ರೆಡ್ ಝೋನ್ ದಾವಣಗೆರೆಯಲ್ಲೀಗ ಆರ್ಥಿಕ ಚಟುವಟಿಕೆ ಶುರು
ರೆಡ್ ಝೋನ್‌ನಲ್ಲಿರುವ ದಾವಣಗೆರೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳ ಮುಂದೆ ಸಾಲುಗಳು ಅಷ್ಟಕ್ಕಷ್ಟೇ ಎಂಬಂತಿದ್ದು, ಮದ್ಯದ ಅಂಗಡಿಗಳು ತೆರೆದಿದ್ದುದರಿಂದ ಜನದಟ್ಟಣೆಯೂ ಹೆಚ್ಚಾಗಿ ಕಂಡು ಬಂದಿತು. ಬಡಾವಣೆ ಪ್ರದೇಶ ಹೊರತುಪಡಿಸಿ, ಹಿಂದುಳಿದ ಪ್ರದೇಶಗಳ ಬಾರ್‌ಗಳ ಮುಂದೆ ಪಾನಪ್ರಿಯರ ಸಾಲು ಜೋರಾಗಿ ಕಂಡು ಬಂದಿತು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ದಾವಣಗೆರೆ(ಮೇ.14): ರೆಡ್ ಝೋನ್‌ನಲ್ಲಿದ್ದರೂ ಕೆಲ ಷರತ್ತಿಗೊಳಪಟ್ಟಂತೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲು ಜಿಲ್ಲಾಡಳಿತ ಅವಕಾಶ ನೀಡಿದ್ದರಿಂದ ನಗರ, ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದರೆ, ಮತ್ತೊಂದು ಕಡೆ ಈ ಸಡಿಲಿಕೆಯನ್ನೇ ಕೆಲವರು ಅನಾವಶ್ಯಕ ತಿರುಗಾಟಕ್ಕೆ ದುರ್ಬಳಕೆ ಮಾಡಿ ಕೊಳ್ಳುತ್ತಿರುವುದು ಕಂಡು ಬಂದಿದೆ.
ನಗರ, ಜಿಲ್ಲೆಯಲ್ಲಿ ಷರತ್ತಿಗೊಳಪಟ್ಟು, ಸರ್ಕಾರದ ನಿಯಮಾನುಸಾರ ಆರ್ಥಿಕ ಚಟುವಟಿಕೆಗೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿತ್ತು. ಇಲ್ಲಿನ ಹಳೆ ಮಾರುಕಟ್ಟೆಪ್ರದೇಶ, ಮಂಡಿಪೇಟೆ, ಗಡಿಯಾರ ಕಂಬ, ರಾಂ ಅಂಡ್ ಕೋ ವೃತ್ತ, ಅಶೋಕ ರಸ್ತೆ, ಪಿಬಿ ರಸ್ತೆ, ವಿದ್ಯಾರ್ಥಿ ಭವನ, ಹದಡಿ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಬಿಐಇಟಿ ರಸ್ತೆಗಳಲ್ಲಿ ಆರ್ಥಿಕ ಚಟುವಟಿಕೆ ಬೆಳಗ್ಗೆಯಿಂದಲೇ ಗರಿಗೆದರಿತು. ಸಣ್ಣಪುಟ್ಟಬಟ್ಟೆಅಂಗಡಿ, ಅಗತ್ಯ ವಸ್ತುಗಳ ಮಾರಾಟದ ಅಂಗಡಿ, ಸಿಮೆಂಟ್, ಹಾರ್ಡ್‌ವೇರ್ ಶಾಪ್‌ಗಳು, ಸಿಮೆಂಟ್ ಅಂಗಡಿಗಳು, ಬೇಕರಿಗಳು, ಔಷಧಿ ಅಂಗಡಿಗಳು ಹೀಗೆ ನಾನಾ ಅಂಗಡಿ ಮುಗ್ಗಟ್ಟು, ಸಣ್ಣ ಪುಟ್ಟಕೈಗಾರಿಕೆಗಳು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿತ್ತು.
