ಹುಬ್ಬಳ್ಳಿ(ಜು.20): ನಗರದ ಕಿಮ್ಸ್‌ನಲ್ಲಿ ಮತ್ತೊಂದು ಯಡವಟ್ಟಾಗಿದ್ದು, ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರ ಟೀಕೆಗೆ ಒಳಗಾಗಿದ್ದಾರೆ. ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಯನ್ನು ಸ್ಟ್ರೆಚರ್‌ನಲ್ಲಿ ಕೂರಿಸಿಕೊಂಡು ಹೋದರೂ ಯಾರೊಬ್ಬರೂ ನೆರವಿಗೆ ಧಾವಿಸಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳ ನೆರವಿಗೆ ಸಿಬ್ಬಂದಿಗಳನ್ನು ನೇಮಿಸಿದ್ದರೂ ಬಾಲಕಿಯ ಸಹಾಯಕ್ಕೆ ಯಾವ ಸಿಬ್ಬಂದಿಯೂ ಬಂದಿಲ್ಲ.

"

ಬಾಲಕಿ ಸ್ಟ್ರೇಚರ್ ಮೇಲೆ ತನ್ನ ತಂದೆಯನ್ನು ಕೂರಿಸಿಕೊಂಡು ಚಿಕಿತ್ಸೆಗೆ ಕರೆದುಕೊಂಡು ಹೋದರೂ ಸಿಬ್ಬಂದಿ ನೆರವಿಗೆ ಬರದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವನ್ನುಂಟುಮಾಡಿದೆ.

ನಾಗರಾಜ ಎಂಬುವವರಿಗೆ ಕಾಲುನೋವು ಆಗಿತ್ತು. ಅವರನ್ನು ಕಳೆದ ಎರಡು ದಿನಗಳ ಹಿಂದೆ 201 ವಾರ್ಡ್‌ನಲ್ಲಿ ದಾಖಲಿಸಲಾಗಿತ್ತು. ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಶುಕ್ರವಾರ ಸಿಟಿ ಸ್ಕ್ಯಾನ್ ಮಾಡಿಸುವಂತೆ ವೈದ್ಯರು ತಿಳಿಸಿದ್ದರು. ಆದರೆ, 201 ವಾರ್ಡ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ್ಯಾರು ನೆರವಿಗೆ ಬಾರದ ಕಾರಣ ನಾಗರಾಜ ಅವರ ಪತ್ನಿ ಹಾಗೂ 5 ವರ್ಷದ ಮಗಳು ಇಬ್ಬರು ಸೇರಿಕೊಂಡು ಸ್ಟ್ರೆಚರ್‌ ಮೇಲೆ ಕೂರಿಸಿಕೊಂಡು ಸಿಟಿ ಸ್ಕ್ಯಾನ್ ವಿಭಾಗಕ್ಕೆ ತಳ್ಳಿಕೊಂಡು ಬಂದರು.

ವಿಡಿಯೋ ನೋಡಿ ಎಚ್ಚೆತ್ತ ಸಿಬ್ಬಂದಿ:

ಮುಂದೆ ಸ್ಟ್ರೇಚರ್‌ನ್ನು ಪತ್ನಿ ಹಿಡಿದುಕೊಂಡು ಹೋಗುತ್ತಿದ್ದರೆ, ಹಿಂದುಗಡೆಯಿಂದ ಬಾಲಕಿ ತಳ್ಳಿಕೊಂಡು ಹೋಗುತ್ತಿತ್ತು. ಇದನ್ನು ಅಲ್ಲಿದ್ದ ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುತ್ತಲೇ ನಿಮ್ಮ ನೆರವಿಗೆ ಯಾರೂ ಬರಲಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾಗ ಇಲ್ಲ ಎಂದು ತಾಯಿ, ಹಾಗೂ ಮಹಿಳೆ ಉತ್ತರಿಸಿದ್ದಾರೆ. ಇದನ್ನೆಲ್ಲ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ಮಾಡಿಕೊಳ್ಳುತ್ತಿದ್ದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಬಳಿಕ ರೋಗಿಯ ನೆರವಿಗೆ ಬರಲು ಮುಂದಾಗಿದ್ದಾರೆ.

ವೈದ್ಯಾಧಿಕಾರಿ ವಿರುದ್ಧ ಜಾತಿ ನಿಂದನೆ ದೂರು

ಸ್ವಚ್ಛತೆಯೂ ಇಲ್ಲ:

ಸಾರ್ವಜನಿಕರು ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಎಲ್ಲಿಯೂ ಸ್ವಚ್ಛತೆ ಎಂಬುದೇ ಇಲ್ಲ. ಈ ಬಗ್ಗೆ ಹಲವಾರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಕಿಮ್ಸ್ ಆಸ್ಪತ್ರೆಗೆ ಬರುವುದು ಬರೀ ಬಡವರೇ ಆದರೆ, ಬಡವರಿಗೆ ಇಲ್ಲಿ ಸೌಲಭ್ಯವೇ ಸಿಗಲ್ಲ ಎಂದೆಲ್ಲ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋ ವೈರಲ್:

ಪುಟ್ಟ ಬಾಲಕಿ ತನ್ನ ತಂದೆಯನ್ನು ಸ್ಟ್ರೇಚರ್ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕಿಮ್ಸ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.