ಬೆಳಗ್ಗೆ 9ರಿಂದ ರಾತ್ರಿ 10ಗಂಟೆವರೆಗೆ ವಾಹನ ನಿರ್ಬಂಧ| ಗ್ರಾಹಕ ಸ್ನೇಹಿ ರಸ್ತೆಯಾಗಿಸಲು ಸ್ಮಾರ್ಟ್‌ಸಿಟಿ ಚಿಂತನೆ| ವ್ಯಾಪಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಒತ್ತಾಯ| ವ್ಯಾಪಾರಸ್ಥರಿಗೆ ಸರಕು ಸಾಗಿಸಲು ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುವ ಉದ್ದೇಶದಿಂದ ರಾತ್ರಿಯಿಂದ ಬೆಳಗ್ಗೆವರೆಗೆ ಅವಕಾಶ|
ಮಯೂರ ಹೆಗಡೆ
ಹುಬ್ಬಳ್ಳಿ(ಫೆ.03): ನಗರದ ದುರ್ಗದಬೈಲು ಮಾರುಕಟ್ಟೆಯನ್ನು ಭವಿಷ್ಯದಲ್ಲಿ ವಾಹನ ಮುಕ್ತ ಪ್ರದೇಶವಾಗಿಸಲು ಸ್ಮಾರ್ಟ್‌ಸಿಟಿ ಯೋಜಿಸಿದೆ. ಸದಾ ಜನದಟ್ಟಣೆಯಿಂದ ಕೂಡಿರುವ ಈ ಪ್ರದೇಶದಲ್ಲಿ, ಎಲ್ಲ ಬಗೆಯ ವಾಹನಗಳ ಓಡಾಟದಿಂದ ಮತ್ತಷ್ಟು ಸಂಚಾರ ಕಿರಿಕಿರಿ ಆಗುತ್ತಿದೆ. ಒನ್‌ವೇ ವ್ಯವಸ್ಥೆ ಇದ್ದರೂ ಸಮಸ್ಯೆ ತಪ್ಪಿಲ್ಲ. ಹಬ್ಬದ ಸಂದರ್ಭ ಜನತೆ ಸಾಕಷ್ಟು ತೊಂದರೆ
ಅನುಭವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕಸ್ನೇಹಿ ರಸ್ತೆಯಾಗಿಸಲು ಎಚ್‌ಡಿಎಸ್‌ಸಿಎಲ್ ದುರ್ಗದಬೈಲನ್ನು ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲು (ನಾನ್ ಮೊಟರೈಸ್ಡ್ ಟ್ರಾಫಿಕ್ ಜೋನ್) ಚಿಂತಿಸಿದೆ. ಸ್ಮಾರ್ಟ್‌ಸಿಟಿ ಯೋಜನೆಯ ಎರಡನೇ ಹಂತದ ರಸ್ತೆ ಪ್ಯಾಕೆಜ್‌ನಲ್ಲಿರುವ ಸ್ಟೇಷನ್ ರಸ್ತೆ, ಕೊಪ್ಪಿಕರ ರಸ್ತೆ ಸೇರಿ ಇತರ ಉಪರಸ್ತೆಗಳ ನಿರ್ಮಾಣ ಸುಮಾರು 50 ಕೋಟಿ ರು. ವೆಚ್ಚದಲ್ಲಿ ನಡೆಯಲಿದೆ. ಒಂದು ವರ್ಷದಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಈ ಯೋಜನೆಯಲ್ಲಿನ ಕೊಪ್ಪಿಕರ ರಸ್ತೆಯಿಂದ ದುರ್ಗದಬೈಲ್ ರಸ್ತೆವರೆಗೆ 1.4 ಕಿಮೀ ರಸ್ತೆ ಪೂರ್ಣಗೊಂಡ ಬಳಿಕ ಎನ್‌ಎಂಟಿ ಝೋನ್ ಜಾರಿಗೊಳಿಸಲು ಮುಂದಾಗಿದೆ.
