- ಆರ್‌.ತಾರಾನಾಥ್‌, ಕನ್ನಡಪ್ರಭ

ಚಿಕ್ಕಮಗಳೂರು(ಮೇ.14): ಕಾಫಿ ನಾಡಿನಲ್ಲಿ ಚಿಗುರುತ್ತಿದ್ದ ಪ್ರವಾಸೋದ್ಯಮ ಪಾತಳಕ್ಕೆ ಕುಸಿದಿದೆ. 550ಕ್ಕೂ ಹೆಚ್ಚು ಲಾಡ್ಜ್‌, ಹೋಂ ಸ್ಟೇ, ರೇಸಾರ್ಟ್‌ಗಳು ಬಾಗಿಲು ಮುಚ್ಚಿಕೊಂಡಿವೆ. ಈ ಕ್ಷೇತ್ರ ಮತ್ತೆ ಪುನಶ್ಚೇತನ ಪಡೆಯಲು ಕನಿಷ್ಠ ಏಳೆಂಟು ತಿಂಗಳಾದರೂ ಬೇಕು. ಇದೆಲ್ಲಾ, ಕೊರೋನಾ ವೈರಸ್‌ ಸೋಂಕು ಗಿರಿಯ ನಾಡನ್ನು ತಲ್ಲಣಗೊಳಿಸಿರುವ ಪರಿ.

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುತ್ತಿದೆ. ವರ್ಷದ ಎಲ್ಲ ಕಾಲದಲ್ಲೂ ಇಲ್ಲಿಗೆ ದೇಶಿಯ ಮಾತ್ರವಲ್ಲ ವಿದೇಶದಿಂದಲೂ ಲಕ್ಷಾಂತರ ಮಂದಿ ಪ್ರವಾಸಿಗರು ಬಂದು ಇಲ್ಲಿನ ಸೌಂದರ್ಯದಲ್ಲಿ ಕಾಲ ಕಳೆದು ಖುಷಿಪಟ್ಟು ತೆರಳುತ್ತಾರೆ.

ಇಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದನ್ನು ಬಿಸಿನೆಸ್‌ ಆಗಿ ತೆಗೆದುಕೊಂಡ ಹಲವು ಮಂದಿ ಕೋಟ್ಯಂತರ ರು. ಬಂಡವಾಳ ಹೂಡಿ ಲಾಡ್ಜ್‌, ರೆಸಾರ್ಟ್‌, ಹೋಂ ಸ್ಟೇಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಹಾಲಿಡೇ, ವೀಕ್‌ಎಂಡ್‌ಗಳಲ್ಲಿ ಜಿಲ್ಲಾ ಕೇಂದ್ರವೂ ಸೇರಿ ಮಲೆನಾಡು ತಾಲೂಕುಗಳು ಪ್ರವಾಸಿಗರಿಂದ ಗಿಜಿ ಗುಡುತ್ತಿದ್ದವು. ಆದರೆ, ಈಗ ರಸ್ತೆಗಳು ಬಿಕೋ ಎನ್ನುತ್ತಿವೆ. ಹೊಟೇಲ್‌, ಹೋಂ ಸ್ಟೇ, ಲಾಡ್ಜ್‌ಗಳು ಬಾಗಿಲು ಮುಚ್ಚಿಕೊಂಡಿವೆ. ಗಿರಿ ಪ್ರದೇಶ ಮೌನವಾಗಿದೆ. ಪ್ರವಾಸಿ ಕೇಂದ್ರಗಳಲ್ಲಿ ಅಂಗಡಿಗಳು ಬಂದ್‌ ಆಗಿದ್ದು, ಒಳಗಿದ್ದ ವಸ್ತುಗಳು ಧೂಳು ಕುಡಿಯುತ್ತಿವೆ.

ಹಾಲಿಡೇ ಸ್ಪಾಟ್‌:

ಜಿಲ್ಲೆಗೆ ಹೆಚ್ಚಿನ ಮಂದಿ ಪ್ರವಾಸಿಗರು ಆಗಮಿಸುವುದು ಶಾಲಾ-ಕಾಲೇಜುಗಳಿಗೆ ನಿರಂತರ ರಜೆ, ದಸರಾ ರಜೆ, ಕ್ರಿಸ್‌ಮಿಸ್‌ ಹಾಲಿಡೇ, ಬೇಸಿಗೆ ರಜೆ ಇದ್ದಾಗ. ಆದರೆ, ಈ ಬಾರಿ ಶಾಲೆಗಳ ಪರೀಕ್ಷೆ ಮುಗಿದು ರಜೆ ನಿರೀಕ್ಷೆಯಲ್ಲಿದ್ದ ಏಪ್ರಿಲ್‌ ಹಾಗೂ ಮೇ ತಿಂಗಳೆರಡೂ ಕೊರೋನಾ ವೈರಸ್‌ನ ಲಾಕ್‌ಡೌನ್‌ನಲ್ಲೇ ಕಳೆದು ಹೋಗಿವೆ. ಇನ್ನೂ ಮದುವೆ ಸೀಸನ್‌ನಿಂದಾಗಿ ಹೆಚ್ಚಿನ ಮದುವೆಗಳು ನಿಗದಿಯಾಗಿರುತ್ತವೆ. ಇದಕ್ಕಾಗಿ ಹಲವಾರು ಹೋಂ ಸ್ಟೇ, ಹೋಟೆಲ್‌ಗಳು ಬುಕ್‌ ಆಗುತ್ತವೆ. ಜೊತೆಗೆ ಜಿಲ್ಲೆಗೆ ಮದುವೆಗೆಂದು ಬಂದವರು ಕುಟುಂಬ ಸಮೇತ ಪ್ರವಾಸಿ ತಾಣಗಳ ವೀಕ್ಷಣೆಗೂ ಆಗಮಿಸುವುದರಿಂದ ಬೇಸಿಗೆಯಲ್ಲಿ ಎಲ್ಲ ಪ್ರವಾಸಿ ತಾಣಗಳಲ್ಲೂ ವ್ಯಾಪಾರ, ವಹಿವಾಟು ಜೋರಾಗಿರುತ್ತದೆ. ಆದರೆ, ಈ ಬಾರಿ ಅವುಗಳಿಗೆಲ್ಲ ಬ್ರೇಕ್‌ ಬಿದ್ದಿದೆ.

ಶೂನ್ಯ ಬಡ್ಡಿ ದರದಲ್ಲಿ ಡಿಸಿಸಿ ಬ್ಯಾಂಕ್‌ ಸಾಲ

ಪ್ರತಿ ವರ್ಷದಂತೆ ಈ ಬಾರಿಯೂ ಚಿಕ್ಕಮಗಳೂರು ನಗರದ ಹಲವು ಲಾಡ್ಜ್‌ಗಳು ಏಪ್ರಿಲ್‌ 26ರವರೆಗೆ ಬುಕ್‌ ಆಗಿದ್ದವು. ಲಾಕ್‌ಡೌನ್‌ನಿಂದಾಗಿ ಎಲ್ಲ ಕಾರ್ಯಕ್ರಮಗಳು ರದ್ದಾಗಿದ್ದರಿಂದ ಆನ್‌ಲೈನ್‌ ಬುಕ್ಕಿಂಗ್‌ ಮಾಡಿ ಹಣ ಕಟ್ಟಿದವರಿಗೆ ವಾಪಸ್‌ ಕೊಡಬೇಕಾಗಿದೆ ಬಂದಿದೆ. ಇದೀಗ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ ತಕ್ಷಣಕ್ಕೆ ಪ್ರವಾಸಿಗರು ಬರುವುದಿಲ್ಲ. ಪ್ರತಿ ವರ್ಷದಂತೆ ನಮ್ಮ ನಿರೀಕ್ಷೆಯಷ್ಟುಮಂದಿ ಜಿಲ್ಲೆಗೆ ಸದ್ಯಕ್ಕೆ ಆಗಮಿಸುವುದಿಲ್ಲ ಎಂದು ಕನ್ನಡಪ್ರಭದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಹೆಸರು ಹೇಳಲು ಇಚ್ಚಿಸದ ಲಾಡ್ಜ್‌ವೊಂದರ ಮಾಲೀಕ.