ಅಗತ್ಯ ವಸ್ತುಗಳ ಅಂಗಡಿಗಳ ಮುಂದೆ ಸಾಲುಗಳು ಅಷ್ಟಕ್ಕಷ್ಟೇ ಎಂಬಂತಿದ್ದು, ಮದ್ಯದ ಅಂಗಡಿಗಳು ತೆರೆದಿದ್ದುದರಿಂದ ಜನದಟ್ಟಣೆಯೂ ಹೆಚ್ಚಾಗಿ ಕಂಡು ಬಂದಿತು. ಬಡಾವಣೆ ಪ್ರದೇಶ ಹೊರತುಪಡಿಸಿ, ಹಿಂದುಳಿದ ಪ್ರದೇಶಗಳ ಬಾರ್‌ಗಳ ಮುಂದೆ ಪಾನಪ್ರಿಯರ ಸಾಲು ಜೋರಾಗಿ ಕಂಡು ಬಂದಿತು. ಕಳೆದ 50 ದಿನಗಳಿಂದ ಮದ್ಯ ಸಿಗದೇ ಬೇಸತ್ತಿದ್ದ ಪಾನ ಪ್ರಿಯರ ಮಟ್ಟಿಗೆ ಇಂದು ಸಂಭ್ರಮದ ದಿನವಾಗಿತ್ತು.
ಕೊರೋನಾ ಎಫೆಕ್ಟ್: ಗಿರಿಯ ನಾಡಿನಲ್ಲಿ ಕುಸಿದ ಪ್ರವಾಸೋದ್ಯಮ
ಷರತ್ತು, ನಿಯಮಕ್ಕೊಳಪಟ್ಟು ಅನುಮತಿ ನೀಡಿರುವ ಜಿಲ್ಲಾಡಳಿತ ಮತ್ತೆ ಸೋಂಕು ಪ್ರಕರಣ ಹೆಚ್ಚಾದರೆ ಮತ್ತೊಮ್ಮೆ ಕಟ್ಟುನಿಟ್ಟಿನ ಲಾಕ್ ಡೌನ್ ತಂದರೂ ಅಚ್ಚರಿ ಇಲ್ಲ. ಸತತ ಲಾಕ್‌ಡೌನ್‌ನಿಂದ ಮನೆಯಲ್ಲೇ ಕಳೆದ 2 ತಿಂಗಳಿನಿಂದಲೂ ಜಡ್ಡುಗಟ್ಟಿದಂತಿದ್ದ ವ್ಯಾಪಾರಸ್ಥರು, ಅಂಗಡಿ ಮುಗ್ಗಟ್ಟು, ಕೈಗಾರಿಕೆ ನಡೆಸುವವರು ಹೊಸ ಆಶಾವಾದದೊಂದಿಗೆ ಅಂಗಡಿ ಮುಗ್ಗಟ್ಟು, ಕೈಗಾರಿಕೆ ಆರಂಭಿಸಿದರೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರವಾಗಲಿಲ್ಲ. ಕೊರೋನಾ ವೈರಸ್ ಭಯದಿಂದಾಗಿ ಅಂಗಡಿ, ಮುಗ್ಗಟ್ಟುಗಳಿಗೆ ಎಡೆತಾಕಲು ಜನರೂ ಸಹ ಹಿಂದೇಟು ಹಾಕುತ್ತಿರುವದು ಸ್ಪಷ್ಟ.