ಶಹರ ಪೊಲೀಸ್ ಠಾಣೆ, ಶಾ ಬಝಾರ್ ಪ್ರವೇಶದ ಬಳಿ ಹಾಗೂ ಸವಿತಾ ಹೊಟೆಲ್ ಬಳಿ ಸೇರಿದಂತೆ ಇತರೆಡೆ ವಾಹನ ಪ್ರವೇಶ ನಿರ್ಬಂಧಿಸಲು 3 ಅಡಿ ಎತ್ತರದ ಹೈಡ್ರಾಲಿಕ್ಸ್ ಪೈಪ್‌ಗಳನ್ನು ಅಳವಡಿಸಲಾಗುವುದು. ಇದರಿಂದ ಪಾದಚಾರಿಗಳು ಮಾತ್ರ ಹೋಗಿಬರುವಂತಾಗಲಿದೆ. ಹಗಲಿನ ವೇಳೆ ಅಂದರೆ, ಬೆಳಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಇವು ಇರಲಿವೆ. ವ್ಯಾಪಾರಸ್ಥರಿಗೆ ಸರಕು ಸಾಗಿಸಲು ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುವ ಉದ್ದೇಶದಿಂದ ರಾತ್ರಿಯಿಂದ ಬೆಳಗ್ಗೆವರೆಗೆ ಅವಕಾಶ ನೀಡಲಾಗುವುದು ಎಂದು ಎಚ್‌ಡಿಎಸ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
'ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರೆಲ್ಲ ಮುಂದೆ ಪಶ್ಚಾತ್ತಾಪ ಪಡ್ತಾರೆ'
‘ಸ್ಮಾರ್ಟ್ ರಸ್ತೆಯಲ್ಲಿ ಫುಟ್‌ಪಾತ್ ಸೇರಿ ಉತ್ತಮ ವ್ಯವಸ್ಥೆ ಇರಲಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಮಹಾನಗರ ಪಾಲಿಕೆ, ಪೊಲೀಸ್ ಕಮೀಷನರೆಟ್ ಸಹಯೋಗದಲ್ಲಿ ವಾಹನಗಳನ್ನು ನಿರ್ಬಂಧಿಸುವ ಬಗ್ಗೆ ಮಾತನಾಡಲಾಗುವುದು. ಗ್ರಾಹಕರಿಗೆ ಕಿರಿಕಿರಿ ಆಗದಿರಲು, ಆರಾಮವಾಗಿ ನಡೆದುಕೊಂಡು ಖರೀದಿ ಮಾಡುವಂತಾಗಲು ಈ ಕ್ರಮಕ್ಕೆ ಮುಂದಾಗಿದ್ದೇವೆ. ಅಲ್ಲದೆ, ರಸ್ತೆಯಲ್ಲಿ ಕಲಾಪ್ರದರ್ಶನಕ್ಕೂ ಅವಕಾಶ ಇರಲಿದೆ’ ಎಂದು ಸ್ಮಾರ್ಟ್‌ಸಿಟಿ ವಿಶೇಷ ಕರ್ತವ್ಯಾಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದರು.
ವ್ಯಾಪಾರಕ್ಕೆ ತೊಂದರೆ
ಆದರೆ, ಸಂಪೂರ್ಣ ವಾಹನಗಳ ನಿರ್ಬಂಧ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು. ವಸ್ತುಗಳನ್ನು ಖರೀದಿಸಿ ನಡೆಯುವುದು ಗ್ರಾಹಕರಿಗೆ ತೊಂದರೆ ಆಗಬಹುದು. ಸನಿಹದ ಜಿಲ್ಲೆಗಳ ಚಿಕ್ಕ ವ್ಯಾಪಾರಸ್ಥರು ಇಲ್ಲಿನ ಬಟರ್ ಮಾರ್ಕೆಟ್, ಶಾ ಬಜಾರ್‌ನಿಂದ ಹೋಲ್‌ಸೆಲ್ ವಸ್ತುಗಳ ಖರೀದಿಗೆ ಬರುವುದರಿಂದ ಅವರಿಗೂ ಸಮಸ್ಯೆ ಆಗಬಹುದು. ಈಗಾಗಲೆ ಇಲ್ಲಿ ಆಟೋರಿಕ್ಷಾ ಸ್ಟ್ಯಾಂಡ್ ಕೂಡ ಇದೆ. ಕನಿಷ್ಠ ದ್ವಿಚಕ್ರ ವಾಹನಕ್ಕೆ ಅವಕಾಶವಾದರೂ ಇರಬೇಕು. ಇಲ್ಲವೆ, ಸನಿಹವೆ ಪಾರ್ಕಿಂಗ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂಬ ಭಿನ್ನ ಅಭಿಪ್ರಾಯವನ್ನು ಕೂಡ ಜನತೆ ವ್ಯಕ್ತಪಡಿಸಿದ್ದಾರೆ.
ಕೊಪ್ಪಿಕರ್ ರಸ್ತೆಯಿಂದ ದುರ್ಗದಬೈಲ್ ರಸ್ತೆವರೆಗೆ ಸ್ಮಾರ್ಟ್‌ರಸ್ತೆ ನಿರ್ಮಾಣವಾದ ಬಳಿಕ ದುರ್ಗದಬೈಲನ್ನು ವಾಹನ ಸಂಚಾರದಿಂದ ಮುಕ್ತಗೊಳಿಸುವ ಯೋಚನೆ ಇದೆ ಎಂದು ಹುಬ್ಬಳ್ಳಿ ಸ್ಮಾರ್ಟ್‌ಸಿಟಿ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ.
ಉತ್ತಮ ಯೋಜನೆಯೇ. ಆದರೆ, ಎಲ್ಲ ವಾಹನಗಳನ್ನೂ ನಿರ್ಬಂಧಿಸಿದರೆ ಅದು ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು. ಕಾರು, ಲಾರಿಗಳನ್ನು ನಿರ್ಬಂಧಿಸಿ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡುವುದು ಒಳಿತು ಎಂದು ಉಪ್ಪೂರು ಅನಂತರಾಜ ಮೇಲಾಂಟ ಅವರು ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 3, 2021, 10:37 AM IST