ವಿಜಯಪುರ, ಕೊಡಗು ಸುತ್ತ ಮತ್ತೆ ಭೂಕಂಪನ: ರಿಕ್ಟರ್‌ನಲ್ಲಿ 2.4ರಷ್ಟು ತೀವ್ರತೆ
ಪದೇ ಪದೇ ಭೂಕಂಪವಾಗುವ ವಿಜಯಪುರ ಮತ್ತು ಕಳೆದ ಕೆಲ ವರ್ಷಗಳಿಂದ ನಿರಂತರ ಪ್ರಕೃತಿ ವಿಕೋಪಕ್ಕೀಡಾಗುತ್ತಿರುವ ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಮತ್ತೆ ಭೂಕಂಪನವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ವಿಜಯಪುರ/ಮಡಿಕೇರಿ (ಜೂ.26): ಪದೇ ಪದೇ ಭೂಕಂಪವಾಗುವ ವಿಜಯಪುರ ಮತ್ತು ಕಳೆದ ಕೆಲ ವರ್ಷಗಳಿಂದ ನಿರಂತರ ಪ್ರಕೃತಿ ವಿಕೋಪಕ್ಕೀಡಾಗುತ್ತಿರುವ ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಮತ್ತೆ ಭೂಕಂಪನವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ವಿಜಯಪುರ ನಗರದ ಹಲವೆಡೆ ಶುಕ್ರವಾರ ರಾತ್ರಿ ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ 2.4 ತೀವ್ರತೆ ದಾಖಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೆಲವೆಡೆ ಬೆಳಗ್ಗೆ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 2.3 ದಾಖಲಾಗಿದೆ.
ವಿಜಯಪುರ ನಗರದ ರೈಲ್ವೆ ಸ್ಟೇಶನ್ ಪ್ರದೇಶ, ಕೀರ್ತಿನಗರ, ಅಲ್-ಅಮಿನ್ ಪ್ರದೇಶ ಸೇರಿದಂತೆ ಸುಮಾರು 4 ಕಿ.ಮೀ. ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ 10.38ಕ್ಕೆ ಭೂಕಂಪನವಾಗಿದೆ. ಭೂಮಿ ನಡಗುತ್ತಿದ್ದಂತೆಯೇ ಭಯಂಕರ ಸದ್ದು ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ರಾತ್ರಿ 10.46ಕ್ಕೆ ಭೂಮಿ ಕಂಪನವಾಗಿದ್ದು ಜನರು ಗಾಬರಿಯಿಂದ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಮನಗೂಳಿ ಹಾಗೂ ವಿಜಯಪುರದಲ್ಲಿ ಮೂರು ತಿಂಗಳ ಹಿಂದೆಯೂ ಭೂಕಂಪನವಾಗಿತ್ತು. ಈಗ ಮತ್ತೆ ಭೂಕಂಪನವಾಗಿದ್ದು ಜನರು ಆತಂಕ ಪಡುವಂತಾಗಿದೆ.
ಮಂಗಳೂರು: ಸುಳ್ಯದಲ್ಲೂ ಕಂಪಿಸಿದ ಭೂಮಿ, ಗೋಡೆಗಳಲ್ಲಿ ಬಿರುಕು..!
ಇನ್ನು ಮಡಿಕೇರಿ ತಾಲೂಕಿನ ಕರಿಕೆ, ಸಂಪಾಜೆ, ಚೆಂಬು ಮತ್ತಿತರ ಕಡೆಗಳಲ್ಲಿ ಶನಿವಾರ ಬೆಳಗ್ಗೆ 9.10ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಪಟ್ಟಿಘಾಟ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಭಾರಿ ಶಬ್ದದ ಹಿನ್ನೆಲೆ ಜನರು ಭಯಭೀತರಾಗಿದ್ದಾರೆ. ಸಂಪಾಜೆ, ಚೆಂಬು, ಗೂನಡ್ಕ ಗ್ರಾಮಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 2 ದಿನಗಳ ಹಿಂದೆಯೂ ಕೊಡಗಿನ ದೇವಸ್ತೂರು, ನೇಗಳ್ಳೆ ಹಾಗೂ ಸುತ್ತಮುತ್ತಲಿನ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿತ್ತು.
ಅಫ್ಘಾನಿಸ್ತಾನ ಬಳಿಕ ಹಾಸನದಲ್ಲೂ ಭೂಕಂಪನ: ಬೆಚ್ಚಿಬಿದ್ದ ಜನತೆ
ಭಯಪಡುವ ಅಗತ್ಯವಿಲ್ಲ: ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಿಂದ 4.7 ಕಿ.ಮೀ. ವಾಯುವ್ಯ ದಿಕ್ಕಿನಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.3 ದಾಖಲಾಗಿದೆ. ಹಾಗೆಯೇ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರದ ಪ್ರಕಾರ ಕೊಡಗು ಜಿಲ್ಲೆಗೆ ಹೊಂದಿಕೊಂಡ ಸುಳ್ಯ ತಾಲೂಕಿನಲ್ಲಿ ರಿಕ್ಟರ್ ಮಾಪಕ 2.8ರಷ್ಟುಭೂಕಂಪನ ಆಗಿರುವುದಾಗಿ ಅವರ ಅಂತರ್ಜಾಲ ತಾಣದ ಮುಖಾಂತರ ಮಾಹಿತಿ ನೀಡಿದ್ದಾರೆ. ಈ ಭೂಕಂಪನದಲ್ಲಿ ಯಾರಿಗೂ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕೆಲವು ಸೆಕೆಂಡ್‌ಗಳಷ್ಟುಸಮಯ ಕಂಪನದ ಅನುಭವವಾಗಿದೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ ವಸ್ತು ಅಲುಗಾಡಬಹುದು ಎಂದು ಕೇಂದ್ರ ತಿಳಿಸಿದೆ.