ಮಹಾರಾಷ್ಟ್ರದ ವಾರಣಾ ಜಲಾಶಯದ ಪ್ರದೇಶದಲ್ಲಿ ಲಘು ಭೂಕಂಪ| ರಾಜ್ಯಕ್ಕಿಲ್ಲ ಜಲ ಅಪಾಯ| ಬೆಳಗಾವಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ| ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ| 

ಬೆಳಗಾವಿ(ಆ.16): ಮಹಾರಾಷ್ಟ್ರ ಜಲಾನಯನ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಮತ್ತಿತರ ನದಿಗಳ ನೀರಿನ ಒಳಹರಿವಿನ ಪ್ರಮಾಣ ಮತ್ತೆ ಗಣನೀಯವಾಗ ಏರಿಕೆಯಾಗುತ್ತಿದೆ. ಈ ನಡುವೆ ಮಹಾರಾಷ್ಟ್ರದ ವಾರಣಾ ಜಲಾಶಯದ ಪ್ರದೇಶದಲ್ಲಿ ಶನಿವಾರ ಲಘು ಭೂಕಂಪವಾಗಿದ್ದು, ಕೃಷ್ಣಾ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

ವಾರಣಾ ಜಲಾಶಯದಿಂದ 30 ಕಿಮೀ ಅಂತರದಲ್ಲಿರುವ ಚಿಕಲೆ ಗ್ರಾಮದಲ್ಲಿ ಲಘು ಭೂಕಂಪನವಾಗಿದ್ದು, ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರದ ಜಲತಜ್ಞರು ಹೇಳಿದ್ದಾರೆ. ಕೋಯ್ನಾ ಮತ್ತು ವಾರಣಾ ಜಲಾಶಯಗಳು ಭರ್ತಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭೂಕಂಪನವಾದರೆ ಎರಡೂ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಬಿಟ್ಟರೆ ಕೃಷ್ಣಾ ನದಿಗೆ ಮಹಾಪೂರ ಬರುವ ಸಾಧ್ಯತೆಗಳಿವೆ. ಹಾಗಾಗಿ, ನದಿ ತೀರದ ಗ್ರಾಮಸ್ಥರು ಭಯಭೀತಿಗೊಂಡಿದ್ದಾರೆ.

ಬೆಳಗಾವಿ: ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಮೂಕ ಪ್ರಾಣಿಗಳು ಸಜೀವ ದಹನ

ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾಶಯ, ಕೆರೆ-ಕಟ್ಟೆಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ನದಿಗಳ ನೀರಿನಮಟ್ಟಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಬೆಳಗಾವಿ ನಗರ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಚಿಕ್ಕೋಡಿ, ಅಥಣಿ ಸೇರಿದಂತೆ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಶನಿವಾರ ಬೆಳಗ್ಗೆಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆಯಿಂದಾಗಿ ಬೆಳಗಾವಿ ನಗರದ ಕೆಲವು ರಸ್ತೆಯಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕ ರಸ್ತೆ ಕೆರೆಯಂತೆ ಕಾಣುತ್ತಿದೆ. ನಗರದಲ್ಲಿ ಸಂಪೂರ್ಣವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ. ತೆಗ್ಗು ಪ್ರದೇಶಗಳಲ್ಲಿ ನಿರ್ಮಿಸಲಾದ ಮನೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ನುಗ್ಗಿದೆ. ಇದರಿಂದ ಮೇಲಿಂದ ಮೇಲೆ ಮಳೆ ನೀರು ಮನೆಯೊಳಗೆ ನುಗ್ಗುತ್ತಿರುವುದರಿಂದ ಜನಪ್ರತಿನಿಧಿಗಳ ಹಾಗೂ ಅಧಿಕಾರಿ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸತತವಾಗಿ ಮಳೆ ಸುರಿಯುತ್ತಿದ್ದು ಕಳೆದ ವರ್ಷದ ಪ್ರವಾಹದ ಭೀತಿ ಮತ್ತೆ ಉಂಟಾಗಿದೆ. ಖಾನಾಪುರ, ಬೈಲಹೊಂಗಲ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 9915 ಕ್ಯುಸೆಕ್‌ ತಲುಪಿದೆ. ಅಣೆಕಟ್ಟಿನ ಒಟ್ಟು ಎತ್ತರ 2079.5 ಅಡಿ ಸದ್ಯ 2074.60 ಅಡಿಗಳವರೆಗೆ ನೀರು ನಿಂತಿದೆ. ಅಣೆ​ಕ​ಟ್ಟೆಯ ಒಟ್ಟು ಸಾಮರ್ಥ್ಯ 37.7 ಟಿಎಂಸಿ. ಇಂದಿನವರೆಗೆ 31.196 ಟಿಎಂಸಿ ನೀರಿನ ಸಂಗ್ರಹವಾಗಿದೆ. ಅಲ್ಲದೇ ಶನಿವಾರ ಜಲಾಶಯದಿಂದ 3 ಸಾವಿರ ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಅದೇ ರೀತಿ ಘಟಪ್ರಭಾ ಜಲಾಶಯದ ಒಳಹರಿವಿನ ಪ್ರಮಾಣ 13474 ಕ್ಯುಸೆಕ್‌ ತಲುಪಿದೆ. ಒಟ್ಟು ಆಣೆಕಟ್ಟಿನ ಎತ್ತರ 2175, 51.00 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ 2172.80 ಅಡಿ, 49.35 ಟಿಎಂಸಿ ನೀರು ಸಂಗ್ರಹವಾಗಿದೆ. 15366 ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದೇ ರೀತಿ ಮಳೆಯ ಅರ್ಭಟ ಮುಂದುವರಿದರೆ ಅಣೆ​ಕಟ್ಟೆಭರ್ತಿಯಾಗಲಿದೆ. ಕೃಷ್ಣಾ ನದಿಗೆ ಒಳಹರಿವು ಆರಂಭವಾದರೆ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ.