ಗಿರೀಶ್‌ ಮಾದೇನಹಳ್ಳಿ

 ಬೆಂಗಳೂರು [ಫೆ.29]:  ತಮಗೆ ಹಿರಿಯ ಐಪಿಎಸ್‌ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ದೂರು ನೀಡಿದ್ದು, ನನ್ನ ನೋವಿಗೆ ಸ್ಪಂದಿಸದೆ ಹೋದರೆ ಸರ್ಕಾರಿ ಸೇವೆಯ ವಿದಾಯ ಪತ್ರಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿದ್ದಾರೆ.

ಸಿಐಡಿಯ ಕ್ರಿಮಿನಲ್‌ ಇನ್ವೆಸ್ಟಿಗೇಷನ್‌ ಯೂನಿಟ್‌ನ(ಸಿಐಯು) ಮಂಗಳೂರು ವಿಭಾಗದ ಡಿವೈಎಸ್ಪಿ ರತ್ನಾಕರ್‌ ನೊಂದ ಅಧಿಕಾರಿ ಆಗಿದ್ದು, ಎರಡು ದಿನಗಳ ಹಿಂದೆ ಮುಖ್ಯಕಾರ್ಯದರ್ಶಿಗಳ ಕಚೇರಿಗೆ ತೆರಳಿ ಅವರು ದೂರು ಸಲ್ಲಿಸಿದ್ದಾರೆ. ಈ ದೂರಿಗೆ ಹದಿನೈದು ದಿನಗಳ ಸಮಯವನ್ನು ಅವರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆರು ವರ್ಷಗಳ ಹಿಂದೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ನಡೆದಿದ್ದ ಅಪಘಾತ ಪ್ರಕರಣವನ್ನು ಮುಂದಿಟ್ಟು ತೊಂದರೆ ಕೊಡುತ್ತಿದ್ದಾರೆ. ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಲಾಗಿದೆ. ನಾನು ತಪ್ಪು ಮಾಡದೆ ಹೋದರೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಡಿವೈಎಸ್ಪಿ ರತ್ನಾಕರ್‌ ಆರೋಪಿಸಿದ್ದಾರೆ.

ಈ ಮನವಿಯನ್ನು ಸ್ವೀಕರಿಸಿರುವ ಮುಖ್ಯಕಾರ್ಯದರ್ಶಿಗಳ ಕಚೇರಿ, ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಡಿವೈಎಸ್ಪಿ ಮಾಡಿರುವ ಆರೋಪಗಳ ಕುರಿತು ಮಾಹಿತಿ ಕೋರಿದ್ದಾರೆ. ಈ ಪತ್ರದಲ್ಲಿ ಡಿಜಿಪಿ, ಎಡಿಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಮೇಲೆಯೇ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ ಎಂದು ಗೊತ್ತಾಗಿದೆ.

1990ರ ಬ್ಯಾಚ್‌ ಅಧಿಕಾರಿ ಆಗಿರುವ ರತ್ನಾಕರ್‌ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರ, ಆನವಟ್ಟಿ, ಬೆಂಗಳೂರಿನ ಚಾಮರಾಜಪೇಟೆ, ಅಶೋಕರ ನಗರ ಸೇರಿದಂತೆ ವಿವಿಧದೆಡೆ ಸೇವೆ ಸಲ್ಲಿಸಿದ್ದರು. 2015ರಲ್ಲಿ ಅವರಿಗೆ ಡಿವೈಎಸ್ಪಿ ಆಗಿ ಮುಂಬಡ್ತಿ ನೀಡಿದ ಸರ್ಕಾರವು, ಸಿಐಡಿಗೆ ವರ್ಗಾಯಿಸಿತು. ಐದು ವರ್ಷಗಳಿಂದ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರತ್ನಾಕರ್‌, ಪ್ರಸುತ್ತ ಮಂಗಳೂರಿನ ಸಿಐಯು ವಿಭಾಗದ ಡಿವೈಎಸ್ಪಿ ಆಗಿದ್ದಾರೆ.

 .ಅಪಘಾತದ ವಿಷಯಕ್ಕೆ ಮನಸ್ತಾಪ

2013ರ ಜೂನ್‌ನಲ್ಲಿ ಬೆಂಗಳೂರಿನ ಎಂ.ಜಿ.ರಸ್ತೆಯ ಟ್ರಿನಿಟಿ ವೃತ್ತದ ಹತ್ತಿರ ಆಡಿ ಕಾರು ಅಪಘಾತಕ್ಕೀಡಾಗಿ ರಾಬರ್ಟ್‌ ಎಂಬ ಯುವಕ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ರಾಜಕೀಯ ಮುಖಂಡರೊಬ್ಬರ ಪುತ್ರನ ಬಂಧನವಾಗಿತ್ತು. ಈ ಪ್ರಕರಣದಲ್ಲಿ ಘಟನಾ ಸ್ಥಳಕ್ಕೆ ತಡವಾಗಿ ತೆರಳಿದ ಹಾಗೂ ತನಿಖೆಯಲ್ಲಿ ಲೋಪವೆಸಗಿದ ಆರೋಪದ ಮೇರೆಗೆ ಅಂದಿನ ಅಶೋಕ ನಗರ ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ರತ್ನಾಕರ್‌ ಅವರನ್ನು ಹೆಚ್ಚುವರಿ ಆಯುಕ್ತರ ವರದಿ ಮೇರೆಗೆ ಆಯುಕ್ತರು ಅಮಾನತುಗೊಳಿಸಿದ್ದರು. ಒಂದು ತಿಂಗಳ ಬಳಿಕ ಅವರನ್ನು ಮತ್ತೆ ಅದೇ ಠಾಣೆಗೆ ಆಯುಕ್ತರು ನಿಯೋಜಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರ ಜತೆ ರತ್ನಾಕರ್‌ ಮನಸ್ತಾಪವಾಯಿತು ಎಂಬ ಮಾತುಗಳು ಕೇಳಿ ಬಂದಿವೆ.

ಅಪಘಾತ ನಡೆದ ಕೂಡಲೇ ಸ್ಥಳಕ್ಕೆ ಹೋಗಿ ಕಾನೂನು ರೀತ್ಯ ಕ್ರಮ ತೆಗೆದುಕೊಂಡಿದ್ದೆ. ಆದಾಗ್ಯೂ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು. ಅಮಾನತು ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲಾಯಿತು. ಇದೇ ಪ್ರಕರಣ ಮುಂದಿಟ್ಟು ಮುಂಬಡ್ತಿಗೆ ಸಹ ಅಡ್ಡಪಡಿಸಿದ್ದರು. ಹೈಕೋರ್ಟ್‌ ಆದೇಶದ ಮೇರೆಗೆ ಮುಂಬಡ್ತಿ ಸಿಕ್ಕಿತು. ಮತ್ತೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಎರಡು ಬಾರಿ ಹಿಂಬಡ್ತಿಯನ್ನು ಅಧಿಕಾರಿಗಳು ನೀಡಿದ್ದರು. ಇದಕ್ಕೆ ಕೆಲ ಐಪಿಎಸ್‌ ಅಧಿಕಾರಗಳ ಚಿತಾವಣೆ ಕಾರಣವಾಗಿದೆ ಎಂದು ರತ್ನಾಕರ್‌ ದೂರಿನಲ್ಲಿ ಆರೋಪಿಸಿರುವುದಾಗಿ ಗೃಹ ಇಲಾಖೆಯ ಮೂಲಗಳು ಹೇಳಿವೆ.
 
11 ಪ್ರಶ್ನೆಗಳಿಗೆ ಉತ್ತರಿಸಿ, ಇಲ್ಲ ವಿದಾಯ

ಐದು ವರ್ಷಗಳಿಂದ ಹಿರಿಯ ಕೆಲ ಐಪಿಎಸ್‌ ಅಧಿಕಾರಿಗಳು ನಿರಂತರವಾಗಿ ತೊಂದರೆ ಕೊಟ್ಟಿದ್ದಾರೆ. ಇದರಿಂದ ಮಾನಸಿಕವಾಗಿ ಘಾಸಿಕೊಂಡಿದ್ದೇನೆ. ನಾನು ಮಾಡಿರುವ ತಪ್ಪೇನು ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿ ನಾನು 11 ಪ್ರಶ್ನೆಗಳನ್ನು ಮುಂದಿಟ್ಟು, ಇವುಗಳಿಗೆ ಉತ್ತರ ಬಯಸುತ್ತೇನೆ. ನೀವು ಪ್ರತಿಕ್ರಿಯಸದೆ ಹೋದರೆ ಸೇವೆಗೆ ವಿದಾಯ ಹೇಳುತ್ತೇನೆ ಎಂದು ಡಿವೈಎಸ್ಪಿ ರತ್ನಾಕರ್‌ ತಿಳಿಸಿರುವುದಾಗಿ ಗೃಹ ಇಲಾಖೆ ಮೂಲಗಳು ಹೇಳಿವೆ.