ನಿರ್ವಹಣೆ ಮಾಡೋದೇ ಈಗ ದುಬಾರಿ:

ಲಾಕ್‌ಡೌನ್‌ ಸಡಿಲಿಕೆ ಮಾಡಿ, ಲಾಡ್ಜ್‌, ಹೋಂ ಸ್ಟೇ, ರೆಸಾರ್ಟ್‌ ತೆರೆಯಲು ಅನುಮತಿ ಕೊಟ್ಟರೆ ಕೂಡಲೇ ಓಪೆನ್‌ ಮಾಡುವ ಸ್ಥಿತಿಯಲ್ಲಿ ಮಾಲೀಕರು ಇಲ್ಲ. ಇಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಉದ್ಯೋಗ ಅರಸಿ ತಮ್ಮ ಊರುಗಳಿಗೆ ಹೋಗಿದ್ದಾರೆ. ಅವರು ಕರೆದ ತಕ್ಷಣ ಬರುವುದು ಕಷ್ಟ. ಹೊಸ ಸಿಬ್ಬಂದಿ ನೇಮಕ ಮಾಡುವುದಾದರೆ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಶಿಕ್ಷಣ ಪಡೆದವರು ಸಿಗುವುದಿಲ್ಲ. ಪರಿಣಿತಿ ಇಲ್ಲದವರನ್ನು ಕೆಲಸಕ್ಕೆ ಸೇರಿಸಿದರೆ ಪ್ರವಾಸಿಗರೊಂದಿಗೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳದೆ ಹೋದರೆ ಉದ್ಯಮದ ಮೇಲೆ ದುಷ್ಪರಿಣಾಮ ಬೀರಲಿದೆ. ಜೊತೆಗೆ ಕಳೆದೆರಡು ತಿಂಗಳಿನಿಂದ ಬಂದ್‌ ಆಗಿದ್ದರಿಂದ ಒಳಗಿದ್ದ ವಸ್ತುಗಳೆಲ್ಲ ಧೂಳ ಹಿಡಿದು, ಕಟ್ಟಡ ಸಹ ಧೂಳು ಹಿಡಿದು ಹಳೇಯದರಂತೆ ಕಾಣಿಸುತ್ತದೆ. ಇದರ ನಿರ್ವಹಣೆಯೂ ಈಗ ದುಬಾರಿ ಎಂಬಂತಾಗಿದೆ. ಹೀಗೆ ಲಾಡ್ಜ್‌ ಮಾಲೀಕರಿಗೆ ಕೊರೋನಾ ವೈರಸ್‌ ಬೆಟ್ಟದಷ್ಟುಸಮಸ್ಯೆಯನ್ನು ತಂದು ಹಾಕಿದೆ. ಇನ್ನು ಹಲವಾರು ಹೋಟೆಲ್‌ಗಳು ಬ್ಯಾಂಕ್‌ ಸಾಲದೊಂದಿಗೆ ನಡೆದುಕೊಂಡು ಬಂದಿದ್ದು, ಇದೀಗ ಸಾಲ ಮರುಪಾವತಿ ಮಾಡಲಾಗದೆ ಕಠಿಣ ಪರಿಸ್ಥಿತಿ ಎದುರಿಸುವಂತಾಗಿದೆ. ಇಂತಹ ಸ್ಥಿತಿ ಜಿಲ್ಲೆಗೆ ಹಿಂದೆಂದೂ ಬಂದಿರಲಿಲ್ಲ.