ಕೊರೋನಾ ಭಯದಲ್ಲಿರುವ ಜನರು ಎಂದಿನಂತೆ ಮುಕ್ತವಾಗಿ ಸಂಚರಿಸಲು ಮೊದಲು ವೈರಸ್ ನಿಯಂತ್ರಣ ಆಗಬೇಕು. ನಂತರ ಸಹಜ ಸ್ಥಿತಿಗೆ ವ್ಯಾಪಾರ ವಹಿವಾಟು, ಜನ ಜೀವನ ಮರಳಲು ಒಂದಿಷ್ಟುದಿನಗಳು ಬೇಕಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ವೈರಸ್ ನಿಯಂತ್ರಣಕ್ಕೆ ಬಂದಾಗ ಮಾತ್ರವೇ ಸಹಜ ಜನ ಜೀವನ, ವ್ಯಾಪಾರ ವಹಿವಾಟು ಸಾಧ್ಯವಾಗುತ್ತದೆ.
ದಿನಸಿ, ಔಷಧಿ, ಬಟ್ಟೆಅಂಗಡಿ, ಬೇಕರಿ, ಹೊಟೆಲ್(ಪಾರ್ಸೆಲ್‌ಗೆ ಮಾತ್ರ ಅವಕಾಶ)ಗಳ ಚಟುವಟಿಕೆಗಳು ಆರಂಭವಾಗಿವೆ. ಬುಧವಾರ ಮಧ್ಯಾಹ್ನದಿಂದಲೇ ಮದ್ಯದಂಗಡಿಗಳಿಗೆ ಜಿಲ್ಲಾ ಕೇಂದ್ರದ ಸೀಲ್ ಡೌನ್ ಪ್ರದೇಶ ಹೊರತುಪಡಿಸಿ, ಅವಕಾಶ ನೀಡಲಾಗಿದೆ. ಸಣ್ಣ ಕೈಗಾರಿಕೆ, ಮಿಲ್, ಕಟ್ಟಡ ಇತರೆ ನಿರ್ಮಾಣ ಕಾಮಗಾರಿ, ಚಟುವಟಿಕೆ, ಅಗತ್ಯ ಸಾಮಗ್ರಿ ಪೂರೈಸುವ ವಹಿವಾಟು, ಬಟ್ಟೆಅಂಗಡಿಗಳಲ್ಲಿ ಮೊದಲ ದಿನ ಅಷ್ಟಾಗಿ ಚಟುವಟಿಕೆ ಕಂಡು ಬರದಿದ್ದರೂ ಷರತ್ತಿಗೊಳಪಟ್ಟಂತೆ ವ್ಯಾಪಾರ, ವಹಿವಾಟು, ನಿರ್ಮಾಣ ಕಾರ್ಯವಂತೂ ಆರಂಭವಾಗಿದೆ.
ನಿಧಾನಕ್ಕೆ ಗರಿಗೆದರಿದ ಆರ್ಥಿಕ ಚಟುವಟಿಕೆ
ಸತತ 2 ತಿಂಗಳಿನಿಂದಲೂ ಸ್ತಬ್ಧಗೊಂಡಿದ್ದ ಜಿಲ್ಲಾ ಕೇಂದ್ರ, ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ನಿಧಾನಕ್ಕೆ ಗರಿಗೆದರುತ್ತಿವೆ. ಈ ಮಧ್ಯೆ ಬುಧವಾರ 12 ಪಾಸಿಟಿವ್ ಪ್ರಕರಣ ವರದಿಯಾದರೆ, ಬುಧವಾರ ಕೇವಲ 2 ಪಾಸಿಟಿವ್ ಕೇಸ್ ದೃಢಪಟ್ಟಿವೆ. ಜೊತೆಗೆ ಆಶಾದಾಯಕ ಸಂಗತಿಯೆಂದರೆ ಬಾಷಾ ನಗರ, ಜಾಲಿ ನಗರದ ಸೋಂಕಿತರು ಉತ್ತಮ ಚಿಕಿತ್ಸೆಯಿಂದ ಗುಣಮುಖರಾಗುತ್ತಿರುವುದು ಆಡಳಿತ ಯಂತ್ರದ ಖುಷಿಗೆ ಕಾರಣವೆಂದರೆ ತಪ್ಪಾಗದು.