರ ಉಷ್ಣಾಂಶ ಮತ್ತು ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿರುವ 'ಎಲ್‌ನಿನೋ' (El Niño) ವಿದ್ಯಮಾನವು ಭಾರತಕ್ಕೆ ತೀವ್ರ ಗಂಡಾಂತರ ತಂದೊಡ್ಡುವ ಲಕ್ಷಣಗಳು ಗೋಚರಿಸುತ್ತಿವೆ. ಬರುವ ಮಾರ್ಚ್‌ ವೇಳೆಗೆ ಭಾರತದಲ್ಲಿ ಎಲ್‌ನಿನೋ ಹಾಗೂ ಅಧಿಕ ಶಾಖದಿಂದಾಗಿ ಹೆಚ್ಚುವರಿಯಾಗಿ 55,000 ಜನರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆಯ ವರದಿಯೊಂದು ಎಚ್ಚರಿಸಿದೆ.

ಅಮೆರಿಕ ಮೂಲದ ಪ್ರಸಿದ್ಧ ಹವಾಮಾನ ಅಧ್ಯಯನ ಸಂಸ್ಥೆ 'ಕ್ಲೈಮ್ಯಾಟ್‌ ಇಂಪ್ಯಾಕ್ಟ್‌ ಲ್ಯಾಬ್‌' (Climate Impact Lab) ಬಿಡುಗಡೆ ಮಾಡಿರುವ ‘ಎಲ್ ನಿನೊ ಹೀಟ್ ಮಾರ್ಟಾಲಿಟಿ ಟ್ರ್ಯಾಕರ್’ (El Niño Heat Mortality Tracker) ದತ್ತಾಂಶದಲ್ಲಿ ಈ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ.

ಜಗತ್ತಿನಾದ್ಯಂತ 3.73 ಲಕ್ಷ ಹೆಚ್ಚುವರಿ ಸಾವು!

ವರದಿಯ ಅಂದಾಜಿನಂತೆ, ಮುಂದಿನ 6 ತಿಂಗಳ ಅವಧಿಯಲ್ಲಿ (ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ) ತೀವ್ರ ಶಾಖ ಮತ್ತು ಉಷ್ಣ ಗಾಳಿಯ ಕಾರಣದಿಂದ ಪ್ರಪಂಚದಾದ್ಯಂತ ಸುಮಾರು 3,73,000 ಹೆಚ್ಚುವರಿ ಸಾವುಗಳು ಸಂಭವಿಸುವ ಭೀತಿಯಿದೆ. ವಿಶ್ವದ ಇತರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಎನ್‌ನಿನೋದಿಂದ ಉಂಟಾಗುವ ಈ ಅಧಿಕ ಉಷ್ಣಾಂಶದ ಸಾವು-ನೋವುಗಳು 'ಗ್ಲೋಬಲ್ ಸೌತ್' (Global South) ಎನಿಸಿಕೊಂಡಿರುವ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಲ್ಲೇ ಹೆಚ್ಚು ಸಂಭವಿಸಲಿವೆ. ಅದರಲ್ಲೂ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ಭಾಗಗಳು ಈ ತಾಪಮಾನ ಹೆಚ್ಚಳದ ಪ್ರಮುಖ 'ಹಾಟ್‌ಸ್ಪಾಟ್' (Hotspot) ಆಗಿ ಮಾರ್ಪಡಲಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಭಾರತದಲ್ಲೇ ಏಕಿಷ್ಟು ಅಪಾಯ?

- ಮಾರ್ಚ್‌ನಲ್ಲಿ ತಾಪಮಾನ ಸ್ಪೋಟ: ವರದಿಯ ಪ್ರಕಾರ, ಭಾರತದಲ್ಲಿ ಅಂದಾಜಿಸಲಾದ 55,000 ಸಾವುಗಳಲ್ಲಿ ಬಹುಪಾಲು ಸಾವುಗಳು ಮುಂದಿನ ಮಾರ್ಚ್‌ ತಿಂಗಳಲ್ಲಿ, ಅಂದರೆ ಬೇಸಿಗೆ ಆರಂಭದ ಅವಧಿಯಲ್ಲಿ ಸಂಭವಿಸುವ ಸಾಧ್ಯತೆಯಿದೆ.

- ಬಯಲು ವಲಯದ ಕಾರ್ಮಿಕರು: ನಿರಂತರವಾಗಿ ಬಿಸಿಲಿನಲ್ಲಿ ಕೆಲಸ ಮಾಡುವ ಬಯಲು ಪ್ರದೇಶದ ಕಾರ್ಮಿಕರು, ಹಿರಿಯ ನಾಗರಿಕರು ಹಾಗೂ ಸೂಕ್ತ ತಂಪು/ವಾತಾನುಕೂಲ ಸೌಲಭ್ಯಗಳಿಲ್ಲದ ಬಡ ವರ್ಗದ ಜನರಿಗೆ ಈ ಬಿಸಿಲಿನ ಧಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಲಿದೆ.

ಮುನ್ನೆಚ್ಚರಿಕೆಗೆ ವಿಜ್ಞಾನಿಗಳ ಸಲಹೆ

ಎಲ್‌ನಿನೋ ವೈಪರೀತ್ಯವು ಕೇವಲ ಮಳೆ ಕೊರತೆಗೆ ಸೀಮಿತವಾಗದೆ, ಸಾರ್ವಜನಿಕ ಆರೋಗ್ಯದ ಮೇಲೆಯೂ ದೊಡ್ಡ ಮಟ್ಟದ ಪ್ರಭಾವ ಬೀರಲಿದೆ. ಹೀಗಾಗಿ ಭಾರತ ಸೇರಿದಂತೆ ಭಾದಿತ ದೇಶಗಳು ಮುಂಚಿತವಾಗಿಯೇ ತೀವ್ರ ಶಾಖ ನಿವಾರಣಾ ಯೋಜನೆಗಳನ್ನು (Heat Action Plans) ರೂಪಿಸುವುದು, ಸಾರ್ವಜನಿಕ ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು ಮತ್ತು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ವಿಜ್ಞಾನಿಗಳು ಹಾಗೂ ಆರೋಗ್ಯ ತಜ್ಞರು ಜಾಗತಿಕ ಮಟ್ಟದಲ್ಲಿ ಕರೆ ನೀಡಿದ್ದಾರೆ.